ಅಸಮರ್ಪಕ ಯೂರಿಯಾ ಪೂರೈಕೆ; ಬಿಜೆಪಿ ಪ್ರತಿಭಟನೆ

| Published : Aug 01 2025, 12:30 AM IST

ಸಾರಾಂಶ

ರಾಜ್ಯದಲ್ಲಿ ರಸಗೊಬ್ಬರ ಕಾಳದಂಧೆ ನಡೆಯುತ್ತಿದೆ. ರೈತರು ದುಪ್ಪಟ್ಟು ಹಣ ನೀಡಿ ಯುರಿಯಾ ಗೊಬ್ಬರ ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ

ಗದಗ: ಕೇಂದ್ರ ಸರ್ಕಾರ ನೀಡಿರುವ ರಸಗೊಬ್ಬರವನ್ನು ರೈತರಿಗೆ ಸರಿಯಾಗಿ ಹಂಚಿಕೆ ಮಾಡುತ್ತಿಲ್ಲ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಗಾಂಧಿ ವೃತ್ತದಲ್ಲಿ ಗುರುವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯದಲ್ಲಿ ಕಳಪೆ ಬಿತ್ತನೆ ಬೀಜ ವಿತರಣೆ ಮತ್ತು ರಸಗೊಬ್ಬರ ಕೊರತೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ರೈತರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ರೈತರಿಗೆ ಒಳಿತಾಗುವಂತಹ ಯಾವುದೇ ನಿರ್ಧಾರ, ಯೋಜನೆಗಳನ್ನು ತೆಗೆದುಕೊಳ್ಳುತ್ತಿಲ್ಲ. ಕೃಷಿ ಸಚಿವ ಚೆಲುವನಾರಾಯಣ ಸ್ವಾಮಿ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ರಸಗೊಬ್ಬರ ಕಾಳದಂಧೆ ನಡೆಯುತ್ತಿದೆ. ರೈತರು ದುಪ್ಪಟ್ಟು ಹಣ ನೀಡಿ ಯುರಿಯಾ ಗೊಬ್ಬರ ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಗುಣಮಟ್ಟದ ಬಿತ್ತನೆ ಬೀಜ ನೀಡದೆ ಕಳಪೆ ಬಿತ್ತನೆ ಬೀಜ ನೀಡಿದ್ದರಿಂದ ರೈತರು ಕಂಗಾಲಾಗಿ ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಪೂರೈಕೆ ಮಾಡಿದ ಯೂರಿಯಾದಲ್ಲಿ 2 ಲಕ್ಷ ಟನ್ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಇದರಿಂದ ರೈತರಿಗೆ ಯೂರಿಯಾ ಕೊರತೆ ಕಾಡುತ್ತಿದೆ. ಕೇಂದ್ರದ ಪೂರೈಕೆಯನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸುತ್ತಿಲ್ಲ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.

ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಬಫರ್ ಸ್ಟಾಕಿಗೆ ₹1000 ಕೋಟಿ ನೀಡುತ್ತಿದ್ದರು.ಆದರೆ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಬಫರ್ ಸ್ಟಾಕಿಗೆ ಮೀಸಲಿರಿಸಿರುವ ಹಣದ ಪ್ರಮಾಣ ಇಳಿಸಿ ಪ್ರಸ್ತುತ ₹400 ಕೋಟಿ ನೀಡಿದ್ದಾರೆ. ಸಂಗ್ರಹಕ್ಕೆ ನೀಡಬೇಕಿದ್ದ ₹ 600 ಕೋಟಿಗಳಷ್ಟು ಹಣ ಕಾಂಗ್ರೆಸ್ ಸರ್ಕಾರ ಕಡಿಮೆ ಮಾಡಿದೆ. ರಾಜ್ಯ ಸರ್ಕಾರ ಕೂಡಲೇ ಹಿಂದಿನಂತೆ ಹಣ ನೀಡಬೇಕೆಂದು ಒತ್ತಾಯಿಸಲಾಯಿತು.

ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕೃಷಿ ಸಚಿವರು ತಕ್ಷಣ ಜಾಗೃತರಾಗಿ ಕಳಪೆ ಬಿತ್ತನೆ ಬೀಜ ಮತ್ತು ಕಲಬೆರಕೆ ಗೊಬ್ಬರ ನೀಡುವ ಏಜೆನ್ಸಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ಯೂರಿಯಾ ಗೊಬ್ಬರ ಸಮಪರ್ಕವಾಗಿ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದಿಂದ 8.20 ಲಕ್ಷಕ್ಕೂ ಹೆಚ್ಚು ಮೆಟ್ರಿಕ್ ಟನ್ ಯೂರಿಯಾ ರಾಜ್ಯಕ್ಕೆ ಬಂದಿದೆ. ಆದರೆ, 5.55 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಮಾತ್ರ ರಾಜ್ಯದ ಮಾರ್ಕೆಟ್‌ನಲ್ಲಿದೆ. ಉಳಿದ ಯೂರಿಯಾ ಗೊಬ್ಬರ ಏನಾಗಿದೆ ಎಂಬುದನ್ನು ಸರ್ಕಾರ ತಿಳಿಸಬೇಕು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೈತ ಮಕ್ಕಳಿಗೆ ಅನುಕೂಲವಾಗುವ ರೀತಿ ಕೊಡುತ್ತಿದ್ದ ರೈತ ವಿದ್ಯಾನಿಧಿ ಯೋಜನೆ ನಿಲ್ಲಿಸಿದ್ದಾರೆ. ಅದನ್ನು ಪುನರಾರಂಭ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ರವಿ ದಂಡಿನ, ಶಶೀಧರ ದಿಂಡೂರು, ಎಂ.ಎಸ್. ಕರೀಗೌಡರ, ಉಷಾ ದಾಸರ, ಅನಿಲ ಅಬ್ಬಿಗೇರಿ, ಚಂದ್ರು ತಡಸದ, ರಾವೇಂದ್ರ ಯಳವತ್ತಿ, ನಿಂಗಪ್ಪ ಮಣ್ಣೂರು, ಅನೀಲ ಅಬ್ಬಿಗೇರಿ, ಶ್ರೀಪತಿ ಉಡಪಿ, ಲಿಂಗರಾಜ ಪಾಟೀಲ, ವಿಜಯಲಕ್ಷ್ಮೀ ಮಾನವಿ ಸೇರಿದಂತೆ ಕಾರ್ಯಕರ್ತರು ಇದ್ದರು.