ಭಾರತದ ಸಂವಿಧಾನವು ದೇಶದ ಆಡಳಿತ ವ್ಯವಸ್ಥೆಗೆ ಭದ್ರ ಬುನಾದಿಯಾಗಿದೆ. ಪ್ರತಿಯೊಬ್ಬ ಪ್ರಜೆಯ ಹಕ್ಕು, ಸ್ವಾತಂತ್ರ್ಯ ಹಾಗೂ ಆಸ್ತಿ-ಪಾಸ್ತಿಗಳ ರಕ್ಷಣೆಗೆ ಕಾನೂನುಬದ್ಧ ಭದ್ರತೆ ಒದಗಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಅಧಿಕಾರದ ಮೂಲ. ಹೀಗಾಗಿ ಪ್ರಜೆಗಳು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಹೊಂದಿರಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಷ್ಟ್ರದ ಭವಿಷ್ಯವನ್ನು ರೂಪಿಸಲು ಸಂವಿಧಾನದ ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಯುವಜನತೆ ಮೇಲಿದೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಪ್ರತಿಪಾದಿಸಿದರು.ನಗರದ ಮಂಡ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ದಾರಿ ಫೌಂಡೇಷನ್ ಮೈಸೂರು ಹಾಗೂ ಮಂಡ್ಯ ವಿವಿಯಿಂದ ನಡೆದ ಭವಿಷ್ಯದಲ್ಲಿ ಪ್ರಜಾಪ್ರಭುತ್ವ ರಕ್ಷಣೆ, ಜವಾಬ್ದಾರಿ ಯುವಶಕ್ತಿಯ ಕೈಯಲ್ಲಿ ಎಂಬ ಮುಕ್ತ ಸಂವಾದ ಉದ್ಘಾಟಿಸಿ ಮಾತನಾಡಿದರು.
ಭಾರತದ ಸಂವಿಧಾನವು ದೇಶದ ಆಡಳಿತ ವ್ಯವಸ್ಥೆಗೆ ಭದ್ರ ಬುನಾದಿಯಾಗಿದೆ. ಪ್ರತಿಯೊಬ್ಬ ಪ್ರಜೆಯ ಹಕ್ಕು, ಸ್ವಾತಂತ್ರ್ಯ ಹಾಗೂ ಆಸ್ತಿ-ಪಾಸ್ತಿಗಳ ರಕ್ಷಣೆಗೆ ಕಾನೂನುಬದ್ಧ ಭದ್ರತೆ ಒದಗಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಅಧಿಕಾರದ ಮೂಲ. ಹೀಗಾಗಿ ಪ್ರಜೆಗಳು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಹೊಂದಿರಬೇಕು ಎಂದರು.ಪ್ರಜಾಪ್ರಭುತ್ವದಲ್ಲಿ ಜನರು ರಾಜರಂತೆ ಅಧಿಕಾರ ಹೊಂದಿದರೆ, ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನಸೇವಕರಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರವು ಜನರ ಸೇವೆಗಾಗಿ ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಯುವಜನತೆ ಸಾಮಾಜಿಕ ಹಾಗೂ ಸಾರ್ವಜನಿಕ ಬದುಕಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನಾಗರಿಕ ಹಕ್ಕುಗಳ ಕುರಿತು ಯುವಕರಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದರು.ಮಂಡ್ಯ ವಿವಿ ಕುಲ ಸಚಿವರಾದ ಕಲ್ಪಶ್ರೀ ಮಾತನಾಡಿ, ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಮತದಾನದ ಹಕ್ಕು ಹೊಂದಿರುವವರು ಸಕ್ರಿಯವಾಗಿ ಮತದಾನ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಯುವಕ-ಯುವತಿಯೂ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ಮತದಾನದ ಗುರುತಿನ ಚೀಟಿ (ವೋಟರ್ ಐಡಿ) ಪಡೆಯಬೇಕು ಎಂದರು.
ಯುವಜನರಲ್ಲಿ ಮತದಾನದ ಮಹತ್ವ ಹಾಗೂ ಪ್ರಜಾಪ್ರಭುತ್ವದ ಕುರಿತು ಅರಿವು, ಕಾಳಜಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಯುವಜನರು ಪ್ರಸ್ತುತ ಸಮಾಜದಲ್ಲಿನ ಬೆಳವಣಿಗೆಗಳು ಹಾಗೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದರು.ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಮಾತನಾಡಿ, ಪ್ರಜಾಪ್ರಭುತ್ವದ ಆಶಯ ಹಾಗೂ ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯಗಳ ಕುರಿತು ಯುವಜನತೆ ಹೆಚ್ಚಿನ ಅರಿವು ಹೊಂದಬೇಕು. ದೇಶ ಸಂವಿಧಾನ ಗೌರವಿಸುವ ಜೊತೆಗೆ ನಮಗೆ ನೀಡಿರುವ ಹಕ್ಕುಗಳನ್ನು ಸಮರ್ಥವಾಗಿ ಬಳಸಿಕೊಂಡು ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು.
ಸಮಾರಂಭದಲ್ಲಿ ಮಂಡ್ಯ ವಿವಿ ಕುಲಸಚಿವ (ಮೌಲ್ಯಮಾಪನ) ಪ್ರೊ.ವೆಂಕಟರಮಣ. ಜಿ.ವಿ.,ಪ್ರಾಂಶುಪಾಲರಾದ ಡಾ.ಸ್ವರ್ಣ. ಬಿ., ಉಪ ಕುಲಸಚಿವರು (ಶೈಕ್ಷಣಿಕ) ಡಾ.ಶಿವರಾಮು ಎಂ.ವೈ, ಗಣಕ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪ್ರೇಮ್‌ಸಿಂಗ್ ಎಂ., ದಾರಿ ಫೌಂಡೇಷನ್ ಅಧ್ಯಕ್ಷ ರಂಗಯ್ಯ ಭಾಗವಹಿಸಿದ್ದರು.