ಸಾರಾಂಶ
ಕಾಡರಕೊಪ್ಪ, ಅನವಾಲ ಗ್ರಾಮಗಳ ಏತ ನೀರಾವರಿ ಯೋಜನೆಗಳಿಗಾಗಿ ಅಂದಾಜು ₹717 ಕೋಟಿ ಅನುದಾನ ತಂದು ಟೆಂಡರ ಕರೆಯಲಾಗಿದ್ದು, ಬೇಗ ಕಾಮಗಾರಿ ಪ್ರಾರಂಭಿಸಲಾಗುವುದು.
ಕನ್ನಡಪ್ರಭ ವಾರ್ತೆ ಕೆರೂರ
ನಾಡು ಹಸಿರಾದರೇ ರೈತರ ಅಭಿವೃದ್ಧಿ. ನನ್ನ ಮತಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮವು ಹಸಿರಿನಿಂದ ಕಂಗೊಳಿಸಬೇಕೆಂಬುದು ನನ್ನ ಅಪೇಕ್ಷೆ. ಆ ನಿಟ್ಟಿನಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದು ನನ್ನ ಗುರಿಯಾಗಿದೆ ಎಂದು ಬೀಳಗಿ ಶಾಸಕ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕಿನ ನೀರಬೂದಿಹಾಳ ಗ್ರಾಮದಲ್ಲಿ ರೈತರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಹೆರಕಲ್ ಏತ ನೀರಾವರಿ ಯೋಜನೆಯಲ್ಲಿ ಕೈನಕಟ್ಟಿ ಏತ ನೀರಾವರಿ ಕಾಮಗಾರಿ ಪ್ರಗತಿಯಲ್ಲಿದೆ. ಕಾಡರಕೊಪ್ಪ, ಅನವಾಲ ಗ್ರಾಮಗಳ ಏತ ನೀರಾವರಿ ಯೋಜನೆಗಳಿಗಾಗಿ ಅಂದಾಜು ₹717 ಕೋಟಿ ಅನುದಾನ ತಂದು ಟೆಂಡರ ಕರೆಯಲಾಗಿದ್ದು, ಬೇಗ ಕಾಮಗಾರಿ ಪ್ರಾರಂಭಿಸಲಾಗುವುದು. ಕಬ್ಬಿನ ಕಾರ್ಖಾನೆಯಲ್ಲಿ ರೈತರಿಗೆ ತೂಕದಲ್ಲಿ ಮೋಸವಾಗುತ್ತಿರುವುದು ಗಮನಕ್ಕೆ ಬಂದಿದೆ. ಸದನದಲ್ಲಿ ಧ್ವನಿ ಎತ್ತಿ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಮಷಿನ್ ಅಳವಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವೆ ಬೀಳಗಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಜನರ ಸಹಕಾರಬೇಕೆಂದರು.ನೀರಬೂದಿಹಾಳ ಗ್ರಾಮವು ಐತಿಹಾಸಿಕ ಚರಿತ್ರೆ ಹೊಂದಿದೆ. ಗ್ರಾಮವು ಸಂಸ್ಥಾನಿಕ ನೆಲೆಯಾಗಿದ್ದು ಶಾಸಕರನ್ನು ಸೇರಿ ಅನೇಕ ಸಾಧಕರನ್ನು ನಾಡಿಗೆ ನೀಡಿದೆ. ಇಂದು ನನ್ನನ್ನು ಕರೆಸಿ ಸನ್ಮಾನ ಮಾಡಿದ್ದು ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು. ಕರ್ನಾಟಕ ಸಹಕಾರ ಮಹಾ ಮಂಡಳದ ನಿರ್ದೇಶಕ ಸುಭಾಸ ಮೆಳ್ಳಿ ಮಾತನಾಡಿ, ನನ್ನ ರಾಜಕೀಯ ಜೀವನ ಪ್ರಾರಂಭವಾಗಿದ್ದು ಈ ಗ್ರಾಮದಿಂದ ಗ್ರಾಮಸ್ಥರ ಋಣಭಾರ ನನ್ನ ಮೇಲಿದೆ. ಗ್ರಾಮದ ಗೌರವಕ್ಕೆ ಚ್ಯುತಿ ಬರದಂತೆ ನೋಡಿಕೊಂಡು ಗ್ರಾಮದ ಕೆಲಸ ಕಾರ್ಯಗಳು ಏನೆ ಇದ್ದರೂ ನನ್ನ ಗಮನಕ್ಕೆ ತಂದರೆ ಶಾಸಕರ ಗಮನಕ್ಕೆ ತಂದು ಅವುಗಳನ್ನು ಪ್ರಾಮಾಣಿಕವಾಗಿ ಗ್ರಾಮಕ್ಕೆ ಒದಗಿಸುತ್ತೇನೆಂದರು.
ಈ ಸಂದರ್ಭದಲ್ಲಿ ಶಾಸಕ ಜೆ.ಟಿ.ಪಾಟೀಲ ಸಹಕಾರ ರತ್ನ ಪ್ರಶಸ್ತಿ ಪಡೆದ ಸುಭಾಸ ಮೆಳ್ಳಿ ಹಾಗೂ ಸಾಹಿತಿ ವೈ.ಎಂ.ಯಾಕೊಳ್ಳಿರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮಂತ ಆನಂದರಾವ ದೇಸಾಯಿ, ಬಸವರಾಜ ಗೊಡಚಿ, ಹೊಳಬಸಯ್ಯ ಮೋತಿ, ರಂಗಪ್ಪ ಬಸರಿ, ಗಂಗಯ್ಯ ಸರಕಾರ, ಗೀರೀಶ ಶಿರಹಟ್ಟಿ, ಸಿ.ಎಂ.ಚಿಕ್ಕೂರಮಠ, ಎನ್.ಎನ್.ಪಾಟೀಲ, ಬಿ.ಆರ್.ಪೂಜಾರ, ಬಿ.ಬಿ.ಉಮತಾರ ಸೇರಿದಂತೆ ಅನೇಕ ಗಣ್ಯರಿದ್ದರು.