ಎರಡನೇ ದಿನವೂ ರಂಗೇರಿದ ಬಣ್ಣದಾಟ

| Published : Mar 27 2024, 01:05 AM IST

ಸಾರಾಂಶ

ಬಾಗಲಕೋಟೆಯಲ್ಲಿ ಎರಡನೇ ದಿನವೂ ಹೋಳಿ ಹಬ್ಬದ ಬಣ್ಣದಾಟವು ಮತ್ತಷ್ಟು ಬಣ್ಣದಾಟ ಮತ್ತಷ್ಟು ರಂಗೇರಿತ್ತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯದಲ್ಲಿಯೇ ಅತ್ಯಂತ ಅದ್ಧೂರಿಯಿಂದ ಆಚರಿಲ್ಪಡುವ ಕೋಟೆನಗರಿಯ ಐತಿಹಾಸಿಕ ರಂಗಪಂಚಮಿಯ ಎರಡನೇ ದಿನವಾದ ಮಂಗಳವಾರ ಮತ್ತಷ್ಟು ಬಣ್ಣದಾಟ ಮತ್ತಷ್ಟು ರಂಗೇರಿತ್ತು. ಎಲ್ಲ ವರ್ಗ ಹಾಗೂ ವಯೋಮಾನದವರು ಬಣ್ಣದಾಟದಲ್ಲಿ ಪಾಲ್ಗೊಂಡು ಬಾಗಲಕೋಟೆ ಹೋಳಿ ಆಚರಣೆಗೆ ಮತ್ತಷ್ಟು ಮೆರಗು ನೀಡಿದರು.

ದೇಶದ ಕೊಲ್ಕತ್ತಾ ನಗರ ಹೊರತುಪಡಿಸಿದರೆ ಐದು ದಿನಗಳ ಕಾಲ ಬಣ್ಣದಾಟದಲ್ಲಿ ತೊಡಗುವ ಬಾಗಲಕೋಟೆ ಜನತೆ ಹೋಳಿಯ ಬಣ್ಣದಾಟಕ್ಕೆಂದೇ ಸಮಯ ಮೀಸಲಿಟ್ಟು, ಐದು ದಿನಗಳ ಕಾಲ ಹಲಿಗೆ ಮಜಲು, ಕಾಮದಹನ ನಂತರದ ಮೂರು ದಿನಗಳ ಪಾರಂಪರಿಕ ಬಣ್ಣದಾಟದಲ್ಲಿ ಪಾಲ್ಗೊಳ್ಳುವ ಮೂಲಕ ಹೋಳಿ ಹಬ್ಬಕ್ಕೆ ಕಳೆ ಕಟ್ಟಿದ್ದಾರೆ.

ಬಾಗಲಕೋಟೆ ಹೋಳಿ ಉತ್ಸವ ಆಚರಣೆ ಸಮಿತಿ ಸಹಯೋಗದಲ್ಲಿ ಎರಡನೇ ದಿನದ ಬಣ್ಣದಾಟದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ನೂರಾರು ಯುಕ, ಯುವತಿಯರು ಬಣ್ಣ ಎರಚಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ರೇನ್ ಡ್ಯಾನ್ಸ್ ಗೆ ಸಖತ್ ಸ್ಟೆಪ್ಸ್‌:

ಎರಡನೇ ದಿನದ ಭರ್ಜರಿ ಬಣ್ಣದಾಟಕ್ಕೆ ಮತ್ತಷ್ಟು ಮೆರಗು ನೀಡಿದ್ದು ನಗರದ ಬಸವ ವೃತ್ತದಲ್ಲಿ ಆಯೋಜಿಸಿದ್ದ ರೇನ್ ಡ್ಯಾನ್ಸ್. ವಯಸ್ಸಿನ ಬೇಧವಿಲ್ಲದೆ ಮಕ್ಕಳು, ಮಹಿಳೆಯರು, ವಯೋವೃದ್ಧರಾದಿಯಾಗಿ ಎಲ್ಲರೂ ಸಹ ರೇನ್ ಡ್ಯಾನ್ಸ್ ನಲ್ಲಿ ಕುಣಿದು ಕುಪ್ಪಳಿಸಿದರು. ಜಾನಪದ, ಕನ್ನಡ ನಾಡುನುಡಿಯ ಹಾಡುಗಳು ಹಾಗೂ ಈಚೆಗೆ ಜನಪ್ರೀಯ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿ ಸಂತಸಪಟ್ಟರು.

ಎರಡನೇ ದಿನದ ಬಣ್ಣದಲ್ಲಿ ನಗರದ ವೆಂಕಟಪೇಟ, ಹಳಪೇಟ, ಜೈನಪೇಟ ಓಣಿಯಲ್ಲಿ ಬಣ್ಣದಾಟ ಇದ್ದಿದ್ದರಿಂದ ಆಯಾ ಭಾಗದ ಯುವಕರು ಟ್ರ್ಯಾಕ್ಟರ್ ಹಾಗೂ ಬಂಡಿಗಳಲ್ಲಿ ಬಣ್ಣದ ಬ್ಯಾರಲ್‌ ಗಳಲ್ಲಿ ಬಣ್ಣ ತುಂಬಿಕೊಂಡು ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಪರಸ್ಪರ ಬಣ್ಣ ಎರಿಚಿ ಸಂಭ್ರಮಿಸಿದರು.