5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ನಮ್ಮ ಹೆಮ್ಮೆ: ಟಿ.ಬಿ. ಜಯಚಂದ್ರ

| Published : Feb 10 2024, 01:50 AM IST

5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ನಮ್ಮ ಹೆಮ್ಮೆ: ಟಿ.ಬಿ. ಜಯಚಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಕೇವಲ 8 ತಿಂಗಳಿನಲ್ಲಿಯೇ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಜಾರಿ ಮಾಡಿದೆ. ಇದು ನಮ್ಮ ಹೆಮ್ಮೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದರು.

ಶಾಸಕ ಟಿ.ಬಿ. ಜಯಚಂದ್ರ ಅಭಿಮತ । ಗ್ಯಾರಂಟಿ ಯೋಜನೆಗಳ ಸಮಾವೇಶ

ಕನ್ನಡಪ್ರಭ ವಾರ್ತೆ ಶಿರಾ

ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಕೇವಲ 8 ತಿಂಗಳಿನಲ್ಲಿಯೇ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಜಾರಿ ಮಾಡಿದೆ. ಇದು ನಮ್ಮ ಹೆಮ್ಮೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ತಾಲೂಕು ಆಡಳಿತ, ತಾ.ಪಂ, ನಗರಸಭೆ ಹಾಗೂ ವಿವಿಧ ಇಲಾಖೆಗಳ ಗ್ಯಾರಂಟಿ ಯೋಜನೆಗಳ ಸಮಾವೇಶ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು. ಭಾರತ ದೇಶದ ಇತಿಹಾಸದಲ್ಲಿ ಗ್ಯಾರಂಟಿ ಯೋಜನೆ ಐತಿಹಾಸಿಕ ಕಾರ್ಯಕ್ರಮವಾಗಿದೆ. ಶಿರಾ ತಾಲೂಕಿಗೆ ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆಯಲ್ಲಿ ಒಟ್ಟು 117.03 ಕೋಟಿ ರು.ಗಳು ಫಲಾನುಭವಿಗಳಿಗೆ ಆರ್ಥಿಕ ಸೌಲಭ್ಯ ದೊರಕಿದೆ. ಬಡವರಿಗೆ, ಅಶಕ್ತರಿಗೆ ನೇರವಾಗಿ ಸರ್ಕಾರದ ಸವಲತ್ತು ಸಿಗುತ್ತಿರುವುದು ನಮ್ಮ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಗೃಹ ಲಕ್ಷ್ಮಿ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು74436 ಮಹಿಳಾ ಫಲಾನುಭವಿಗಳಿಗೆ 69.08 ಕೋಟಿ ರು. ಜಮಾ ಆಗಿದೆ. ಅನ್ನಭಾಗ್ಯ ಯೋಜನೆಯಡಿ ಒಟ್ಟು 416754 ಫಲಾನುಭವಿಗಳಿಗೆ 24.10 ಕೋಟಿ ರು, ಶಕ್ತಿ ಯೋಜನೆಯಡಿ 3959129 ಮಹಿಳೆಯರು ಪ್ರಯಾಣಿಸಿದ್ದು 14.23 ಕೋಟಿ ರು. ಪಾವತಿಯಾಗಿದೆ. ಗೃಹ ಜ್ಯೋತಿ ಯೋಜನೆಯಡಿ 316999 ಮನೆಗಳಿಗೆ ಒಟ್ಟು 9.71 ಕೋಟಿ ರು. ಹಣ ನೀಡಲಾಗಿದೆ. ಒಟ್ಟು 117.03 ಕೋಟಿ ರು. ಹಣ ನೀಡಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬಡವರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಆಹಾರ ಭದ್ರತೆ ಕಾನೂನು ತಂದ ಪಲವಾಗಿ ರಾಜ್ಯ ಸರ್ಕಾರಗಳು ೫ ಕೆಜಿ ಅಕ್ಕಿ ನೀಡುತ್ತಿವೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ೫ ಕೆಜಿ ಅಕ್ಕಿ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡದೆ ಈಗ ಭಾರತ್ ರೈಸ್ ಎಂಬ ಹೆಸರಿನಲ್ಲಿ ೨೯ ರು. ಗೆ ಅಕ್ಕಿ ಕೊಡುತ್ತಿದೆ. ಅದರಲ್ಲೂ ರಾಜಕೀಯ ಮಾಡುತ್ತಿದೆ ಎಂದರು.

ಶೀಘ್ರದಲ್ಲಿಯೇ ತಾಲೂಕಿನಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ನಿವೇಶನ ನೀಡಲಾಗುವುದು. ಇದರಲ್ಲಿ ಎಲ್ಲಾ ಅರ್ಹ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನಿವೇಶನ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ ಬರದ ಛಾಯೆ ಇದ್ದು ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಗೃಹಲಕ್ಷ್ಮೀ, ಶಕ್ತಿ ಯೋಜನೆ ನೀಡಿರುವುದರಿಂದ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ. ಎಲ್ಲಾ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಸುಮಾರು ೬ ಸಾವಿರ ರು.ಗಳ ಸೌಲಭ್ಯ ದೊರೆಯುತ್ತದೆ. ಇದರಿಂದ ಬರಗಾಲದಲ್ಲೂ ನೆಮ್ಮದಿ ಜೀವನ ನಡೆಸಬಹುದು ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ದತ್ತಾತ್ರೇಯ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ಪೌರಾಯುಕ್ತ ರುದ್ರೇಶ್, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಾಂತರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ರಾಜಾನಾಯ್ಕ, ಸಹಾಯಕ ಕೃಷಿ ನಿರ್ದೇಶಕ ಎಚ್‌. ನಾಗರಾಜು, ಬಗರ್‌ ಹುಕುಂ ಕಮಿಟಿ ಸದಸ್ಯ ಮದ್ದಕ್ಕನಹಳ್ಳಿ ತಿಪ್ಪಣ್ಣ, ತಾ.ಪಂ. ಮಾಜಿ ಸದಸ್ಯ ಪಿ.ಬಿ. ನರಸಿಂಹಯ್ಯ, ಆಶ್ರಯ ಸಮಿತಿ ಸದಸ್ಯ ನೂರುದ್ದಿನ್, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಜರಿದ್ದರು.ಫೋಟೊ

ನಗರದ ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಸಮಾವೇಶ ಕಾರ್ಯಕ್ರಮವನ್ನು ಶಾಸಕ ಟಿ.ಬಿ. ಜಯಚಂದ್ರ ಉದ್ಘಾಟಿಸಿದರು.