ಸಾರಾಂಶ
ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಎಲ್ಲಾ ವರ್ಗದ ರೈತರುಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಎಲ್ಲಾ ವರ್ಗದ ರೈತರುಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ತಾಲೂಕಿನ ಹೊನ್ನವಳ್ಳಿಯಲ್ಲಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ತುಂತುರು ನೀರಾವರಿ ಘಟಕಗಳು, ಕೃಷಿ ಯಂತ್ರೋಪಕರಣಗಳು ಮತ್ತು ಮಣ್ಣು ಆರೋಗ್ಯ ಚೀಟಿ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ರಾಜ್ಯವು ದೇಶದಲ್ಲಿ ಹೆಚ್ಚಿನ ಒಣಭೂಮಿ ಪ್ರದೇಶವನ್ನು ಹೊಂದಿರುವ ಎರಡನೇ ರಾಜ್ಯವಾಗಿದ್ದು, ಸ್ವಾತಂತ್ರ್ಯಾನಂತರ ಜನಸಂಖ್ಯೆ ಹೆಚ್ಚಾದಂತೆ ಕೃಷಿ ಮಾಡಲು ಅಗತ್ಯವಾದ ಭೂಮಿ ಕಡಿಮೆಯಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವುದು ಅತ್ಯವಶ್ಯಕವಾಗಿದ್ದು ಬೆಳೆ ಹಂಗಾಮಗಳಲ್ಲಿ ಮಧ್ಯಮ ಶ್ರೇಣಿಯ ತೇವಾಂಶ ಕೊರತೆ ಹೆಚ್ಚಾಗುತ್ತಿದೆ. ಮಳೆ ನೀರನ್ನು ವ್ಯರ್ಥಮಾಡದೆ ಸೂಕ್ತ ಸ್ಥಳಗಳಲ್ಲಿ ಕೃಷಿ ಹೊಂಡ ತೆಗೆದು ನೀರು ಸಂಗ್ರಹಿಸಿ ಬೆಳೆಗಳ ಸಂದಿಗ್ಧ ಹಂತಗಳಲ್ಲಿ ತುಂತುರು ನೀರಾವರಿ ಘಟಕಗಳ ಮೂಲಕ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಕೃಷಿ ಭಾಗ್ಯ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಡಾ. ಎಂ.ಪಿ. ಪವನ್ ಮಾತನಾಡುತ್ತಾ, ಕೃಷಿ ಭಾಗ್ಯ ಯೋಜನೆಯು ಮಳೆಯಾಶ್ರಿತ ಪ್ರದೇಶಗಳಲ್ಲಿ ಮಳೆ ನೀರಿನ ಸಮರ್ಪಕ ಸಂಗ್ರಹಣೆಯ ಜೊತೆಗೆ ಬೆಳೆಗಳಿಗೆ ನ್ಯಾಯಯುತವಾಗಿ ನೀರಾವರಿ ಒದಗಿಸಲು ಸಹಕಾರಿಯಾಗಿದೆ. ಈ ಯೋಜನೆಯು ಪ್ಯಾಕೇಜ್ ಯೋಜನೆಯಾಗಿದ್ದು ಆರು ಕಡ್ಡಾಯ ಘಟಕಗಳನ್ನು ರೈತರಿಗೆ ಸಹಾಯಧನದಲ್ಲಿ ನೀಡಲಾಗುತ್ತಿದೆ. ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ಪಾಲಿಥಿನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಹೊಂಡದಿಂದ ನೀರು ಎತ್ತಲು ಡೀಸೆಲ್ ಪಂಪ್‌ಸೆಟ್ ಮತ್ತು ನೀರನ್ನು ಬೆಳೆಗಳಿಗೆ ಹಾಯಿಸಲು ತುಂತುರು ನೀರಾವರಿ ಘಟಕಗಳನ್ನು ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ.80ರ ಸಹಾಯಧನದಲ್ಲಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರ ಸಹಾಯಧನದಲ್ಲಿ ನೀಡಲಾಗುತ್ತಿದೆ ಎಂದರು. ನಂತರ ನೊಣವಿನಕೆರೆ ಹೋಬಳಿಯಲ್ಲಿ ಈ ಕಾರ್ಯಕ್ರಮವನ್ನು ಶಾಸಕರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹೊನ್ನವಳ್ಳಿ ಗ್ರಾ.ಪಂ. ಅಧ್ಯಕ್ಷ ದೊಡ್ಡೇಗೌಡರು, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಆನಂದ್, ಮಂಜುನಾಥ್, ಕೆ.ವಿ.ಕೆ ವಿಜ್ಞಾನಿಗಳಾದ ತಸ್ಮೀಯ, ನೊಣವಿನಕೆರೆ ಗ್ರಾ.ಪಂ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಕಮಲಮ್ಮ, ಸದಸ್ಯರುಗಳಾದ ರವಿಕುಮಾರ್, ರಘುನಂದನ್, ಯಶೋಧಮ್ಮ, ಕೃಷಿ ಅಧಿಕಾರಿಗಳಾದ ಕಿರಣ್, ದಿವ್ಯ, ಆತ್ಮ ಯೋಜನೆಯ ಮಹೇಶ್ ಮತ್ತಿತರರಿದ್ದರು.