ಯೋಗದಿಂದ ಮಾನಸಿಕ, ದೈಹಿಕ ಆರೋಗ್ಯದ ವೃದ್ಧಿ

| Published : Jun 22 2024, 12:51 AM IST

ಸಾರಾಂಶ

ಯೋಗ ಮಾಡುವುದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಹೆಚ್ಚುತ್ತದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಯೋಗ ಮಾಡುವುದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಹೆಚ್ಚುತ್ತದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.

ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಗರದ ಸರ್. ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಯೋಗ ನಿರತ ಸಂಘ- ಸಂಸ್ಥೆಗಳಿಂದ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

೨೦೧೫ ರಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜೂ.೨೧ನ್ನು ವಿಶ್ವ ಯೋಗ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ವಿಶ್ವ ಸಂಸ್ಥೆಯಲ್ಲಿ ಮಂಡಿಸಿದರು. ಬಹುತೇಕ ರಾಷ್ಟ್ರಗಳು ಒಪ್ಪಿಗೆ ಸೂಚಿಸಿದವು. ಅಂದಿನಿಂದ ವಿಶ್ವ ಯೋಗ ದಿನಾಚರಣೆ ಮಾಡಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಯೋಗ ಮಾಡುವುದರಿಂದ ದೇಹಕ್ಕೆ ತೇಜಸ್ಸು ದೊರಕುತ್ತದೆ. ಯೋಗವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ದಿನವಿಡೀ ಉಲ್ಲಾಸದಿಂದ ಇರಲು ಸಹಕಾರಿಯಾಗುತ್ತದೆ. ಯೋಗ ವಿಶ್ವದಲ್ಲಿ ಪ್ರಸಿದ್ಧಿ ಪಡೆದಿದೆ. ಎಲ್ಲಾ ಯೋಗ ಸಂಘ ಸಂಸ್ಥೆಗಳು ಯೋಗ ಬೆಳೆಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಯೋಗ ಮನಸ್ಸನ್ನು ಹಿಡಿತದಲ್ಲಿ ಇಡುತ್ತದೆ. ವಿಶ್ವದ ೧೮೬ ದೇಶಗಳಲ್ಲಿ ಯೋಗವು ಆಚರಿಸಲ್ಪಡುತ್ತದೆ. ಸನಾತನ ಋಷಿಗಳು ಯೋಗವನ್ನು ನೀಡಿದರು ಎಂದು ಮಾಹಿತಿ ನೀಡಿ, ಕಳೆದ ೧೦ ದಿನಗಳಿಂದ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳಲ್ಲಿ ಯುವೋತ್ಸವದ ಅಂಗವಾಗಿ ಯೋಗ ತರಬೇತಿ ನೀಡಲಾಗುತ್ತಿದೆ ಎಂದರು. ನಂತರ ವಿವಿಧ ಯೋಗ ಸಂಸ್ಥೆಗಳ ಯೋಗ ಪಟುಗಳು ಭಾಗವಹಿಸಿ ಯೋಗವನ್ನು ಪ್ರದರ್ಶಿಸಿದರು.

ಜೆಡಿಎಸ್ ಮುಖಂಡ ಸಿ.ಎಂ.ಆರ್.ಶ್ರೀನಾಥ್, ತಹಸೀಲ್ದಾರ್ ಹರ್ಷವರ್ಧನ್, ನಗರಸಭೆ ಆಯುಕ್ತ ಶಿವಾನಂದ್, ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ಡಿಡಿಪಿಐ ಕೃಷ್ಣಮೂರ್ತಿ, ಡಿಎಚ್‌ಒ ಡಾ.ಜಗದೀಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಘವೇಂದ್ರ ಶೆಟ್ಟಿಗಾರ್, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬಿಸಾಪ್ಪಗೌಡ, ಮಾರ್ಕಂಡೇಯ ಇದ್ದರು.