ಇಂಗ್ಲೀಷ್‌ ಭಾಷೆ ಮಾತನಾಡಿದರೆ ಅವರು ಬುದ್ಧಿವಂತರು ಎಂಬ ಕಾಲವೊಂದಿತ್ತು, ಆದರೆ ಈಗ ಕಾಲ ಬದಲಾಗಿದೆ ಬೆಂಗಳೂರು ಸೇರಿದಂತೆ ಹೊರ ದೇಶದ ಕನ್ನಡಿಗರೂ ಕನ್ನಡ ಮಾತನಾಡಲು ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ಶಾಸಕ ಬಿ.ಪಿ.ಹರೀಶ್‌ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹರಿಹರ

ಇಂಗ್ಲೀಷ್‌ ಭಾಷೆ ಮಾತನಾಡಿದರೆ ಅವರು ಬುದ್ಧಿವಂತರು ಎಂಬ ಕಾಲವೊಂದಿತ್ತು, ಆದರೆ ಈಗ ಕಾಲ ಬದಲಾಗಿದೆ ಬೆಂಗಳೂರು ಸೇರಿದಂತೆ ಹೊರ ದೇಶದ ಕನ್ನಡಿಗರೂ ಕನ್ನಡ ಮಾತನಾಡಲು ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ಶಾಸಕ ಬಿ.ಪಿ.ಹರೀಶ್‌ ಅಭಿಪ್ರಾಯಪಟ್ಟರು.

ನಗರದ ಕ್ರೀಡಾಂಗಣದಲ್ಲಿ ನಡೆದ ೭೦ನೇ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡದ ನೆಲ ಜಲದ ರಕ್ಷಣೆ ವಿಷಯ ಬಂದಾಗ ಪ್ರತಿಯೊಬ್ಬರೂ ಹೋರಾಟಕ್ಕೆ ಇಳಿಯಬೇಕಾದ ಅಗತ್ಯ ಇದೆ. ಕಾವೇರಿ ನದಿಯ ನೀರಿಗಾಗಿ ತಮಿಳು ನಾಡಿನೊಂದಿಗೆ ಹಾಗೂ ಕೃಷ್ಣಾ ನದಿ ನೀರಿನ ವಿಷಯದಲ್ಲಿ ನೆರೆಯ ಆಂದ್ರದೊಡನೆ ಹೋರಾಟಕ್ಕೆ ಇಳಿಯುವ ಅಗತ್ಯ ಇದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ ಮಾತನಾಡಿ, ನಗರಸಭಾ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಶಾಸಕರು ಮುಂದಿನ ವರ್ಷದೊಳಗೆ ಸೂಕ್ತ ನಿವೇಶನ ಕೊಡಿಸಬೇಕು ಎಂದು ಮನವಿ ಮಾಡಿದರು.

ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್‌, ಧೂಳೆಹೋಳೆಯ ಜಿಎಂಸಿಜಿ ಪ್ರೌಢಶಾಲೆ ಕನ್ನಡ ಭಾಷಾ ಶಿಕ್ಷಕ ಕೆ.ಸಂತೋಷ್‌ ಕುಮಾರ್‌ ಉಪನ್ಯಾಸ ನೀಡಿದರು. ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಆಚರಣಾ ಸಮಿತಿ ಆಧ್ಯಕ್ಷ ಕೆ.ಎಂ.ಗುರುಬಸವರಾಜ್‌ ಧ್ವಜಾರೋಹಣ ಮಾಡಿದರು.

ತಾಪಂ ಇಒ ಎಸ್‌.ಪಿ.ಸುಮಲತಾ, ಪೌರಾಯುಕ್ತ ಎಂ.ಪಿ.ನಾಗಣ್ಣ, ಬಿಇಒ ಡಿ. ದುರುಗಪ್ಪ, ಅರಕ್ಷಕ ನಿರೀಕ್ಷಕ ಆರ್‌.ಎಫ್‌. ದೇಸಾಯಿ, ವೃತ್ತ ನಿರೀಕ್ಷಕ ಸುರೇಶ್‌ ಸಗರಿ, ಇತರರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮೊದಲು ನಗರದ ಹರಿಹರೇಶ್ವರ ದೇವಸ್ಥಾನದಿಂದ ಭುವನೇಶ್ವರಿ ಮಾತೆಯ ಭಾವಚಿತ್ರವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.