ಸಾರಾಂಶ
ಭಟ್ಕಳ: ತಾಲೂಕಿನ ಅಳ್ವೆಕೋಡಿ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಶನಿವಾರ ಏರ್ಪಡಿಸಲಾದ ಜಲಶ್ರೀ ಮತ್ಸ್ಯ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯುಸರ್ ಕಂಪನಿಯ ಪ್ರಥಮ ವಾರ್ಷಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರು ಮತ್ಸ್ಯ ಸಂಜೀವಿನಿ ಯೋಜನೆಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ದೇಶದಲ್ಲೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರ ಮಹಿಳೆಯರ ಉತ್ಪಾದಕ ಕಂಪನಿ ರಚಿಸುವ ಮೂಲಕ ಮೀನುಗಾರಿಕೆ ಮೌಲ್ಯ ಸರಪಳಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮತ್ಸ್ಯಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದೊಂದು ನವೀನ ಮತ್ತು ಪ್ರಭಾವಶಾಲಿ ಮತ್ಸ್ಯ ಸಾಕಾಣಿಕೆ ಆಧಾರಿತ ಯೋಜನೆಯಾಗಿದೆ ಎಂದರು.
ಜಿಲ್ಲೆಯಲ್ಲಿ ೫ ತಾಲೂಕುಗಳಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ. ಮಹಿಳೆಯರ ಮೊದಲ ಹಂತವಾಗಿ ವಿವರವಾದ ಯೋಜನಾ ವರದಿಯನ್ನು ತಯಾರಿಸಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಯಲಕ್ಕೆ ಸಲ್ಲಿಸಲಾಗಿದೆ. ಗ್ರಾಮೀಣ ಮೀನುಗಾರ ಸಮುದಾಯಗಳ ಸುಸ್ಥಿರತೆಯನ್ನು ಉತ್ತೇಜಿಸುವುದು, ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಸುಧಾರಿಸುವುದು, ಸಮುದ್ರಾಹಾರ ಮೌಲ್ಯ ಸರಪಳಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯನ್ನು ಬಲಪಡಿಸುವುದು, ಮೀನುಗಾರ ಮಹಿಳೆಯರ ಆದಾಯ ಹೆಚ್ಚಿಸುವುದು ಇದರ ಉದ್ದೇಶವಾಗಿದೆ ಎಂದರು.ಮೊದಲ ಬಾರಿಗೆ ಮೀನುಗಾರ ಮಹಿಳೆಯರ ಉತ್ಪಾದಕರ ಕಂಪನಿ ರಚಿಸುವ ಮೂಲಕ ತಾಜಾ ಮತ್ತು ಒಣ ಮೀನಿನ ಸಂಗ್ರಹಣೆ, ಪ್ರಾಥಮಿಕ ಸಂಸ್ಕರಣೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆ ಮತ್ತು ಮಾರುಕಟ್ಟೆ ಜೋಡಣೆ, ಜಲಕೃಷಿ ಪ್ರವಾಸೋದ್ಯಮ ಮತ್ತು ಬೈವಾಲ್ಡ್ಗಳ ಕೃಷಿ (ಮಸ್ಸೆಲ್ಸ್ ಸಿಂಪಿ), ಕಡಲಕಳೆ ಕೃಷಿ, ಪಂಜರ ಕೃಷಿ ಮತ್ತು ಹಿತ್ತಲ ಅಲಂಕಾರಿಕ ಮೀನು ಸಾಕಣೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ೫ ತಾಲೂಕುಗಳಲ್ಲಿ ತಾಜಾ ಮೀನು ಸಂಗ್ರಹಣಾ ಕೇಂದ್ರಗಳು, ಶೈತ್ಯಾಗಾರ ಘಟಕಗಳು, ಆಧುನಿಕ ಮೀನು ಒಣಗಿಸುವ ಘಟಕಗಳು, ಮೀನುಗಾರ ಮಹಿಳೆಯರ ಉತ್ಪಾದಕರ ಕಂಪನಿಯ ಕಚೇರಿ, ಮಂಜುಗಡ್ಡೆ ಉತ್ಪಾದನಾ ಘಟಕಗಳು, ಜಲಕೃಷಿ ಪ್ರವಾಸೋದ್ಯಮದ ಚಟುವಟಿಕೆಗಳು ಮತ್ತು ತೂಕದ ಯಂತ್ರಗಳಿಗೆ ಭೂಮಿ/ಸೈಟ್‌ಗಳನ್ನು ಗುರುತಿಸುವ ಅವಶ್ಯಕತೆಯಿದೆ ಎಂದರು.
ಈ ಮೂಲ ಸಮೀಕ್ಷೆಯನ್ನು ಕೈಗೊಳ್ಳಲು ಆಯಾ ತಾಲೂಕಿನ ಆಯ್ದ ಗ್ರಾಮ ಪಂಚಾಯಿತಿ ಒಕ್ಕೂಟದ ಕೃಷಿ ಸಖಿ ಮತ್ತು ಪಶು ಸಖಿಯರ ಮೂಲಕ ಮೂಲ ಸಮೀಕ್ಷೆ ಕೈಗೊಳ್ಳಲು ಸೂಚಿಸಲಾಗಿದೆ. ೧೩ ಸದಸ್ಯರನ್ನೊಳಗೊಂಡ ನಿರ್ದೇಶಕರ ಮಂಡಳಿಯ ರಚನೆ ಮಾಡುವುದರ ಮೂಲಕ ಮೀನುಗಾರ ಮಹಿಳಾ ಉತ್ಪಾದಕರ ಕಂಪನಿಯಯ ನೋಂದಣಿಗಾಗಿ ವಿವಿಧ ಹಂತದ ಸಿದ್ಧತೆಗಳನ್ನು ಮಾಡಿಲೊಳ್ಳಲು ಜಿಲ್ಲಾ ಅಭಿಯಾನ ಘಟಕಕ್ಕೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.ಈ ಯೋಜನೆಯಡಿ ೬೦೦೦ಕ್ಕೂ ಹೆಚ್ಚು ಮಹಿಳಾ ಸದಸ್ಯರು ಶೇರುದಾರರಾಗಿರುವ ‘ಜಲಶ್ರೀ ಮತ್ಸ್ಯ ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕರ ಕಂಪನಿ ಲಿಮಿಟೆಡ್’ ಎಂಬ ಕಂಪನಿ ನೋಂದಾಯಿಸಲಾಗಿದ್ದು, ಇದು ಮಹಿಳೆಯರ ಸ್ವಾಮ್ಯದ ಮತ್ಸ್ಯ ಉತ್ಪಾದಕರ ಕಂಪನಿಯಾಗಿದೆ. ಇದು ದೇಶದಲ್ಲಿಯೇ ಮೊದಲನೇ ಮಹಿಳಾ ಮೀನುಗಾರರ ಉತ್ಪಾದಕರ ಕಂಪನಿ ಆಗಿರುವದು ಹೆಮ್ಮೆಯ ವಿಷಯವಾಗಿದೆ ಎಂದರು. ಈ ಸಂದರ್ಬದಲ್ಲಿ ೫ ತಾಲೂಕುಗಳಿಂದ ಸಾವಿರಾರು ಸಂಖ್ಯೆಯ ಮೀನುಗಾರರು ಇದ್ದರು.
ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ, ಜಿಪಂ ಸಿಎಒ ಈಶ್ವರ ಕಾಂದೂ, ಅಭಿಯಾನ ನಿರ್ದೇಶಕ ಅರ್ಜುನ್ ಒಡೇಯರ್, ಯೋಜನ ನಿರ್ದೇಶಕ ಕರೀಮ್ ಅಸಾದಿ, ತಾ.ಪಂ. ಕಾರ್ಯರ್ನಿಹಣಾಧಿಕಾರಿ ವೆಂಕಟೇಶ ನಾಯಕ, ಮೀನುಗಾರರ ಮುಖಂಡ ರಾಮಾ ಮೊಗೇರ ಜಲಶ್ರೀ ಕಂಪೆನಿಯ ಆಡಳಿತ ಮಂಡಳಿಯ ಸದಸ್ಯರು ಇದ್ದರು. ರಮ್ಯಾನಾಯ್ಕ, ಕರೀಮ್ ಅಸಾದಿ, ವೆಂಕಟೇಶ ನಾಯಕ ಕಾರ್ಯಕ್ರಮ ನಿರ್ವಹಿಸಿದರು.3ಬಿಕೆಲ್2ಶಿರಾಲಿಯ ಅಳ್ವೆಕೋಡಿಯಲ್ಲಿ ಮತ್ಸ್ಯ ಸಂಜೀವಿನಿ ಯೋಜನೆಗೆ ಸಚಿವ ಮಂಕಾಳ ವೈದ್ಯ ಚಾಲನೆ ನೀಡಿದರು.