ಅಸಮರ್ಪಕ ಜಲ ಜೀವನ್ ಕಾಮಗಾರಿ, ಗ್ರಾಮಸ್ಥರ ಆಕ್ರೋಶ

| Published : Nov 20 2025, 01:15 AM IST

ಅಸಮರ್ಪಕ ಜಲ ಜೀವನ್ ಕಾಮಗಾರಿ, ಗ್ರಾಮಸ್ಥರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಜಲಜೀವನ್ ಮಿಷನ್ ಕಾಮಗಾರಿ ಅಸಮರ್ಪಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಸಂಬಂಧಪಟ್ಟ ಗ್ರಾಮೀಣ ಕುಡಿಯುವ ನೀರು ಯೋಜನೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಂಗಳವಾರ ತಾಲೂಕಿನ ಬೆಡಸಗಾಂವ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ನಡೆದ ಗ್ರಾಪಂ ಗ್ರಾಮ ಸಭೆಯಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ಮುಂಡಗೋಡ

ಜಲಜೀವನ್ ಮಿಷನ್ ಕಾಮಗಾರಿ ಅಸಮರ್ಪಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಸಂಬಂಧಪಟ್ಟ ಗ್ರಾಮೀಣ ಕುಡಿಯುವ ನೀರು ಯೋಜನೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಂಗಳವಾರ ತಾಲೂಕಿನ ಬೆಡಸಗಾಂವ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ನಡೆದ ಗ್ರಾಪಂ ಗ್ರಾಮ ಸಭೆಯಲ್ಲಿ ಜರುಗಿತು.

ಸಭೆಗೆ ವಿಳಂಬವಾಗಿ ಆಗಮಿಸಿದ ಗ್ರಾಮೀಣ ಕುಡಿಯುವ ನೀರು ಯೋಜನೆ ಎಂಜಿನಿಯರ್‌ಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮನೆ ಮನೆಗೆ ನಲ್ಲಿ ನೀರು ಸರಬರಾಜು ಜಲಜೀವನ್ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದರಿಂದ ಯೋಜನೆಯನ್ನು ಹಳ್ಳ ಹಿಡಿಸಲಾಗಿದೆ. ಬೆಡಸಗಾಂವ ಗ್ರಾಮದ ೧೩೦ ಮನೆಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಅಲ್ಲದೇ ಕೆಲ ಮನೆಗಳಿಗೆ ಇದುವರೆಗೂ ನಲ್ಲಿ ಸಂಪರ್ಕವೇ ನೀಡಲಾಗಿಲ್ಲ. ಈ ಬಗ್ಗೆ ಗ್ರಾಪಂ ಅಭಿವೃದ್ದಿ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಜೆಜೆಎಂ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ನೀವು ನೋಡಿದರೆ ಕಾಮಗಾರಿ ಪೂರ್ಣಗೊಳಿಸಿ ಗ್ರಾಪಂಗೆ ಹಸ್ತಾಂತರ ಮಾಡಲಾಗಿದೆ ಎಂದು ಹೇಳುತ್ತೀರಿ. ಇದರಿಂದ ನಮಗೆ ಗೊಂದಲ ಉಂಟಾಗಿದ್ದು, ಇದರ ಬಗ್ಗೆ ನಾವು ಯಾರನ್ನು ಕೇಳಬೇಕು ಎಂದು ಗ್ರಾಮಸ್ಥರಾದ ವಿಜಯ ಶಾಂತು ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೆಜೆಎಂ ಇಲಾಖೆ ಅಧಿಕಾರಿ, ಒಂದು ವಾರದೊಳಗಾಗಿ ಎಲ್ಲ ಮನೆಗಳ ಪೈಪ್ ಲೈನ್ ಹಾಗೂ ನಲ್ಲಿಗಳ ದುರಸ್ತಿ ಮಾಡುವ ಭರವಸೆ ನೀಡಿದರು.

ಗ್ರಾಮದ ಮಳೆಮಾಪನ ಹಾಳಾಗಿದ್ದು, ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಏನು ಪ್ರಯೋಜನವಾಗಿಲ್ಲ. ತಕ್ಷಣ ಮಳೆ ಮಾಪನ ದುರಸ್ತಿ ಮಾಡಿಸುವಂತೆ ಬಗ್ಗೆ ರೈತ ದೇವೇಂದ್ರ ನಾಯ್ಕ ಗ್ರಾಪಂ ಅಧ್ಯಕ್ಷರ ಗಮನಕ್ಕೆ ತಂದರು. ಉದ್ಯೋಗ ಖಾತರಿ ಯೋಜನೆ ಸೇರಿದಂತೆ ವಿವಿಧ ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಗ್ರಾಪಂ ಅಧ್ಯಕ್ಷ ಮುಕುಂದ ನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಈಶ್ವರ ಪೂಜಾರಿ, ಗಣಪತಿ ನಾಯ್ಕ, ನಾಗರಾಜ ನಾಯ್ಕ, ಯಸ್ತೇರಾ ಸಿದ್ದಿ, ಮಾಲಿನಿ ನಾಯ್ಕ, ಪಿಡಿಒ ದಿವಾಕರ ಭಟ್ಟ, ಕಾರ್ಯದರ್ಶಿ ಗಜಾನನ ನಾಯ್ಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.