ಬೀದಿದೀಪಗಳ ಕೊರತೆ ಮತ್ತು ನಿರ್ವಹಣೆಯ ಅವ್ಯವಸ್ಥೆಯಿಂದ ನಗರದ ರಸ್ತೆಗಳು, ವೃತ್ತಗಳು ಹಾಗೂ ವಿವಿಧ ವಾರ್ಡ್ಗಳಲ್ಲಿ ರಾತ್ರಿ ವೇಳೆ ಕತ್ತಲು ಆವರಿಸುತ್ತಿದ್ದು ಪಾದಚಾರಿಗಳು, ಮಹಿಳೆಯರು, ವೃದ್ಧರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುಬೀದಿದೀಪಗಳ ಕೊರತೆ ಮತ್ತು ನಿರ್ವಹಣೆಯ ಅವ್ಯವಸ್ಥೆಯಿಂದ ನಗರದ ರಸ್ತೆಗಳು, ವೃತ್ತಗಳು ಹಾಗೂ ವಿವಿಧ ವಾರ್ಡ್ಗಳಲ್ಲಿ ರಾತ್ರಿ ವೇಳೆ ಕತ್ತಲು ಆವರಿಸುತ್ತಿದ್ದು ಪಾದಚಾರಿಗಳು, ಮಹಿಳೆಯರು, ವೃದ್ಧರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರವೆಂಬ ಹೆಗ್ಗಳಿಕೆ ಹೊಂದಿರುವ ರಾಣಿಬೆನ್ನೂರಿನಲ್ಲಿ ಜನಸಂಖ್ಯೆ ಮತ್ತು ವಾಹನ ಸಂಚಾರವೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಬೀದಿದೀಪಗಳಂತಹ ಮೂಲಭೂತ ಸೌಕರ್ಯಗಳ ನಿರ್ವಹಣೆ ಜನರ ಸುರಕ್ಷತೆಯ ದೃಷ್ಟಿಯಿಂದ ಮಹತ್ವದ್ದಾಗಿವೆ. ಆದರೆ ಬೀದಿದೀಪಗಳ ನಿರ್ವಹಣೆಗೆ ಲಕ್ಷಾಂತರ ರು. ವ್ಯಯಿಸಿದರೂ ನಗರದ ಹಲವು ಭಾಗಗಳಲ್ಲಿ ಕತ್ತಲೆ ಭಾಗ್ಯ ಮುಂದುವರಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ನಗರದ ಹಳೇ ಪಿ.ಬಿ. ರಸ್ತೆ, ಹಳೇ ಮಾಗೋಡ ರಸ್ತೆ, ಹಳೇ ಅಂತರವಳ್ಳಿ ರಸ್ತೆ, ಸಿದ್ದೇಶ್ವರ ನಗರ, ಮಾರುತಿ ನಗರ, ವಿದ್ಯಾನಗರ, ಗೌರಿಶಂಕರ ನಗರ, ಚನ್ನೇಶ್ವರ ನಗರ, ಈಶ್ವರ ನಗರ, ಸಿದ್ಧಾರೂಢ ನಗರ, ಶ್ರೀರಾಮ ನಗರ, ಮೆಡ್ಲೇರಿ ರಸ್ತೆ, ಹುಣಿಸಿಕಟ್ಟಿ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಬೀದಿ ದೀಪಗಳು ಹಾಳಾಗಿವೆ. ಕೆಲವು ಕಡೆಗಳಲ್ಲಿ ದೀಪಗಳೇ ಇಲ್ಲದಿರುವುದು ಜನರಿಗೆ ತೊಂದರೆಯಾಗಿದೆ.
ಕಂಬಗಳಿದ್ದರೂ ಬೆಳಕಿನ ಕೊರತೆ:ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 6227 ವಿದ್ಯುತ್ ಕಂಬಗಳಿವೆ. ಇವುಗಳಲ್ಲಿ 2,218 ಹಳೆಯ ಫ್ಲೋರೆಸೆಂಟ್ ಟ್ಯೂಬ್ಲೈಟ್ಗಳು, 1,790 ಸೋಡಿಯಂ ದೀಪಗಳು, 941 ಎಲ್ಇಡಿ ದೀಪಗಳು (72 ವ್ಯಾಟ್), 1,598 ಎಲ್ಇಡಿ ದೀಪಗಳು (90 ವ್ಯಾಟ್) ಹಾಗೂ 580 ಹೈಮಾಸ್ಕ್ ದೀಪಗಳು ಸೇರಿವೆ. ನಗರದಾದ್ಯಂತ ಇಷ್ಟೊಂದು ಪ್ರಮಾಣದಲ್ಲಿ ವಿದ್ಯುತ್ ಕಂಬಗಳು ಮತ್ತು ವಿವಿಧ ಬಗೆಯ ದೀಪಗಳಿದ್ದರೂ ಹಲವು ರಸ್ತೆಗಳಲ್ಲಿ ನಿರೀಕ್ಷಿತ ಪ್ರಮಾಣದ ಬೆಳಕು ದೊರೆಯುತ್ತಿಲ್ಲ. ಹಳೆಯ ದೀಪಗಳ ಬದಲಿಗೆ ಹೊಸ ದೀಪಗಳನ್ನು ಅಳವಡಿಸುವಲ್ಲಿ ಉಂಟಾಗಿರುವ ಲೋಪಗಳಿಂದ ಸಮಸ್ಯೆ ಉಲ್ಬಣಿಸಿದೆ.₹98 ಲಕ್ಷ ಪ್ರಸ್ತಾವನೆ: ಬೀದಿದೀಪಗಳ ವಾರ್ಷಿಕ ನಿರ್ವಹಣೆಗಾಗಿ ಲಕ್ಷಾಂತರ ರು. ಖರ್ಚು ಮಾಡಲಾಗುತ್ತಿದೆ. ಪ್ರಸ್ತುತ ನಗರಸಭೆಯಿಂದ ಒಟ್ಟು 7129 ಹೊಸ ದೀಪಗಳ ಅಳವಡಿಕೆಗೆ ₹98 ಲಕ್ಷ ಮೊತ್ತದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.
ಅಪಘಾತದ ಆತಂಕ: ರಸ್ತೆಗಳಲ್ಲಿ ಸಮರ್ಪಕ ಬೆಳಕಿಲ್ಲದ ಕಾರಣ ವಾಹನ ಸವಾರರು, ಪಾದಚಾರಿಗಳು, ಮಹಿಳೆಯರು ಹಾಗೂ ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಗುಂಡಿಗಳು, ತಿರುವುಗಳು ಮತ್ತು ರಸ್ತೆ ಬದಿಯಲ್ಲಿ ನಿಲ್ಲಿಸಿರುವ ವಾಹನಗಳು ಕತ್ತಲಲ್ಲಿ ಸರಿಯಾಗಿ ಕಾಣದೆ ಅಪಘಾತ ಸಂಭವಿಸುವ ಆತಂಕವೂ ಇದೆ. ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳುವವರಿಗೂ ಹಾಗೂ ರಾತ್ರಿ ಕೆಲಸ ಮುಗಿಸಿ ಮನೆಗೆ ಮರಳುವ ಮಹಿಳೆಯರಿಗೂ ಬೆಳಕಿನ ಕೊರತೆ ಸಮಸ್ಯೆಯಾಗಿದೆ.ಕತ್ತಲಿನಿಂದ ಕೂಡಿದ ನಿರ್ಜನ ರಸ್ತೆಗಳಲ್ಲಿ ಕಳ್ಳತನ ಸೇರಿದಂತೆ ಅಹಿತಕರ ಘಟನೆಗಳ ಭೀತಿಯೂ ಜನರನ್ನು ಕಾಡುತ್ತಿದೆ. ಹೀಗಾಗಿ ನಗರಸಭೆಯು ಹೊಸ ದೀಪಗಳ ಅಳವಡಿಕೆಗೆ ವೇಗ ನೀಡುವ ಜತೆಗೆ ಈಗಾಗಲೇ ಇರುವ ದೀಪಗಳ ನಿರಂತರ ನಿರ್ವಹಣೆಗೂ ಆದ್ಯತೆ ನೀಡಬೇಕು. ಪ್ರಮುಖ ರಸ್ತೆಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ತಕ್ಷಣ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಗರದ ಅನೇಕ ಕಡೆ ವಿದ್ಯುತ್ ದೀಪಗಳ ಕೊರತೆಯಿದೆ. ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಲಕ್ಷಾಂತರ ರುಪಾಯಿ ವೆಚ್ಚದ ಪ್ರಸ್ತಾವನೆ ಕಾಗದಕ್ಕೆ ಸೀಮಿತವಾಗದೆ, ಅದರ ಪ್ರಯೋಜನ ಜನರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಜಗದೀಶ ಅಂಕಲಕೋಟಿ ಹೇಳಿದರು.ನಗರದಲ್ಲಿ ವಿದ್ಯುತ್ ಬೀದಿದೀಪಗಳ ಕೊರತೆ ಬಗ್ಗೆಹರಿಸಲು ಈಗಾಗಲೇ ಸರ್ವೆ ಕಾರ್ಯ ನಡೆಸಿ ಅಂದಾಜು ₹98 ಲಕ್ಷ ವೆಚ್ಚದ ವಿದ್ಯುತ್ ದೀಪಗಳ ಅಳವಡಿಕೆಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದಷ್ಟು ಬೇಗ ಟೆಂಡರ್ ಕರೆದು ಕೆಲಸ ಆರಂಭಿಸಲಾಗುವುದು ಎಂದು ರಾಣಿಬೆನ್ನೂರು ನಗರಸಭೆ ಆಯುಕ್ತ ಪಕ್ಕೀರಪ್ಪ ಇಂಗಳಗಿ ಹೇಳಿದರು.