ಶುದ್ಧಗಂಗಾ ಯೋಜನೆಯಿಂದ ಜನರ ಆರೋಗ್ಯ ಸುಧಾರಣೆ: ಹೇಮಾವತಿ ಹೆಗ್ಗಡೆ

| Published : Dec 07 2024, 12:34 AM IST

ಸಾರಾಂಶ

ಜನ ಸಾಮಾನ್ಯರು ಶುದ್ಧನೀರನ್ನು ಬಳಸಿ ಕಾಯಿಲೆಯಿಂದ ಮುಕ್ತರಾಗಿ ಆರೋಗ್ಯ ಪೂರ್ಣ ಜೀವನ ನಡೆಸುವ ಉದ್ದೇಶದಿಂದ ಆರಂಭಗೊಂಡದ್ದೇ ಶುದ್ಧಗಂಗಾ ಯೋಜನೆ. ಶುದ್ಧ ನೀರಿನ ಸಮಸ್ಯೆ ಇರುವ ವಿವಿಧ ಗ್ರಾಮಗಳಲ್ಲಿ 2009ರಿಂದ ಇದುವರೆಗೆ ಒಟ್ಟು 476 ಶುದ್ಧಗಂಗಾ ಘಟಕಗಳನ್ನು ಸ್ಥಳೀಯಾಡಳಿತದ ಸಹಭಾಗಿತ್ವದಲ್ಲಿ ಆರಂಭಿಸಿ ಪ್ರತಿನಿತ್ಯ 5.91 ಲಕ್ಷಜನರಿಗೆ ಶುದ್ಧ ನೀರನ್ನು ಒದಗಿಸುತ್ತಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ನೀರು ಅಮೂಲ್ಯ ಸಂಪತ್ತಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡಲು ಪ್ರಕೃತಿಯು ನೀಡಿದ ಕೊಡುಗೆ. ಮಾನವ ಆಹಾರ ಇಲ್ಲದೆ 10 ದಿನವಾದರೂ ಬದುಕಬಹುದು. ಆದರೆ ನೀರಿಲ್ಲದೆ ಬದುಕಲಾಗದು. ನೀರು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಡಾ. ಹೇಮಾವತಿ ಹೆಗ್ಗಡೆ ಹೇಳಿದರು.

ರಾಜ್ಯಾದ್ಯಂತ ಶುದ್ಧಗಂಗಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರೊಂದಿಗೆ ಧರ್ಮಸ್ಥಳ ಬೀಡಿನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಶುದ್ಧ ನೀರಿನ ಸೇವನೆಯಿಂದ ಮುಖ್ಯವಾಗಿ ಮಹಿಳೆಯರು, ಮಕ್ಕಳ ಆರೋಗ್ಯದ ಮೇಲೆ ಆಗುತ್ತಿರುವ ಸಮಸ್ಯೆಯನ್ನು ಅರಿತುಕೊಂಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು. ಈ ಶುದ್ಧಗಂಗಾ ಘಟಕಗಳ ನೀರು ಬಳಸುವುದರಿಂದ ಹಲವು ಜನರ ಆರೋಗ್ಯ ರಕ್ಷಣೆಯಾಗಿದೆ. ಇದರ ಬಗ್ಗೆ ಇನ್ನಷ್ಟು ಜನರಿಗೆ ಮಾಹಿತಿ ನೀಡಿ ಶುದ್ಧ ನೀರನ್ನು ಬಳಸುವಂತೆ ಎಲ್ಲ ಮೇಲ್ವಿಚಾರಕರು ಪ್ರಯತ್ನಿಸಿದರೆ ಅದು ಪುಣ್ಯ ಕಾರ್ಯ. ವರ್ಷಕ್ಕೊಮ್ಮೆ ಗ್ರಾಹಕರ ಸಭೆ ನಡೆಸಿ ಶುದ್ಧ ನೀರಿನ ಬಳಕೆಯ ಪ್ರಯೋಜನ ತಿಳಿಸಬೇಕು ಎಂದರು. ಜನ ಸಾಮಾನ್ಯರು ಶುದ್ಧನೀರನ್ನು ಬಳಸಿ ಕಾಯಿಲೆಯಿಂದ ಮುಕ್ತರಾಗಿ ಆರೋಗ್ಯ ಪೂರ್ಣ ಜೀವನ ನಡೆಸುವ ಉದ್ದೇಶದಿಂದ ಆರಂಭಗೊಂಡದ್ದೇ ಶುದ್ಧಗಂಗಾ ಯೋಜನೆ. ಶುದ್ಧ ನೀರಿನ ಸಮಸ್ಯೆ ಇರುವ ವಿವಿಧ ಗ್ರಾಮಗಳಲ್ಲಿ 2009ರಿಂದ ಇದುವರೆಗೆ ಒಟ್ಟು 476 ಶುದ್ಧಗಂಗಾ ಘಟಕಗಳನ್ನು ಸ್ಥಳೀಯಾಡಳಿತದ ಸಹಭಾಗಿತ್ವದಲ್ಲಿ ಆರಂಭಿಸಿ ಪ್ರತಿನಿತ್ಯ 5.91 ಲಕ್ಷಜನರಿಗೆ ಶುದ್ಧ ನೀರನ್ನು ಒದಗಿಸುತ್ತಿದೆ.

ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್‌ ಕುಮಾರ್ ಎಸ್.ಎಸ್., ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ, ವಿಭಾಗದ ನಿರ್ದೇಶಕರಾದ ಶಿವಾನಂದ ಆಚಾರ್ಯ, ಯೋಜನಾಧಿಕಾರಿಗಳಾದ ಯುವರಾಜ್ ಜೈನ್, ಫಕ್ಕೀರಪ್ಪ ಬೆಲ್ಲಾಮುದ್ದಿ ಉಪಸ್ಥಿತರಿದ್ದರು.