ಭರವಸೆಯಂತೆ ಯೋಜನೆಗಳ ಜಾರಿ: ಸಚಿವ ತಂಗಡಗಿ

| Published : Mar 13 2024, 02:06 AM IST

ಸಾರಾಂಶ

ಕನಕಗಿರಿ ಕ್ಷೇತ್ರದಲ್ಲಿ ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಜೊತೆಗೆ ವಿವಿಧ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಾರಟಗಿ

ಕನಕಗಿರಿ ಕ್ಷೇತ್ರದಲ್ಲಿ ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಜೊತೆಗೆ ವಿವಿಧ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ತಾಲೂಕಿನ ಹೊಸಜೂರಟಗಿ ಮತ್ತು ಮರ್ಲಾನಹಳ್ಳಿ ಗ್ರಾಮಗಳಲ್ಲಿ ಸೋಮವಾರ ಕಂದಾಯ ಇಲಾಖೆಯ ಅಕ್ರಮ-ಸಕ್ರಮ ೯೪ಸಿ ಅಡಿಯಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಡವರ ಪರ ಸರಕಾರ. ಕ್ಷೇತ್ರದಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡು ಸಕ್ರಮ ಮಾಡಿಕೊಂಡ ಫಲಾನುಭವಿಗಳಿಗೆ ಹಂತ ಹಂತವಾಗಿ ಹಕ್ಕು ಪತ್ರ ವಿತರಣೆ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಕಳೆದ ನಲವತ್ತು ವರ್ಷಗಳಿಂದ ಸರ್ಕಾರಿ ಜಾಗೆಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡು ವಿವಿಧ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿರುವ ಬಡ ಜನತೆ ನೆರವಿಗೆ ಬಂದಿದೆ. ಇಂದಿನಿಂದ ಈ ಜಾಗೆ ಸರ್ಕಾರದ್ದಲ್ಲ, ಇದು ನಿಮ್ಮ ಸ್ವತ್ತು. ನೆಮ್ಮದಿಯಿಂದ ವಾಸ ಮಾಡಬಹುದು. ಜೊತೆಗೆ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿರಬಹುದು, ಮನೆ ಕಟ್ಟಲು ಬ್ಯಾಂಕ್‌ಗಳಿಂದ ಸಾಲ ಎತ್ತುವುದಕ್ಕೆ ಅನುಕೂಲವಾಗುತ್ತದೆ ಎಂದರು.

ಹೊಸಜೂರಟಗಿ ಮತ್ತು ಮರ್ಲಾನಹಳ್ಳಿ ಗ್ರಾಮಗಳಲ್ಲಿ ಇಂಥ ಅಕ್ರಮ-ಸಕ್ರಮಕ್ಕೆ ೩೨೧ ಅರ್ಜಿಗಳು ಬಂದಿವೆ. ಆ ಪೈಕಿ ೨೨೧ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಬಾಕಿ ೧೦೦ ಕುಟುಂಬಗಳಿಗೆ ಖಾಲಿ ನಿವೇಶನವಿರುವುದರಿಂದ ಹಕ್ಕುಪತ್ರ ನೀಡಲು ಕೆಲ ಕಾನೂನು ತೊಡಕು ಇದೆ. ನಿವೇಶನ ಹೊಂದಿದವರು ಮನೆ, ಶೆಡ್ ನಿರ್ಮಿಸಿಕೊಂಡರೆ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತದೆ. ಕಳೆದ ೪೦ ವರ್ಷಗಳಲ್ಲಿ ಜನರ ಬೇಡಿಕೆಯನ್ನು ಅಧಿಕಾರಕ್ಕೆ ಬಂದ ಕೆಲ ತಿಂಗಳಲ್ಲಿಯೇ ಈಡೇರಿಸಲಾಗಿದೆ ಎಂದು ತಂಗಡಗಿ ಹೇಳಿದರು.

ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ನಿಮಗೆ ನೀಡಿದ ಭರವಸೆಯಂತೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ ಎಂದರು. ಇದೇ ವೇಳೆ ಸಾಂಕೇತಿಕವಾಗಿ ಐದು ಜನರಿಗೆ ಹಕ್ಕುಪತ್ರಗಳನ್ನು ಸಚಿವ ತಂಗಡಗಿ ವಿತರಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಲತಾ ಪ್ರತಾಪ್, ಉಪಾಧ್ಯಕ್ಷೆ ಹುಲಿಗೆಮ್ಮ ವೀರೇಶ, ಸದಸ್ಯರಾದ ದೀಪಾ ರಾಥೋಡ, ಶಾಂತಮ್ಮ ದೊಡ್ಡಮನಿ, ನಾಗಪ್ಪ ದೇವಪುರ, ಟಿ. ದೊಡ್ಡಪ್ಪ, ವಿರೂಪಣ್ಣ ದೊಡ್ಡಮನಿ, ಮಾಜಿ ಅಧ್ಯಕ್ಷ ಸಿ.ಎಚ್. ರವಿನಂದನ್, ಕರಿಯಪ್ಪ, ಪ್ರಕಾಶರಾವ್, ಕೆ.ಪರಸಪ್ಪ, ಜೆ.ವೆಂಕಟೇಶ್, ಮಲ್ಲಯ್ಯ ಚೌದರಿ ಸೇರಿ ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಮುಖಂಡರಾದ ಕೆ. ಸಿದ್ದನಗೌಡ, ಎಚ್.ಈಶಪ್ಪ, ಚನ್ನಬಸಪ್ಪ ಸುಂಕದ, ನಾಗರಾಜ್ ಅರಳಿ ಇದ್ದರು. ತಹಸೀಲ್ದಾರ್ ಎಂ. ಕುಮಾರಸ್ವಾಮಿ ಮತ್ತು ಸೋಮನಾಥ ದೊಡ್ಡಮನಿ ಕಾರ್ಯಕ್ರಮ ನಿರ್ವಹಿಸಿದರು.