ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕೇಂದ್ರದ ಆರ್ಥಿಕ ನೀತಿಯಿಂದ ವಿಪರೀತ ಬೆಲೆ ಏರಿಕೆ ಆಯ್ತು. ಇದರಿಂದ ಉಂಟಾದ ಜನರ ಸಂಕಷ್ಟ ಕಡಿಮೆ ಮಾಡಲು ನಾವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬುಧವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಹೊರ ವಲಯದ ಸೊಣ್ಣಶೆಟ್ಟಿ ಹಳ್ಳಿಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ವಿವಿಧ ಗ್ಯಾರಂಟಿ ಯೋಜನೆಗಳ ಸಮಾವೇಶ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇನೆ. ಜನರ ಜೇಬಿಗೆ, ಖಾತೆಗಳಿಗೆ ನೇರವಾಗಿ ಹಣ ಹಾಕಿ ನಮ್ಮ ನಾಡಿನ ಜನರ, ಮತ್ತವರ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸಿದೆವು ಎಂದರು.
ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಹೊರಟ ಬಿಜೆಪಿಯವರೇ ನಾಡಿನ ಜನರ ಎದುರು ಮೂರ್ಖರಾಗಿದ್ದಾರೆ. ಒಂದೂ ಗ್ಯಾರಂಟಿ ಯೋಜನೆ ಜಾರಿ ಆಗಲು ಸಾಧ್ಯವೇ ಇಲ್ಲ ಎಂದು ಜನರನ್ನು ಬಕ್ರಾ ಮಾಡಲು ಹೋದರು. ನಾವು ಐದೂ ಗ್ಯಾರಂಟಿಗಳನ್ನು ಕೇವಲ ಎಂಟು ತಿಂಗಳಲ್ಲಿ ಜಾರಿ ಮಾಡಿದೆವು. ಈಗ ನಾಡಿನ ಜನರ ಎದುರು ಬಿಜೆಪಿಯವರು ಪರಮ ಮೂರ್ಖರಾಗಿದ್ದಾರೆ ಎಂದರು.ಸೆಕ್ಯುಲರ್ ಹೆಸರು ಕಿತ್ತಾಕಿ ದೇವೇಗೌಡರೇ:
ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ, ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಘೋಷಿಸಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈಗ ಬಿಜೆಪಿ ಜತೆ ಸೇರಿ ಪ್ಲೇಟ್ ಚೇಂಜ್ ಮಾಡಿದ್ದಾರೆ. ತಮಗೂ ಮೋದಿಯವರಿಗೂ ನಡುವೆ ಅವಿನಾಭಾವ ಸಂಬಂಧ ಇದೆ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿ, ದೇವೇಗೌಡರು ತಮ್ಮ ಪಕ್ಷದ ಹೆಸರಿನಲ್ಲಿರುವ ಸೆಕ್ಯುಲರ್ ಪದ ಕಿತ್ತಾಕಿದರೆ ಒಳ್ಳೆಯದು ಎಂದರು.ಸಜ್ಜನ ಡಾ.ಎಂ.ಸಿ.ಸುಧಾಕರ್ ಗೆ ಉತ್ತಮ ರಾಜಕೀಯ ಭವಿಷ್ಯ ಇದೆ:
ಚಿಂತಾಮಣಿ ಜನತೆಯು ಅಭಿವೃದ್ಧಿಯ ದೂರದೃಷ್ಟಿ ಇರುವ ಜನಪರ ಕಾಳಜಿಯ ಎಂ.ಸಿ.ಸುಧಾಕರ್ ರನ್ನು ಗೆಲ್ಲಿಸಿ ಉತ್ತಮ ಕೆಲಸ ಮಾಡಿದ್ದಾರೆ. ಸುಧಾಕರ್ ಅವರಿಗೆ ಮುಂದೆ ಇನ್ನೂ ಉತ್ತಮ ರಾಜಕೀಯ ಭವಿಷ್ಯ ಇದೆ ಎಂದು ಸಿಎಂ ಭರವಸೆ ನೀಡಿದರು.ಚಿಂತಾಮಣಿಯ ಜನರ ಜೇಬಿಗೆ ಜಮೆಯಾದ ಹಣದ ವಿವರ:
ಮಹಿಳೆಯರಿಗೆ ಆತ್ಮವಿಶ್ವಾಸ ತುಂಬಿದ ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿನಿತ್ಯ ಸರಾಸರಿ 1.02 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿರುವುದು, ಯೋಜನೆಗೆ ಮಹಿಳೆಯರ ಮಾನ್ಯತೆ ದೊರೆತಿರುವುದಕ್ಕೆ ಸಾಕ್ಷಿ. ಶಕ್ತಿ ಯೋಜನೆಯಡಿ, 2023ರ ಜೂನ್ ತಿಂಗಳಿನಿಂದ ಈವರೆಗೆ 2.79 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆ ಸೌಲಭ್ಯ ಪಡೆದಿದ್ದು, ಇದಕ್ಕಾಗಿ 96.77 ಕೋಟಿ ರು.ಗಳ ವೆಚ್ಚವಾಗಿದೆ. ಚಿಂತಾಮಣಿ ತಾಲೂಕಿನಲ್ಲಿ 58.24 ಲಕ್ಷ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣಕ್ಕೆ ಸರ್ಕಾರ 23.04 ಕೋಟಿ ರು.ಗಳನ್ನು ಭರಿಸಿದೆ.ಗೃಹಜ್ಯೋತಿ ಯೋಜನೆಯಡಿ ಈವರೆಗೆ 3,09,030 ಫಲಾನುಭವಿಗಳು (ಶೇ. 93 ರಷ್ಟು ಗ್ರಾಹಕರು) ನೋಂದಣಿಯಾಗಿದ್ದು, ಆಗಸ್ಟ್-2023 ರಿಂದ ಫೆಬ್ರವರಿ-2024ರ ಅಂತ್ಯದವರೆಗೆ ಒಟ್ಟು 7,559 ಲಕ್ಷ ವೆಚ್ಚವಾಗಿದೆ. ಈ ಪೈಕಿ ಚಿಂತಾಮಣಿ ತಾಲೂಕಿನಲ್ಲಿ 55,675 ಫಲಾನುಭವಿಗಳು ನೋಂದಣಿಯಾಗಿದ್ದು, 1,526 ಲಕ್ಷ ರಿಯಾಯಿತಿ ನೀಡಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಜುಲೈ 2023ರಿಂದ ಈವರೆಗೆ ಡಿಬಿಟಿ ಮೂಲಕ 85.97 ಕೋಟಿ ನೇರ ನಗದು ವರ್ಗಾಯಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ. 93.05 ರಷ್ಟು ಪಡಿತರ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿವೆ. ಚಿಂತಾಮಣಿ ತಾಲೂಕಿನಲ್ಲಿ 64,827 ಪಡಿತರ ಕುಟುಂಬಗಳ 2,20,681 ಫಲಾನುಭವಿಗಳಿಗೆ ಪಡಿತರ ಮತ್ತು ನೇರ ನಗದು ಹಣವನ್ನು ವರ್ಗಾಯಿಸಲಾಗಿದೆ.ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆಯಿಟ್ಟ ಸರ್ಕಾರ ಗೃಹಲಕ್ಷ್ಮೀ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈವರೆಗೆ 2,99,152 ಅರ್ಜಿದಾರರು ನೋಂದಣಿಯಾಗಿದ್ದು, ಈ ಪೈಕಿ 2,75,330 ಮಹಿಳಾ ಫಲಾನುಭವಿಗಳಿಗೆ ಈವರೆಗೆ 304.12 ಕೋಟಿ ಹಣ ವರ್ಗಾವಣೆಯಾಗಿದೆ. ಈ ಪೈಕಿ ಚಿಂತಾಮಣಿ ತಾಲೂಕಿನಲ್ಲಿ 66,000 ಮಹಿಳೆಯರು ನೋಂದಣಿಯಾಗಿದ್ದು, 80 ಕೋಟಿ ಹಣ ಅವರ ಖಾತೆಗೆ ಜಮೆಯಾಗಿದೆ.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 2,527 ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 347 ಅರ್ಜಿದಾರರಿಗೆ ಪ್ರತಿ ಮಾಹೆಯಾನ 3000ರು.ಗಳಂತೆ ಯುವನಿಧಿ ಭತ್ಯೆಯನ್ನು ಪಾವತಿಸಲಾಗಿರುತ್ತದೆ. ಈವರೆಗೆ ಜನವರಿ ಮತ್ತು ಫೆಬ್ರುವರಿ ತಿಂಗಳ ಭತ್ಯೆಯ ಮೊತ್ತ ಒಟ್ಟು 11,85,000 ರು.ಗಳನ್ನು 2024ರ ಫೆಬ್ರವರಿ ಅಂತ್ಯದವರೆಗೆ ಪಾವತಿಸಲಾಗಿದೆ. ಈ ಪೈಕಿ ಚಿಂತಾಮಣಿ ತಾಲೂಕಿನಲ್ಲಿ 103 ಮಂದಿ ಅರ್ಜಿದಾರರಿಗೆ 6.18 ಲಕ್ಷ ರು.ಗಳನ್ನು ಪಾವತಿಸಲಾಗಿದೆ. ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ಬದುಕನ್ನು ಆರ್ಥಿಕವಾಗಿ ಸುಭದ್ರಗೊಳಿಸುವ ಜೊತೆಗೆ ರಾಜ್ಯದ ಅಭಿವೃದ್ಧಿಯೂ ನಮ್ಮ ಸರ್ಕಾರದ ಆದ್ಯತೆ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.ಮೋದಿ ಅವರ ಸುಳ್ಳುಗಳಿಗೆ ಮಿತಿಯೇ ಇಲ್ಲ:
ವಿದೇಶದಿಂದ ಕಪ್ಪು ಹಣ ತಂದು ಭಾರತೀಯರ ಖಾತೆಗೆ 15 ಲಕ್ಷ ರು. ನೀಡುತ್ತೇವೆ ಎಂದು ಪ್ರಧಾನಮಂತ್ರಿಯವರು ಹೇಳಿದ್ದರು. ಒಬ್ಬೇ ಒಬ್ಬ ಭಾರತೀಯನ ಖಾತೆಗೆ 15 ಲಕ್ಷ ಇರಲಿ, 15 ರುಪಾಯಿನಾದರೂ ಹಾಕಿದ್ದೀರಾ ಮೋದಿಯವರೇ? ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದ ಮೋದಿಯವರು ಇದನ್ನು ಮಾಡಿದರಾ ? ರೈತರ ಖರ್ಚು ಮೂರು ಪಟ್ಟು ಆಗಿದೆ. ಇದು ನಿಮ್ಮ ಅಚ್ಛೆ ದಿನವೇ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದ ಮೋದಿಯವರು ಮಾಡಿದರೇ ? ಹತ್ತು ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು . ಮೋದಿಯವರು ಮಾಡಿದರೇ ? ಎಂದು ಪ್ರಶ್ನಿಸಿದರು.ನೀವೂ ಸೇರಿ 7 ಕೋಟಿ ಕನ್ನಡಿಗರಿಗೆ ದ್ರೋಹ ಎಸಗಿದ ಬಿಜೆಪಿ ಪಕ್ಷ ಮತ್ತು ಬಿಜೆಪಿ ಸಂಸದರನ್ನು ಕ್ಷಮಿಸಬೇಡಿ. ನಾವು ಕೇಂದ್ರಕ್ಕೆ ಕೊಡುವ ಪ್ರತಿ 100 ರುಪಾಯಿಯಲ್ಲಿ ರಾಜ್ಯಕ್ಕೆ ವಾಪಾಸ್ ಬರುತ್ತಿರುವುದು ಕೇವಲ 13 ರು. ಈ ಭೀಕರ ಅನ್ಯಾಯವನ್ನು ರಾಜ್ಯದ ಸಂಸದರು ಇವತ್ತಿನವರೆಗೂ ಪ್ರಶ್ನಿಸಿಲ್ಲ. ಈ ಸಂಸದರನ್ನು ಕ್ಷಮಿಸಬೇಡಿ ಎಂದು ಮನವಿ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಗುರಿ ಹೊಂದಿರುವ ಸರ್ಕಾರ ಇಂದು ಒಂದೇ ದಿನ ಸುಮಾರು 431.35 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 75208 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಸದರಿ ಬೆಳೆಗಳಿಗೆ ಸರ್ಕಾರದಿಂದ ಮೊದಲ ಹಂತದಲ್ಲಿ 97,134 ರೈತರಿಗೆ ಇಂದಿನವರೆಗೆ 17.68 ಕೋಟಿ ರು.ಗಳನ್ನು ಬರ ಪರಿಹಾರ ಹಣವನ್ನು ಪಾವತಿಸಲಾಗಿದೆ. ಜಿಲ್ಲೆಯಲ್ಲಿನ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸಲು ಚಿಂತಾಮಣಿ ತಾಲೂಕಿನ ಮಸ್ತೇನಹಳ್ಳಿಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ಒಂದು ಮತ್ತು ಎರಡನೇ ಹಂತದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ಈ ವೇಳೆ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸೌಲಭ್ಯಗಳನ್ನು ವಿತರಿಸಿದರು.ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ , ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಎಚ್.ಎಂ. ರೇವಣ್ಣ, ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್, ಬಿ.ಎನ್. ರವಿಕುಮಾರ್, ಕೆ. ಎಚ್. ಪುಟ್ಟಸ್ವಾಮಿಗೌಡ, ಕೆ.ವೈ. ನಂಜೇಗೌಡ,ವಿಧಾನ ಪರಿಷತ್ತಿನ ಸದಸ್ಯರಾದ ಡಾ.ವೈ.ಎ. ನಾರಾಯಣಸ್ವಾಮಿ, ಚಿದಾನಂದ ಎಂ. ಗೌಡ, ಎಂ.ಎಲ್. ಅನಿಲ್ ಕುಮಾರ್, ಜಿಲ್ಲಾಧಿಕಾರಿ.ಪಿ.ಎನ್.ರವೀಂದ್ರ, ಜಿ.ಪಂ.ಸಿಇಒ ಪ್ರಕಾಶ್.ಜಿ.ಟಿ.ನಿಟ್ಟಾಲಿ, ಎಸ್.ಪಿ.ಡಿ.ಎಲ್.ನಾಗೇಶ್,ಎಡಿಸಿ ಡಾ.ತಿಪ್ಪೇಸ್ವಾಮಿ ಮತ್ತಿತರರು ಇದ್ದರು.