ಸಾರಾಂಶ
ಅಳ್ನಾವರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆ ಸೇರಿದಂತೆ ಹಲವಾರು ಉಪಯುಕ್ತ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಿಂದ ಅಭಿವೃದ್ಧಿಗೆ ವೇಗ ದೊರೆತಿದೆ ಎಂದು ವಿಪ ಸದಸ್ಯ ಹಾಗೂ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂಅಹ್ಮದ್ ಹೇಳಿದರು.
ಇಲ್ಲಿನ ಪಪಂ ವತಿಯಿಂದ ಗುರುವಾರ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಜನಪರ ಚಿಂತನೆ ಹೊಂದಿದೆ. ಚುಣಾವಣೆಯಲ್ಲಿ ಘೋಷಿಸಿದ ಎಲ್ಲ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ನುಡಿದಂತೆ ನಡೆದಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ ನೇತ್ರತ್ವದಲ್ಲಿ ಪಕ್ಷ ಬಲಾಡ್ಯವಾಗಿ ಹೊರಹೊಮ್ಮಿದೆ ಎಂದರು.ಸರ್ವರಿಗೂ ಸಮಪಾಲು, ಸಮಬಾಳು ತತ್ವದಡಿ ನಮ್ಮ ಪಕ್ಷ ಸಾಕಷ್ಟು ಜನಪರ ಕೆಲಸಗಳನ್ನು ನಮ್ರತೆ ಹಾಗೂ ಪ್ರಮಾಣಿಕತೆಯಿಂದ ನಿಬಾಯಿಸುತ್ತಿದೆ. ಎಲ್ಲ ಸಮಾಜಕ್ಕೂ ನ್ಯಾಯ ದೊರೆಕಿಸಿಕೊಡುವ ಪ್ರಯತ್ನದ ಫಲವಾಗಿ ರಾಜ್ಯದಲ್ಲಿ ಈಚೆಗೆ ನಡೆದ ಮೂರು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿ ಬಿಜೆಪಿಗೆ ಎಚ್ಚರಿಕೆ ಗಂಟೆ ಬಾರಿಸಿದೆ. ಇದು ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ. ಬರುವ ದಿನದಲ್ಲಿ ದೇಶದಲ್ಲಿ ಕೂಡಾ ಕಾಂಗ್ರೆಸ್ ಆಡಳಿತ ನಡೆಸುವ ಕಾಲ ಸನ್ನಿಹಿತವಾಗಿದೆ ಎಂದರು.
ಮನವಿ: ಪಟ್ಟಣಕ್ಕೆ ಯುಜಿಡಿ ಯೋಜನೆ ಮಂಜೂರಿ ಮಾಡಬೇಕು, ಚರಂಡಿ, ರಸ್ತೆ ನಿರ್ಮಿಸಲು ₹2 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು, ವಿವಿಧ ಸಮುದಾಯಗಳ ಸ್ಮಶಾನಗಳ ಅಭಿವೃದ್ಧಿಗೆ ಪ್ರದೇಶಾಭಿವೃದ್ಧಿ ಅನುದಾನ ಮಂಜೂರಿ ಮಾಡಬೇಕು. ಸರ್ಕಾರದ ಮಟ್ಟದಲ್ಲಿರುವ ಇಲ್ಲಿನ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಎರಿಸುವ ಪ್ರಸ್ತಾವನೆಗೆ ಶೀಘ್ರ ಮಂಜೂರಿ ಮಾಡಿಸಬೇಕು. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳ ಮನವಿಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮೋಲ ಗುಂಜೀಕರ ಸಲೀಂಅಹ್ಮದ್ ಅವರಿಗೆ ನೀಡಿದರು.ಈ ವೇಳೆ ಪಪಂ ಅಧ್ಯಕ್ಷ ಅಮೋಲ ಗುಂಜೀಕರ, ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಸ್ಥಾಯಿ ಸಮಿತಿ ಚೇರಮನ್ ಜೈಲಾನಿ ಸುದರ್ಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರಶಗೌಡ ಕರಿಗೌಡರ, ಶ್ರೀಕಾಂತ ಗಾಯಕವಾಡ, ಫಹೀಮ್ ಕಾಂಟ್ರ್ಯಾಕ್ಟರ್, ಪಪಂ ಸದಸ್ಯರು, ಗಣ್ಯರು ಇದ್ದರು. ಮುಖ್ಯಾಧಿಕಾರಿ ಪ್ರಕಾಶ ಮುಗದಮ ಸ್ವಾಗತಿಸಿದರು. ಎಂ.ಎಸ್. ಬೆಂತೂರ ನಿರೂಪಿಸಿದರು. ನಾಗರಾಜ ಗುರ್ಲಹೊಸೂರ ವಂದಿಸಿದರು.
ಸನ್ಮಾನ: ಇಲ್ಲಿನ ಮಿಲ್ಲತ್ ಶಾಲೆ ಕಟ್ಟಡ ನಿರ್ಮಾಣಕ್ಕೆ ₹5 ಲಕ್ಷ ಮಂಜೂರಿ ಮಾಡಿದ ಪ್ರಯುಕ್ತ ವಿಪಂ ಸದಸ್ಯ ಸಲೀಂಅಹ್ಮದ್ ಅವರಿಗೆ ಮಿಲ್ಲತ್ ಶಾಲೆಯಲ್ಲಿ ರೆಹನುಮಾ ಏ ಮಿಲ್ಲತ್ ಸೊಸಾಯಿಟಿ ಅಧ್ಯಕ್ಷ ನದೀಮ ಕಾಂಟ್ರ್ಯಾಕ್ಟರ್ ಸತ್ಕರಿಸಿದರು. ಫಹೀಮ್ ಕಾಂಟ್ರ್ಯಾಕ್ಟರ್ ಮತ್ತು ಗಣ್ಯರು ಇದ್ದರು.