ಸಾರಾಂಶ
ಕನ್ನಡ ರಕ್ಷಣೆಗೆ ಶರಣಬಸವೇಶ್ವರ ಸಂಸ್ಥಾನ ಹಾಗೂ ಪೀಠಾಧಿಪತಿಗಳ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಶರಣಬಸವ ವಿವಿ ಕನ್ನಡ ಅನುಷ್ಠಾನದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಕನ್ನಡ ರಕ್ಷಣೆಗೆ ಶರಣಬಸವೇಶ್ವರ ಸಂಸ್ಥಾನ ಹಾಗೂ ಪೀಠಾಧಿಪತಿಗಳ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಶರಣಬಸವ ವಿವಿ ಕನ್ನಡ ಅನುಷ್ಠಾನದ ಬಗ್ಗೆ ಸಂತಸ ವ್ಯಕ್ತಪಡಿಸಿದರು.ಶರಣಬಸವ ವಿವಿಗೆ ಭೇಟಿ ನೀಡಿ, ಆಡಳಿತದಲ್ಲಿ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಕನ್ನಡ ಬಳಕೆ ಕುರಿತು ಕಡತ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಡಾ.ಬೀಳಿಮಲೆ, ಈ ಸಂಸ್ಥೆ ಕಲ್ಯಾಣ ಕರ್ನಾಟಕ ಕನ್ನಡ ರಕ್ಷಣೆ ಹಾಗೂ ಅದರ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದರು.
ಕನ್ನಡಕ್ಕೆ ಶರಣಬಸವೇಶ್ವರ ಸಂಸ್ಥಾನ ಹಾಗೂ ಪೀಠಾಧಿಪತಿಗಳ ಕೊಡುಗೆ ಅಪಾರವಾಗಿದ್ದು, ಶೈಕ್ಷಣಿಕ ಹಾಗೂ ಆಡಳಿತದಲ್ಲಿ ಉನ್ನತ ಸ್ಥಾನ ನೀಡುತ್ತಿರುವುದು ಸಂತಸದ ಸಂಗತಿ. ವಿಶ್ವವಿದ್ಯಾಲಯದಲ್ಲಿ ಕನ್ನಡ ಅನುಷ್ಠಾನದಲ್ಲಿ ಇನ್ನಷ್ಟು ಸುಧಾರಣೆಗೆ ಅವಕಾಶವಿದೆ ಎಂದರು.ಕನ್ನಡವನ್ನು ರಕ್ಷಿಸಲು ಮತ್ತು ನಾಡಿನಲ್ಲಿ ಭಾಷೆಯನ್ನು ಅದರ ಉನ್ನತ ಸ್ಥಾನಕ್ಕೆ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಎಲ್ಲಾ ಕನ್ನಡ ಪ್ರೇಮಿಗಳು ಕೈಜೋಡಿಸಬೇಕಾದ ತುರ್ತು ಅಗತ್ಯವಿದೆ ಮತ್ತು ಶರಣಬಸವ ವಿವಿಯಂತಹ ವಿಶ್ವವಿದ್ಯಾಲಯಗಳು ಈ ಆಂದೋಲನದ ಮುಂದಾಳತ್ವವನ್ನು ವಹಿಸಬೇಕೆಂದರು.
ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ಮಾತನಾಡಿದರು. ವಿವಿ ಕನ್ನಡ ವಿಭಾಗದ ಅಧ್ಯಕ್ಷ ಪ್ರೊ.ಕಲ್ಯಾಣರಾವ್ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಕುಲಸಚಿವ ಡಾ.ಎಸ್.ಜಿ.ಡೊಳ್ಳೇಗೌಡ ಮಾತನಾಡಿ ಎಲ್ಲಾ ವಿಭಾಗಗಳಲ್ಲಿ ಕನ್ನಡಕ್ಕೆ ಹೆಮ್ಮೆಯ ಸ್ಥಾನವನ್ನು ಕಲ್ಪಿಸುವಲ್ಲಿ ವಿಶ್ವವಿದ್ಯಾಲಯವು ಕೈಗೊಂಡಿರುವ ಪ್ರಯತ್ನಗಳನ್ನು ವಿವರಿಸಿದರು.