ಪ್ರಪಂಚದಲ್ಲಿ ಸಂಪನ್ಮೂಲ ಕಡಿಮೆ ಇರುವ ದೇಶಗಳೂ ಸಹ ಬದಲಾವಣೆಯಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿವೆ. ಆದರೆ, ಉಳಿದೆಲ್ಲಾ ರಾಷ್ಟ್ರಗಳಿಗಿಂತ ಭಾರತದಲ್ಲಿ ಸಂಪನ್ಮೂಲ ಹೆಚ್ಚಾಗಿದ್ದರೂ ಕೂಡ ನಮ್ಮ ಸ್ವಯಂ ಅಪರಾಧದಿಂದಾಗಿ ದೇಶದ ಅಭಿವೃದ್ಧಿ, ಶಿಸ್ತು ಹಾಗೂ ಸ್ವಚ್ಛತೆ ಕಡಿಮೆಯಾಗುತ್ತಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಮಹಿಳೆಯರು ಕುಟುಂಬದ ಕಣ್ಣಿದ್ದಂತೆ. ತನ್ನ ಪತಿಯಿಂದ ಹಿಡಿದು ಮಕ್ಕಳು ಮತ್ತು ಹಿರಿಯರನ್ನು ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತಿರುತ್ತಾರೆ. ಅಂತಹ ತಾಯಿಗೆ ಹೆಚ್ಚು ಶಕ್ತಿ ಕೊಟ್ಟರೆ ಆ ಕುಟುಂಬ ನೆಮ್ಮದಿ ಜೀವನ ನಡೆಸಲು ಅನುಕೂಲವಾಗುವಂತೆ 5 ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ತಾಲೂಕಿನ ಬೆಳ್ಳೂರು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಎಂಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ಸೇರಿದಂತೆ ಬ್ಯಾಂಕ್‌ನ ಆಡಳಿತ ಮಂಡಳಿ ಎಲ್ಲಾ ನಿರ್ದೇಶಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದಲ್ಲಿ ಸಂಪನ್ಮೂಲ ಕಡಿಮೆ ಇರುವ ದೇಶಗಳೂ ಸಹ ಬದಲಾವಣೆಯಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿವೆ. ಆದರೆ, ಉಳಿದೆಲ್ಲಾ ರಾಷ್ಟ್ರಗಳಿಗಿಂತ ಭಾರತದಲ್ಲಿ ಸಂಪನ್ಮೂಲ ಹೆಚ್ಚಾಗಿದ್ದರೂ ಕೂಡ ನಮ್ಮ ಸ್ವಯಂ ಅಪರಾಧದಿಂದಾಗಿ ದೇಶದ ಅಭಿವೃದ್ಧಿ, ಶಿಸ್ತು ಹಾಗೂ ಸ್ವಚ್ಛತೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ದೇಶದ ಅನೇಕ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ನೀಡಲಾಯಿತ್ತಾದರೂ, ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರವಷ್ಟೇ ಜನರಿಗೆ ಕೊಟ್ಟ ಭರವಸೆಯಂತೆ 5 ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಸಮರ್ಪಕವಾಗಿ ಜನರಿಗೆ ತಲುಪಿಸುತ್ತಿರುವುದು. ಈಗಾಗಲೇ 25ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಬಾಕಿಯಿರುವ ಎರಡು ತಿಂಗಳ ಕಂತಿನ ಪೈಕಿ ಒಂದು ತಿಂಗಳ ಹಣವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದರು.
ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ರೈತರಿಗೆ ಎಂಡಿಸಿಸಿ ಬ್ಯಾಂಕ್ ಮೂಲಕ ನೀಡುತ್ತಿದ್ದ 5 ಲಕ್ಷ ರು. ವರೆಗಿನ ಬಡ್ಡಿರಹಿತ ಸಾಲವನ್ನು 10ಲಕ್ಷಕ್ಕೆ ಏರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಪರಿಶಿಷ್ಟ ಜಾತಿ ವರ್ಗ ಸೇರಿದಂತೆ ಎಲ್ಲ ವರ್ಗದ ರೈತರಿಗೆ ಶೇ.90 ರಷ್ಟು ರಿಯಾಯ್ತಿ ದರದಲ್ಲಿ ಕೃಷಿ ಪರಿಕರಗಳ ವಿತರಿಸಲು ಆದೇಶಿಸಲಾಗಿದೆ ಎಂದರು.ಚುನಾವಣೆ ದಿನದಂದು ಮತ ಹಾಕುವಾಗ ಯಾರು ಯೋಗ್ಯರು, ಯಾರಿಗೆ ಮತ ಹಾಕಿದರೆ ಜನರ ಹಿತಬಯಸುತ್ತಾರೆ ಎಂಬುದನ್ನು ತಿಳಿಯಬೇಕು. ಸುಳ್ಳು ಭರವಸೆ, ಆಸೆ, ಆಮಿಷಗಳಿಗೆ ಒಳಗಾಗಿ ಅಸಮರ್ಥರಿಗೆ ಮತ ಹಾಕಿ ನಂತರ ಯೋಚಿಸಿದರೆ ಪ್ರಯೋಜನವಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ಮಾತನಾಡಿ, ಕಳೆದ ಬಜೆಟ್‌ನಲ್ಲಿ ರಾಜ್ಯದ 38 ಲಕ್ಷ ರೈತರಿಗೆ 28 ಸಾವಿರ ಕೋಟಿ ಹಣವನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದರು ಎಂದರು.ಸಾವಿರ ಕೋಟಿ ದುಡಿಯುವ ಬಂಡವಾಳ ಹೊಂದಿರುವ ಅಪೆಕ್ಸ್ ಬ್ಯಾಂಕ್ ರಾಜ್ಯದ ರೈತರಿಗೆ 10 ಸಾವಿರ ಕೋಟಿ ಹಣವನ್ನು ಶೂನ್ಯ ಬಡ್ಡಿ ದರದಲ್ಲಿ ನಬಾರ್ಡ್‌ನಿಂದ ಕೊಡಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ಕೇಂದ್ರಕೇವಲ 2,800 ಕೋಟಿ ಹಣವನ್ನು ಮಾತ್ರ ಕೊಟ್ಟಿದೆ. ಆದರೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಚಲುವರಾಯಸ್ವಾಮಿ ಅವರು ರಾಜ್ಯ ಸರ್ಕಾರದ ಬಂಡವಾಳದಿಂದಲೇ ರೈತರಿಗೆ ಸಾಲ ವಿತರಿಸಿದ್ದಾರೆ ಎಂದರು.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ಮಾತನಾಡಿ, ತಂದೆಗೆ ಬೆನ್ನೆಲುಬಾಗಿ ನಿಂತು ಅವರ ಒತ್ತಡವನ್ನು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಜನರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.ವೇದಿಕೆಯಲ್ಲಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ಅವರಿಗೆ ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಬೆಳ್ಳಿ ಗದೆ ನೀಡಿ ಅಭಿಮಾನಿಗಳು ಗೌರವಿಸಿದರು. ಎಂಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಎಲ್ಲಾ ನಿರ್ದೇಶಕರನ್ನು ಸನ್ಮಾನಿಸಲಾಯಿತು.
ನಂತರ ತಾಲೂಕಿನ ವಿವಿಧ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ಶುನ್ಯ ಬಡ್ಡಿದರದ ಸಾಲ ಮಂಜೂರಾತಿ ಪತ್ರ ವಿತರಿಸಲಾಯಿತು. ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಬೆಳ್ಳೂರು ಹೋಬಳಿಯ ವಿವಿಧ ಗ್ರಾಮಗಳ ಜನರು ಕೊಟ್ಟ ಅಹವಾಲು ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಹಸ್ತಾಂತರಿಸಿದ ಸಚಿವರು ಕಾಲಮಿತಿಯೊಳಗೆ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದರು.ಸಮಾರಂಭದಲ್ಲಿ ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಮನ್ಮುಲ್ ಅಧ್ಯಕ್ಷ ಶಿವಕುಮಾರ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಎಚ್.ಬಿ.ರಾಮು, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ಡಿವೈಎಸ್‌ಪಿ ಬಿ.ಚಲುವರಾಜು, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ವನಜಾಕ್ಷಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶುಭದಾಯಿನಿ, ಮುಖಂಡರಾದ ಎನ್.ಲಕ್ಷ್ಮೀಕಾಂತ್, ಬಿ.ಎಲ್.ದೇವರಾಜು, ತ್ಯಾಗರಾಜು, ಮೂಡ್ಲೀಗೌಡ, ಪದ್ಮನಾಭ (ಪಾಪಣ್ಣ) ಶಿವಣ್ಣ, ಕೆ.ಸಿ.ಜೋಗಿಗೌಡ, ಹರೀಶ್, ಅಂಬರೀಷ್, ಸುನಿಲ್ ಲಕ್ಷ್ಮಿಕಾಂತ್, ಎಚ್.ಟಿ.ಕೃಷ್ಣೇಗೌಡ, ಬಿ.ರಾಜೇಗೌಡ ಸೇರಿದಂತೆ ಹಲವರು ಇದ್ದರು.