ಸಾರಾಂಶ
ಮಂಡ್ಯ : ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಮಂಡ್ಯ ಜಿಲ್ಲೆ ಬಹಳಷ್ಟು ಹಿಂದುಳಿದಿದೆ. ಇದನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಪಿಯು ಕಾಲೇಜು ಪ್ರಾಂಶುಪಾಲರಿಗೆ ಸಲಹೆ ನೀಡಿದರು.
ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದಿಂದ ನಗರದ ಎಸ್.ಬಿ. ಸಮುದಾಯ ಭವನದಲ್ಲಿ ನಡೆದ ಶೈಕ್ಷಣಿಕ ಕಾರ್ಯಾಗಾರ, ಕ್ಯಾಲೆಂಡರ್ ಬಿಡುಗಡೆ, ಜಿಲ್ಲೆಯ ಡಾಕ್ಟರೇಟ್ ಪದವಿ ಪಡೆದ ಪ್ರಾಂಶುಪಾಲರು, ಉಪನ್ಯಾಸಕರಿಗೆ ನಡೆದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ಬಾರಿಯ ಪದವಿ ಪೂರ್ವ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆ ೨೫ನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಕನಿಷ್ಠ ೧೫ನೇ ಸ್ಥಾನಕ್ಕಾದರೂ ಹೆಚ್ಚಿಸುವಂತೆ ಸಲಹೆ ನೀಡಿದ ಅವರು, ಇದಕ್ಕಾಗಿ ಉಪನ್ಯಾಸಕರು, ಅಧ್ಯಾಪಕರು, ಪ್ರಾಂಶುಪಾಲರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಪ್ರತಿಯೊಬ್ಬ ಪೋಷರಿಗೂ ತಮ್ಮ ಮಕ್ಕಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ವೈದ್ಯರು, ಎಂಜಿನಿಯರ್ ಆಗಬೇಕು ಎಂಬ ಕನಸನ್ನು ಹೊತ್ತಿರುತ್ತಾರೆ. ಆದರೆ, ಉಪನ್ಯಾಸಕರು ಮತ್ತು ಅಧ್ಯಾಪಕರು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳಿಗೆ ಕಾಲ ಕಾಲಕ್ಕೆ ಅಗತ್ಯ ಜ್ಞಾನಾರ್ಜನೆ ನೀಡಬೇಕು. ಕೇವಲ ಅಂಕ ಗಳಿಸುವುದು, ಪರೀಕ್ಷೆಯಲ್ಲಿ ಪಾಸಾದರೆ ಸಾಕು ಎಂಬ ಮನೋಭಾವನೆಯಿಂದ ಕಲಿಸುವುದು ಸರಿಯಲ್ಲ. ೧ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಒಳ್ಳೆಯ ಶಿಕ್ಷಣ ಸಿಕ್ಕರೆ ಮಾತ್ರ ಆತನ ಭವಿಷ್ಯ ಉಜ್ವಲವಾಗಿರಲು ಸಾಧ್ಯ. ಇದನ್ನು ಪ್ರತಿಯೊಬ್ಬ ಉಪನ್ಯಾಸಕರೂ ಅರ್ಥ ಮಾಡಿಕೊಂಡು ಇಂದಿನಿಂದಲೇ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ತಯಾರು ಮಾಡಬೇಕು ಎಂದರು.
ಈ ಬಾರಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಶಿಕ್ಷಕರು ಮತ್ತು ಉಪನ್ಯಾಸಕರ ಮೇಲೆ ಹೆಚ್ಚಿನ ಭರವಸೆ ಇದೆ. ಅದಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಎಲ್ಲರ ಕರ್ತವ್ಯವೂ ಆಗಿದೆ ಎಂದರು.
ದಕ್ಷಿಣ ಪದವೀಧರರ ಕ್ಷೇತ್ರದಿಂದ ನಾನು ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದು, ಇದಕ್ಕೆ ನೀವೆಲ್ಲರೂ ಸಹಕಾರ ನೀಡಿದ್ದೀರಿ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಸಿದ್ಧನಿದ್ದೇನೆ. ಪ್ರಾಂಶುಪಾಲರ ಕಟ್ಟಡಕ್ಕೆ ಅನುದಾನ ಕೇಳಿದ್ದು, ಅದನ್ನು ಕೊಡುವುದಾಗಿ ಘೋಷಿಸಿದರಲ್ಲದೆ, ಮುಂದೆಯೂ ಮತ್ತಷ್ಟು ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ವೇಳೆ ಉಪನ್ಯಾಸಕರು ಮತ್ತು ಪ್ರಾಂಶುಪಾಲರನ್ನು ಸನ್ಮಾನಿಸಿ ಗೌರವಿಸಲಾಯಿತು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುಖ್ಯ ಅಡಳಿತಾಕಾರಿ ಡಾ.ಎನ್.ಶಿವರಾಮ್‌ರೆಡ್ಡಿ ಪ್ರಧಾನ ಭಾಷಣ ಮಾಡಿದರು. ಪದವಿಪೂರ್ವ ಇಲಾಖೆ ಉಪನಿರ್ದೇಶಕ ಸಿ. ಚಲುವಯ್ಯ, ಎಸ್.ಬಿ. ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲರ ಸಂಘದ ಖಜಾಂಚಿ ರಾಮೇಗೌಡ, ಅಧ್ಯಕ್ಷ ನಟರಾಜ್ ಯು.ಎಸ್. ಪ್ರಧಾನ ಕಾರ್ಯದರ್ಶಿ ಪಿ.ಕಾಂತರಾಜು ಇತರರಿದ್ದರು.