ಸಾರಾಂಶ
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ಪ್ರತಿಯೊಂದು ಶೈಕ್ಷಣಿಕ ಮೇಳಗಳು ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗಿವೆ. ಮಕ್ಕಳ ಕಲಿಕಾ ಮೇಳದಿಂದ ಮಕ್ಕಳ ಶೈಕ್ಷಣಿಕ ಮಟ್ಟ ಹೆಚ್ಚಳವಾಗಲಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.ತಾಲೂಕಿನ ನಾಗೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅಜೀಂ ಪ್ರೇಮ್‌ಜಿ ಫೌಂಡೇಶನ್ ಜಿಲ್ಲಾ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ನಾಗೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಮುತ್ತಗಿ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಮೇಳದಲ್ಲಿ ಮಾತನಾಡಿದರು. ಕಲಿಕಾ ಮೇಳದಿಂದ ಮಕ್ಕಳಿಗೆ ವಿಷಯದ ಸರಳತೆ ಉಂಟಾಗುತ್ತದೆ. ಮಕ್ಕಳಲ್ಲಿ ಆಟದೊಂದಿಗೆ ಪಾಠ ಎನ್ನುವಂತೆ ವಿಷಯದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಈ ಕಲಿಕಾ ಮೇಳ ಮಕ್ಕಳಲ್ಲಿ ಹೊಸ ಹುಮ್ಮಸ್ಸು ಮೂಡಿಸಲಿದೆ ಎಂದರು.
ಶಿಕ್ಷಕರು ಪಾಠೋಪಕರಣ ಬಳಕೆ ಮಾಡಿ ಬೋಧನೆ ಮಾಡಿದರೆ ಉತ್ತಮ ಶಿಕ್ಷಣ ಕೊಡಲು ಸಾಧ್ಯ. ಕಲಿಕಾ ಮೇಳವು ಪ್ರತಿಯೊಂದು ಶಾಲೆಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಪ್ರೇರಣೆಯಾಗಲಿದೆ ಎಂದು ಹೇಳಿದರು.ಮುಖ್ಯಗುರುಗಳ ಸಂಘದ ಅಧ್ಯಕ್ಷ ಎಂ.ಬಿ.ತೋಟದ ಮಾತನಾಡಿ, ಒಂದು ಮಗು ಪ್ರತ್ಯಕ್ಷವಾಗಿ ಮಾಡಿ ಕಲಿತಿರುವುದಕ್ಕಿಂತ ಮೇಳದಲ್ಲಿ ನೋಡಿ ಕಲಿಯುವುದು ಬಹಳಷ್ಟಿದೆ. ಇಂತಹ ಮೇಳಗಳು ಗ್ರಾಮೀಣ ಭಾಗದ ಮಕ್ಕಳಿಗೆ ಅಗತ್ಯವಾಗಿದೆ. ನೋಡಿ ಕಲಿ, ಮಾಡಿ ತಿಳಿ, ಕೇಳಿ ಕಲಿ ಎಂಬ ಉಕ್ತಿಯಂತೆ ಬೋಧನೆ ನಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ರೇವಣಸಿದ್ದ ನಂದ್ಯಾಳ ಮಾತನಾಡಿದರು. ಮಣ್ಣೂರ ಗ್ರಾಪಂ ಸದಸ್ಯ ಶರಣಪ್ಪ ನಾಲತವಾಡ, ಶಿಕ್ಷಣ ಸಂಯೋಜಕಿ ಎ.ಎಸ್.ಗುಬ್ಬಾ, ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ನಿಂಗರಾಜ, ಮುಖ್ಯಗುರುಮಾತೆ ಎಸ್.ಎ.ಮುಂಡಗೋಡ, ಮುಖಂಡ ಚಂದ್ರಶೇಖರ ಮುಳವಾಡ, ವಿಕಲಚೇತನರ ಸಂಘದ ಅಧ್ಯಕ್ಷ ಬಂದೇನವಾಜ ವಾಲೀಕಾರ ಇದ್ದರು.ಸಿಆರ್‌ಸಿ ಮಹೇಶ ಪೂಜಾರಿ ಪ್ರಾಸ್ತವಿಕ ಮಾತನಾಡಿದರು. ಶರಣಬಸು ಮಿಣಜಗಿ ಸ್ವಾಗತಿಸಿದರು. ಸಿ.ಎಸ್.ಹಡಪದ ನಿರೂಪಿಸಿದರು. ಎಸ್.ವ್ಹಿ.ಕಾಳಗಿ ವಂದಿಸಿದರು. ಮುತ್ತಗಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಾಲೆಗಳ ಮುಖ್ಯಗುರುಗಳು, ಸಹಶಿಕ್ಷಕರು ತಮ್ಮ ಮಕ್ಕಳೊಂದಿಗೆ ವಿವಿಧ ಮಾದರಿ, ಪಾಠೋಪಕರಣಗಳೊಂದಿಗೆ ಭಾಗವಹಿಸಿದ್ದರು.