ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ದುಡಿದ ಕೆ.ಆರ್. ಕ್ಷೇತ್ರದ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ಆಯೋಜಿಸಲಾಗಿತ್ತು.ಪರಾಜಿತ ಅಭ್ಯರ್ಥಿ ಎಂ. ಲಕ್ಷ್ಮಣ್ ಮಾತನಾಡಿ, ರಾಜಕಾರಣದಲ್ಲಿ ಸೋಲು ಗೆಲುವು ಸಹಜ ಪ್ರಕ್ರಿಯೆ. ನಾನು ಸೋತಿದ್ದೇನೆ ಎಂದು ಮನೆಯಲ್ಲಿ ಕೂರುವುದಿಲ್ಲ. ಸದಾ ಜನರ ಮಧ್ಯೆ ಇದ್ದು ಮತದಾರರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ. ನನ್ನ ಕಚೇರಿ ಸದಾ ಜನರ ಸೇವೆಗೆ ತೆರೆದಿರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಹಲವು ಯೋಜನೆ ರೂಪಿಸಿ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.
ಐದು ಗ್ಯಾರಂಟಿ ಯೋಜನೆ ನೀಡಿ ಎಲ್ಲಾ ವರ್ಗದ ಜನರಿಗೆ ಒಂದಲ್ಲ ಒಂದು ರೀತಿ ಅನುಕೂಲ ಮಾಡಿಕೊಟ್ಟಿದ್ದರು. ಆದರೂ ಕೂಡ ಜನ ಮತ ನೀಡಲಿಲ್ಲ. ನನ್ನ ಸೋಲಿನಿಂದ ಯಾರನ್ನು ನಾನು ದೂಷಿಸುವುದಿಲ್ಲ. ನನ್ನ ಸೋಲಿಗೆ ನಾನೇ ಕಾರಣ. ಮತ್ತೊಮ್ಮೆ ಪಕ್ಷವನ್ನು ಸಂಘಟಿಸೋಣ. ನನ್ನಂತಹ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು. ಆಗಾಗಿ ಕಾಂಗ್ರೆಸ್ ಪಕ್ಷ ಕಾರ್ಯಕರ್ತರನ್ನು ಎಂದಿಗೂ ಕೈ ಬಿಡುವುದಿಲ್ಲ ಎಂದರು.ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರ ಸೋಲು ತುಂಬಾ ನೋವನ್ನುಂಟು ಮಾಡಿದೆ. ಬಿಜೆಪಿ -ಜೆಡಿಎಸ್ ಪಕ್ಷಗಳ ಜನ ವಿರೋಧಿ ನೀತಿಯನ್ನು ಪ್ರತಿನಿತ್ಯವೂ ಜನರಿಗೆ ತಿಳಿಸುವ ಕೆಲಸವನ್ನು ಲಕ್ಷ್ಮಣ್ ಪ್ರಾಮಾಣಿಕವಾಗಿ ಮಾಡಿದ್ದರು. ಆದರೆ ಚುನಾವಣಾ ಫಲಿತಾಂಶಗಳು ನಿರಂತರವಾಗಿ ಬದಲಾಗುವುದು , ಕೆಲವೊಮ್ಮೆ ಅಚ್ಚರಿ ಫಲಿತಾಂಶ ನೀಡುವುದು ಸಹಜ. ನಿರೀಕ್ಷೆಗಳು ಒಮ್ಮೊಮ್ಮೆ ಈಡೇರುವುದಿಲ್ಲ. ಕಾಂಗ್ರೆಸ್ ಪಕ್ಷ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ಗ್ಯಾರಂಟಿಗಳ ಮೂಲಕ ಜನರ ಆರ್ಥಿಕ ಮಟ್ಟವನ್ನು ಸುಧಾರಿಸಿದೆ. ಮತ ನೀಡಿರುವವರು, ನೀಡದೇ ಇರುವವರು ಎಲ್ಲರನ್ನೂ ಕಾಂಗ್ರೆಸ್ ಒಂದೇ ರೀತಿ ನೋಡುತ್ತದೆ ಎಂದರು.
ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ನಗರಾಧ್ಯಕ್ಷ ಆರ್. ಮೂರ್ತಿ, ಮಾಜಿ ಮೇಯರ್ಗಳಾದ ಪುಷ್ಪಲತಾ ಚಿಕ್ಕಣ್ಣ, ಟಿ.ಬಿ. ಚಿಕ್ಕಣ್ಣ, ಮೋದಾಮಣಿ, ಬಿ.ಎಲ್. ಭೈರಪ್ಪ, ನಗರ ಪಾಲಿಕೆ ಮಾಜಿ ಸದಸ್ಯರಾದ ಜೆ. ಗೋಪಿ, ಶೋಭಾ ಮೋಹನ್, ಪಲ್ಲವಿ ಬೇಗಂ, ಎಂ.ಸಿ. ಚಿಕ್ಕಣ್ಣ, ಕೆ.ವಿ. ಮಲ್ಲೇಶ್, ಪ್ರದೀಪ್ ಕುಮಾರ್, ವಾಸು, ವಿ. ರಾಮಸ್ವಾಮಿ, ಈಶ್ವರ್ ಚಕ್ಕಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ. ಸೋಮಶೇಖರ್, ಶ್ರೀಧರ್ ಭವ್ಯ,ಇಂದಿರಾ, ನಾಗರತ್ನ ಮಂಜುನಾಥ್, ರವಿಶಂಕರ್, ಡೈರಿ ವೆಂಕಟೇಶ್, ನಾಗೇಶ್, ಯೋಗೇಶ್ ಉಪ್ಪಾರ, ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ವಿನಯ್ ಕುಮಾರ್, ಮೊಗಣ್ಣಾಚಾರ್, ಸೇವಾದಳ ಮೋಹನ್, ಯುವ ಕಾಂಗ್ರೆಸ್ ರಾಕೇಶ್, ಎನ್.ಎಸ್.ಯು.ಐ ರವೀಶ್, ಸಾಮಾಜಿಕ ಜಾಲತಾಣ ವಿಭಾಗದ ಅರುಣ್ ಗಂಗಾಧರ್, ವಿಜಯ್ ಕುಮಾರ್, ವಕ್ತಾರ ಮಹೇಶ್ ಇದ್ದರು.