ಸಾರಾಂಶ
ಹುಬ್ಬಳ್ಳಿ: ಬೆಳಗಾವಿಯಿಂದಲೇ ರಾಜ್ಯ ಸರ್ಕಾರ ಪತನ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಕಿಡಿಕಾರಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಬೆಳಗಾವಿಯಲ್ಲೇ ನಾವು ಕಸ ಹೊಡೆದು, ಕೊಳೆಯೆಲ್ಲ ತೆಗೆಯುತ್ತೇವೆ ಎಂದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಗಾಂಧಿ ಬಾವಿ ನೀರು ಸಿಂಪಡಿಸಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಲ್ಲಿನ ಕಸವನ್ನು ಹೊಡೆದು ಕೊಳೆಯೆಲ್ಲ ತೆಗೆಯುತ್ತೇವೆ ಎಂದರು.
ಈ ಮೂಲಕ ಬೆಳಗಾವಿ ನಾಯಕರೆಲ್ಲರಿಗೂ ಟಾಂಗ್ ಕೊಟ್ಟರು. ಹುಬ್ಬಳ್ಳಿಯಲ್ಲಿ ಗಾಂಧಿ ಭಾರತ ಸಮಾವೇಶದ ಪೂರ್ವಭಾವಿ ಸಭೆಯನ್ನು ಜ. 18ರಂದು ಮಾಡುತ್ತಿದ್ದೇವೆ.
ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಕಾರ್ಯಕ್ರಮದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ರಣದೀಪ ಸುರ್ಜೆವಾಲಾ ಕಾರ್ಯಕ್ರಮದಲ್ಲಿ ಇರುತ್ತಾರೆ. ಸುವರ್ಣಸೌಧದ ಬಳಿ ಗಾಂಧಿ ಪ್ರತಿಮೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅನಾವರಣ ಮಾಡುತ್ತಾರೆ. ಎಲ್ಲ ಪಕ್ಷದ ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡತ್ತೇವೆ. ಇದು ಸರ್ಕಾರಿ ಕಾರ್ಯಕ್ರಮ ಎಂದರು.
ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನರಾದ ಹಿನ್ನೆಲೆಯಲ್ಲಿ ಈ ಹಿಂದೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಶ್ರದ್ಧಾಂಜಲಿ ಸಲ್ಲಿಸಿ ಮುಂದೂಡಿದ್ದೀವಿ. ಇದೀಗ ಜ.21ಕ್ಕೆ ಕಾರ್ಯಕ್ರಮ ನಿಗದಿಪಡಿಸಿದ್ದೇವೆ ಎಂದರು.ಈಗಿರುವವರೆಲ್ಲರೂ ನಕಲಿ ಗಾಂಧಿ ಎಂದು ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಕಲಿ ಗಾಂಧಿ ಅಂದಿರುವುದು ಬಹಳ ಸಂತೋಷ ಎಂದು ವ್ಯಂಗ್ಯವಾಡಿದರು. ಒಂದೇ ಗಾಂಧಿ ಇರುವುದು. ನಾವೆಲ್ಲ ಗಾಂಧಿ ವಂಶಸ್ಥರು ಎಂದು ಹೇಳುವ ಮೂಲಕ ಬಿಜೆಪಿಗರ ಟೀಕೆಗೆ ತಿರುಗೇಟು ನೀಡಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಬಾಯಿ ಸೇರಿ ಎಲ್ಲರೂ ಬಾಯಿಗೆ ಬೀಗ ಹಾಕಬೇಕು ಎಂದು ದೆಹಲಿ ನಾಯಕರು ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ನಾವು ಕಾರ್ಯಕರ್ತರಾಗಿ ದುಡಿಯುತ್ತೇವೆ ಎಂದರು.