ಬೇಲೂರಲ್ಲಿ ವಿದ್ಯುತ್ ಸ್ಪರ್ಶದಿಂದ ಕಾಫಿ ತೋಟ ಭಸ್ಮ

| Published : Apr 04 2024, 01:03 AM IST / Updated: Apr 04 2024, 01:04 AM IST

ಸಾರಾಂಶ

ಬೇಲೂರು ತಾಲೂಕಿನ ಕುಶವಾರ ಗ್ರಾಮದ ಭದ್ರೇಗೌಡ ಎಂಬ ಕೃಷಿಕರ ಕಾಫಿ ತೋಟದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ತೋಟದಲ್ಲಿನ ಕಾಫಿ, ಬಾಳೆ, ಮೆಣಸು ಸೇರಿದಂತೆ ಫಸಲಿಗೆ ಬಂದ ಗಿಡಗಳು ಭಸ್ಮವಾಗಿವೆ.

ತಾಲೂಕಿನ ಕುಶವಾರ ಗ್ರಾಮದಲ್ಲಿ ಘಟನೆ । ತೋಟದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ದುರಂತ

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಕುಶವಾರ ಗ್ರಾಮದ ಭದ್ರೇಗೌಡ ಎಂಬ ಕೃಷಿಕರ ಕಾಫಿ ತೋಟದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ತೋಟದಲ್ಲಿನ ಕಾಫಿ, ಬಾಳೆ, ಮೆಣಸು ಸೇರಿದಂತೆ ಫಸಲಿಗೆ ಬಂದ ಗಿಡಗಳು ಭಸ್ಮವಾಗಿವೆ. ಇದಕ್ಕೆ ವಿದ್ಯುತ್ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ರೈತ ಭದ್ರೇಗೌಡ, ‘ನಾವು ಸಾಲ ಮಾಡಿ ಸುಮಾರು ೩ ಎಕರೆಗೂ ಹೆಚ್ಚು ಕಾಫಿ ತೋಟವನ್ನು ಕಷ್ಟ-ಪಟ್ಟು ಮಾಡಲಾಗಿದೆ. ಇದರಲ್ಲಿ ಕಾಫಿ, ಮೆಣಸು ಬಾಳೆ ಬೆಳೆಗಳನ್ನು ಬೆಳೆಯಾಗಿದೆ. ಮೊದಲೇ ಕಾಡಾನೆಗಳ ಹಾವಳಿ, ಸಂದರ್ಭದಲ್ಲಿ ತೋಟದಲ್ಲಿ ವಿದ್ಯುತ್ ತಂತಿಯಿಂದ ಉಂಟಾದ ಬೆಂಕಿಯಿಂದ ಇಡೀ ತೋಟವೇ ನಾಶವಾಗಿದೆ. ಈ ಮೊದಲು ಇಲ್ಲಿನ ಜೆಇ ರೇವಣ್ಣನವರಿಗೆ ವಿದ್ಯುತ್ ತಂತಿ ಬಗ್ಗೆ ತಿಳಿಸಿದರೂ ಅವರು ಉಡಾಫೆಯಿಂದ ನಿರ್ಲಕ್ಷ್ಯ ಮಾಡಿ ನಾನು ಏನು ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಅಲ್ಲದೆ ಲಂಚ ಕೇಳುತ್ತಾರೆ. ಶಾಸಕರು ತಾಲೂಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಬೇಕು ಎನ್ನುವ ಶಾಸಕರು ಮೊದಲು ಇಂತಹ ಅಧಿಕಾರಿ ವಿರುದ್ಧ ತೀವ್ರ ಕ್ರಮಕೈಗೊಳ್ಳಬೇಕು, ಈ ಘಟನೆಯಿಂದ ಇಡೀ ಕುಟುಂಬವೇ ಮಾನಸಿಕವಾಗಿ ನೊಂದಿದ್ದು ಸಾಲವನ್ನು ಹೇಗೆ ತೀರಿಸುವುದು ಎಂಬ ಬಗ್ಗೆ ಚಿಂತೆಯಾಗಿದೆ. ನಮಗೆ ಸೂಕ್ತ ಪರಿಹಾರ ನೀಡಿ’ ಎಂದು ಆಗ್ರಹಿಸಿದರು.

ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಚೇತನ್ ಕುಮಾರ್ ಮಾತನಾಡಿ, ಸಾಲ ಮಾಡಿ ಕಷ್ಟಪಟ್ಟು ಬೆಳೆದ ಕುಶವಾರ ಗ್ರಾಮದ ಭದ್ರೇಗೌಡರ ಕಾಫಿ ತೋಟ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ಸುಟ್ಟು ಸಂಪೂರ್ಣ ನಾಶವಾಗಿದೆ. ಈ ಹಿಂದೆ ನಡೆದ ಗ್ರಾಮಸಭೆಯಲ್ಲಿ ಶಾಸಕರ ಸಮ್ಮುಖದಲ್ಲಿ ವಿದ್ಯುತ್ ಕಂಬ ಬದಲಾವಣೆಗೆ ಮನವಿ ಪತ್ರ ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ, ವಿದ್ಯುತ್ ಇಲಾಖೆ ಎಲ್ಲಾ ತೋಟಗಳ ನಡುವೆ ಇರುವ ವಿದ್ಯುತ್ ಕಂಬಗಳನ್ನು ಬದಲಾಯಿಸಬೇಕಿದೆ. ತಾಲೂಕಿನಲ್ಲಿ ಇಂತಹ ಅವಘಡಗಳು ಬಹಳಷ್ಟ ನಡೆದಿದೆ. ಈ ಬಗ್ಗೆ ಸರ್ಕಾರ ಅಥವಾ ಇಲಾಖೆ ಅಧಿಕಾರಿಗಳು ತಕ್ಷಣವೇ ಸೂಕ್ತ ಪರಿಹಾರ ನೀಡಬೇಕಿದೆ. ಮೊದಲೇ ಅನಾವೃಷ್ಟಿ ಮತ್ತು ಕಾಡಾನೆ ಹಾವಳಿಯಿಂದ ಬೇಸತ್ತ ರೈತ ಕುಟುಂಬಗಳಿಗೆ ನೆರವು ನೀಡಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಕೌಶಿಕ್. ಆದೇಶ್, ಬಸವರಾಜ, ಪಾಪಣ್ಣ, ಮುಂತಾದವರು ಹಾಜರಿದ್ದರು.

ಬೇಲೂರು ತಾಲೂಕಿನ ಕುಶವಾರ ಗ್ರಾಮದ ಭದ್ರೇಗೌಡ ಎಂಬವರ ಕಾಫಿ ತೋಟ ವಿದ್ಯುತ್ ಸ್ಪರ್ಶದಿಂದ ಗಿಡಗಳು ನಾಶವಾಗಿರುವುದು.