ಸಾರಾಂಶ
ಕೊಪ್ಪಳ: ಸರ್ಕಾರಿ ನೌಕರರ ಒಗ್ಗಟ್ಟು ಮತ್ತು ಸಂಘಟನಾತ್ಮಕ ಪ್ರಯತ್ನದ ಫಲವಾಗಿ ಏಳನೇ ವೇತನ ಆಯೋಗವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ.
ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ನಡೆದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಚಾಲನೆ ನೀಡಿ, ನಂತರ ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದರು.ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಸುಮ್ಮನೇ ಸಿಕ್ಕಿಲ್ಲ. ಅದಕ್ಕಾಗಿ ಸರ್ಕಾರಿ ನೌಕರರ ಸಂಘದ ಪ್ರಯತ್ನ ಅಷ್ಟಿಷ್ಟಲ್ಲ ಎಂದರು. ಸರ್ಕಾರ ಕೊಡಲು ಹಿಂದೇಟು ಹಾಕಿದ ವೇಳೆಯಲ್ಲಿ ರಾಜ್ಯಾದ್ಯಂತ ನನ್ನ ನೌಕರ ಬಂಧುಗಳು ಹೋರಾಟವನ್ನು ಪ್ರಾರಂಭಿಸಿದರು. ಶಾಸಕರು, ಸಚಿವರಿಗೆ ಮನವಿ ನೀಡುವ ಮೂಲಕ ಒತ್ತಡ ಹಾಕಿದರು. ಇದಾದ ಮೇಲೆ ನಾವು ಹೋರಾಟದ ದಿನಾಂಕವನ್ನು ನಿಗದಿ ಮಾಡಿದ್ದರಿಂದ ಸರ್ಕಾರ ಅನಿವಾರ್ಯವಾಗಿ ಘೋಷಣೆ ಮಾಡಿ ಜಾರಿ ಮಾಡಿತು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಳನೇ ವೇತನ ಆಯೋಗವನ್ನು ಯಥಾವತ್ತಾಗಿ ಜಾರಿ ಮಾಡುವ ಮೂಲಕ ನುಡಿದಂತೆ ನಡೆದಿದ್ದಾರೆ. ನೌಕರರ ಹಿತವನ್ನು ಗ್ಯಾರಂಟಿಗಳಿಂದಾಗಿರುವ ಆರ್ಥಿಕ ಹೊರೆಯಂತಹ ಸಂಕಷ್ಟದಲ್ಲಿಯೂ ಜಾರಿ ಮಾಡಿದ್ದಾರೆ. ಇದಕ್ಕಾಗಿ ಸಂಘ ಅವರ ಉಪಕಾರ ಸ್ಮರಣೆ ಮಾಡಲು ಬೆಂಗಳೂರಿನಲ್ಲಿ ಆ. 17ರಂದು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ ಎಂದರು.ಸರ್ಕಾರಿ ನೌಕರರ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಸೇವೆ ಮಾಡಿದ್ದೇನೆ. ನೌಕರರ ಹಿತ ಕಾಯುವುದಕ್ಕಾಗಿಯೇ ನನ್ನ ಜೀವನ ಮುಡುಪಿಟ್ಟಿದ್ದೇನೆ. ನನ್ನ ಕುಟುಂಬವನ್ನು ಲೆಕ್ಕಿಸದೆ ಸತತವಾಗಿ ಪ್ರವಾಸದಲ್ಲಿರುತ್ತೇನೆ. ನನ್ನ ನಿಜವಾದ ಕುಟುಂಬ ಎಂದರೆ ಸರ್ಕಾರಿ ನೌಕರರ ಕುಟುಂಬ ಎಂದು ಭಾವಿಸಿದ್ದೇನೆ. ಹಿಂದಿನ ಯಾವ ಅವಧಿಯಲ್ಲಿಯೂ ಆಗದಷ್ಟು ನೌಕರರ ಹಿತದ ಆದೇಶಗಳು ಈ ಅವಧಿಯಲ್ಲಿ ಆಗಿವೆ ಎನ್ನುವ ಹೆಮ್ಮೆ ಇದೆ ಎಂದು ತಿಳಿಸಿದರು.
ಎನ್‌ಪಿಎಸ್, ಒಪಿಎಸ್ ಮಾಡುವುದು ನಮ್ಮ ಗುರಿಯಾಗಿದೆ. ಅದನ್ನ ಜಾರಿ ಮಾಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದು, ವರದಿಯನ್ನೇ ತರಿಸಿಕೊಂಡು, ಕ್ರಮ ವಹಿಸುತ್ತಾರೆ ಎಂದರು. ಕೇಂದ್ರ ಮಾದರಿ ವೇತನಕ್ಕಾಗಿ ನಮ್ಮ ಬೇಡಿಕೆ ಇದ್ದು, ಮುಂದಿನ ಅವಧಿಯಲ್ಲಿ ಅದಕ್ಕಾಗಿ ಖಂಡಿತ ಪ್ರಯತ್ನ ಮಾಡುತ್ತೇನೆ. ಅದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದರು.ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ನಮ್ಮ ರಾಜ್ಯದಲ್ಲಿ ಇನ್ನೂ ಗುಣಮಟ್ಟದ ಶಿಕ್ಷಣ ದೊರೆಯಬೇಕಾಗಿದೆ. ಸರ್ಕಾರದ ಸೌಲಭ್ಯದ ಹೊರತಾಗಿಯೂ ಎಸ್‌ಎಸ್ಎಲ್‌ಸಿ ಫಲಿತಾಂಶ ಕುಸಿತವಾಗಿರುವುದು ನಾಚಿಕೆಗೇಡು ಎಂದರು. ೩೭೧ ಜೆ ಅನುಷ್ಠಾನದಿಂದ ಬಂದಿರುವ ಅನುದಾನದಲ್ಲಿ ಶೇ. ೨೫ರಷ್ಟು ಕೇವಲ ಶಿಕ್ಷಣಕ್ಕಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಜುಮ್ಮಣ್ಣವರ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಶ್ರೀನಿವಾಸ, ರಾಜ್ಯ ಖಜಾಂಜಿ ಡಾ. ಎಸ್. ಸಿದ್ರಾಮಣ್ಣ , ಬಿಇಒ ಶಂಕ್ರಯ್ಯ, ಡಾ. ಮಲ್ಲಿಕಾರ್ಜುನ ಬಳ್ಳಾರಿ. ಎಸ್. ಬಸವರಾಜ, ವಿಠ್ಠಲ ಚೌಗಲೆ, ಸಿಪಿಐ ಆಂಜನೇಯ, ಬೀರಪ್ಪ ಅಂಡಗಿ, ಜಾಕೀರ ಕಿಲ್ಲೇದಾರ, ಸೋಮಶೇಖರ ಹತ್ತಿ, ಶರಣಬಸನಗೌಡ ಪಾಟೀಲ, ಅಂದಪ್ಪ ಬೋರಟ್ಟಿ, ಕುತುಬುದ್ದೀನ್, ಶಿವಾನಂದಯ್ಯ ಕದ್ರಳ್ಳಿಮಠ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಮಾಲಿ ಪಾಟೀಲ ಸ್ವಾಗತಿಸಿದರು.