ತನಿಖೆಯಲ್ಲಿ ಮಹತ್ವದ ಸಂಗತಿಗಳು ಬೆಳಕಿಗೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಚಿಕ್ಕಮಗಳೂರಿನ ಸಮೀಪದ ಮಾಣಿಕ್ಯಧಾರ ಜಲಪಾತ್ರದ ಪಕ್ಕದ 2 ಸಾವಿರ ಅಡಿ ಪ್ರಪಾತದಲ್ಲಿ ಪತ್ತೆಯಾದ ಕೇರಳ ಮೂಲದ ಬಾಲಕಿ ಶ್ರೀನಂದಾ (15) ಸಾವಿನ ಪ್ರಕರಣಕ್ಕೆ ಇದೀಗ ಬಾಲಕಿ ಕೊನೆಯದಾಗಿ ಸ್ನೇಹಿತೆಯೊಂದಿಗೆ 1000 ಸೆಂಕೆಡ್ ಮೊಬೈಲ್ ನಲ್ಲಿ ಮಾತನಾಡಿರುವುದು ಈ ಇಡೀ ಪ್ರಕರಣಕ್ಕೆ ದೊಡ್ಡ ತಿರುವು ನೀಡುವ ಸಾಧ್ಯತೆ ಇದೆ.ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಕೆಲವು ಮಹತ್ವದ ಸಂಗತಿ ಬೆಳಕಿಗೆ ಬಂದಿವೆ. ಶ್ರೀನಂದಾ ನಾಪತ್ತೆಯಾಗುವ ಮುನ್ನ ಸುಮಾರು 1 ಸಾವಿರ ಸೆಕೆಂಡ್‌ಗಳ ಕಾಲ ಮೊಬೈಲ್‌ನಲ್ಲಿ ಮಾತನಾಡಿದ್ದಳು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ವಿಶೇಷವಾಗಿ ಆಕೆ ತನ್ನ ಸ್ನೇಹಿತೆಯೊಂದಿಗೆ ಸುಮಾರು ಹದಿನೈದು ನಿಮಿಷಗಳ ಕಾಲ ಸಂಭಾಷಣೆ ನಡೆಸಿದ್ದಾಳೆ ಎಂಬ ಮಾಹಿತಿಯೂ ಹೊರಬಿದ್ದಿದೆ.ಮೊಬೈಲ್ ಬಳಕೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ತಂದೆ ತನ್ನ ಮಗಳಿಗೆ ಬುದ್ದಿಮಾತು ಹೇಳಿದ್ದರು ಎಂಬ ವಿಷಯ ಕೂಡ ಶ್ರೀನಂದಾ ಕುಟುಂಬದ ಮೂಲಗಳಿಂದ ಲಭ್ಯವಾಗಿದೆ. ತಂದೆಯ ಗದರಿಕೆಯಿಂದ ಮನಸ್ಸಿಗೆ ಬೇಸರಮಾಡಿಕೊಂಡು ಬಾಲಕಿ ಅತಿ ಎತ್ತರದ ಪ್ರದೇಶದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಆದರೆ ಈ ವಿಷಯವನ್ನು ಪೊಲೀಸರು ಇನ್ನಷ್ಟು ಪರಿಶೀಲಿಸುತ್ತಿದ್ದಾರೆ.
ಇನ್ನೊಂದೆಡೆ ಬಾಲಕಿ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಶುಕ್ರವಾರ ಸಂಜೆ ಸುಮಾರು 6.30 ರ ವೇಳೆಗೆ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಬ್ಬರು ತಜ್ಞ ವೈದ್ಯರಿಂದ ವಿಡಿಯೋ ದಾಖಲು ಮಾಡಿಕೊಳ್ಳುವುದರೊಂದಿಗೆ ಪರಿಶೀಲನೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ಸಾವಿನ ನಿಜವಾದ ಕಾರಣ ಸ್ಪಷ್ಟವಾಗಲಿದೆ. ಒಟ್ಟಿನಲ್ಲಿ, ಈ ಪ್ರಕರಣದಲ್ಲಿ ಹಲವು ಅನುಮಾನಾಸ್ಪದ ಅಂಶಗಳಿರುವ ಸಾಧ್ಯತೆಗಳಿದ್ದು, ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ತನಿಖೆ ದಿಕ್ಕು ಬದಲಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸ ಲಾಯಿತು. ಇಬ್ಬರು ತಜ್ಞ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಾಮಾನ್ಯವಾಗಿ ಒಬ್ಬರು ವೈದ್ಯರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುತ್ತಾರೆ. ಈ ಪ್ರಕರಣದಲ್ಲಿ ಪೊಲೀಸರ ಮನವಿ ಮೇರೆಗೆ ವೈದ್ಯರಾದ ಲೋಹಿತ್ ಹಾಗೂ ಜಯಲಕ್ಷ್ಮಿ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವರದಿ ಬಂದ ನಂತರವಷ್ಟೆ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ.