ಚನ್ನಪಟ್ಟಣದಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿ ಕಾಂಗ್ರೆಸ್‌ಗೆ ಪಕ್ಷಾಂತರ : ಜೆಡಿಎಸ್‌ ನಾಯಕರಿಗೆ ಶಾಕ್‌

| Published : Sep 21 2024, 01:45 AM IST / Updated: Sep 21 2024, 12:18 PM IST

ಚನ್ನಪಟ್ಟಣದಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿ ಕಾಂಗ್ರೆಸ್‌ಗೆ ಪಕ್ಷಾಂತರ : ಜೆಡಿಎಸ್‌ ನಾಯಕರಿಗೆ ಶಾಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್‌ನಿಂದ ಆಯ್ಕೆಯಾಗಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದ ಚನ್ನಪಟ್ಟಣ ನಗರಸಭೆ ಸದಸ್ಯರು ಕಾಂಗ್ರೆಸ್ ಸದಸ್ಯರೆಂದು ಗುರುತಿಸಿಕೊಳ್ಳಲು ಅರ್ಹರೆಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ವಿಜಯ್ ಕೇಸರಿ

 ಚನ್ನಪಟ್ಟಣ : ಜೆಡಿಎಸ್‌ನಿಂದ ಆಯ್ಕೆಯಾಗಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದ ನಗರಸಭೆ ಸದಸ್ಯರು ಕಾಂಗ್ರೆಸ್ ಸದಸ್ಯರೆಂದು ಗುರುತಿಸಿಕೊಳ್ಳಲು ಅರ್ಹರೆಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ಹೊಸ್ತಿಲಿನಲ್ಲಿ ಜೆಡಿಎಸ್ ಪಾಲಿಗೆ ದೊಡ್ಡ ಶಾಕ್ ನೀಡಿದ್ದರೆ, ಅನರ್ಹತೆ ಭೀತಿಯಲ್ಲಿದ್ದ ಪಕ್ಷಾಂತರಿ ಸದಸ್ಯರು ನಿಟ್ಟುಸಿರು ಬಿಡುವಂತಾಗಿದೆ.

ಜೆಡಿಎಸ್‌ನಿಂದ ಆಯ್ಕೆಯಾಗಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದ ೧೩ ನಗರಸಭೆ ಸದಸ್ಯರು ಹಾಗೂ ಒಬ್ಬ ಪಕ್ಷೇತರ ಸದಸ್ಯ, ಕಾಂಗ್ರೆಸ್ ಸದಸ್ಯರೆಂದು ಅಧಿಕೃತವಾಗಿ ಪರಿಗಣಿಸಲು ಅರ್ಹರೆಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಆದೇಶ ಹೊರಡಿಸಿದ್ದು, ಇದು ಜೆಡಿಎಸ್ ಪಾಲಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್‌ನ ಒಂಬತ್ತು ಹಾಗೂ ಒಬ್ಬ ಪಕ್ಷೇತರ ನಗರಸಭೆ ಸದಸ್ಯೆ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದರು. ಆನಂತರ ಇನ್ನು ನಾಲ್ವರು ಜೆಡಿಎಸ್ ನಗರಸಭೆ ಸದಸ್ಯರನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ತಮ್ಮನ್ನು ಕಾಂಗ್ರೆಸ್ ಸದಸ್ಯರು ಎಂದು ಪರಿಗಣಿಸುವಂತೆ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಕೂಡಾ ಪತ್ರ ರವಾನಿಸಿದ್ದರು. ಆ ಮನವಿಯ ಮೇರೆಗೆ ಜೆಡಿಎಸ್ ಹಾಗೂ ಪಕ್ಷೇತರವಾಗಿ ಆಯ್ಕೆಯಾಗಿದ್ದ ೨/೩ರಷ್ಟು ನಗರಸಭೆ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದರಿಂದ ಸದರಿ ಪಕ್ಷದ ವಿಲೀನತೆಯನ್ನು ಪರಿಗಣಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬಲ ಕಳೆದುಕೊಂಡು ಜೆಡಿಎಸ್:

೩೧ ಸದಸ್ಯ ಬಲದ ಚನ್ನಪಟ್ಟಣ ನಗರಸಭೆಯಲ್ಲಿ ಜೆಡಿಎಸ್ ೧೬ ಸದಸ್ಯರು, ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ತಲಾ ೭ ಸದಸ್ಯರು ಹಾಗೂ ಒಬ್ಬ ಪಕ್ಷೇತರ ಸದಸ್ಯೆ ಆಯ್ಕೆಯಾಗಿದ್ದರು. ೧೬ ಸದಸ್ಯ ಬಲ ಹೊಂದಿದ್ದ ಜೆಡಿಎಸ್ ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಗಾದಿಯನ್ನು ನಿರಾಯಾಸವಾಗಿ ಹಿಡಿದಿತ್ತು. ಆದರೆ ಲೋಕಸಭೆ ಚುನಾವಣೆ ವೇಳೆ ಇವರಲ್ಲಿ ೯ ಜೆಡಿಎಸ್ ಸದಸ್ಯರು ಕಾಂಗ್ರೆಸ್ ತೆಕ್ಕೆಗೆ ಜಾರಿದ್ದರು. ಇವರೊಂದಿಗೆ ಪಕ್ಷೇತರ ಸದಸ್ಯೆ ಸಹ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಆ ನಂತರ ಇನ್ನು ನಾಲ್ವರು ಸದಸ್ಯರನ್ನು ಕಾಂಗ್ರೆಸ್ ಸೆಳೆದಿದ್ದು, ಜೆಡಿಎಸ್ ನಗರಸಭೆಯಲ್ಲಿ ಬಲಕಳೆದುಕೊಂಡಿದೆ.

ಅನರ್ಹತೆ ಭೀತಿಯಿಂದ ಪಾರು!:

ಲೋಕಸಭೆ ಚುನಾವಣೆ ವೇಳೆ ನಗರಸಭೆ ಅಧ್ಯಕ್ಷ ಪ್ರಶಾಂತ್ ಸೇರಿ ೯ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಅವರ ವಿರುದ್ಧ ಜೆಡಿಎಸ್ ಆಗಲೇ ಪಕ್ಷಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದಿತ್ತು. ಆದರೆ, ಅಂತಹ ಇಚ್ಛಾಶಕ್ತಿ ತೋರುವಲ್ಲಿ ಜೆಡಿಎಸ್ ವಿಫಲವಾಗಿತ್ತು. ಆ ನಂತರ ಕಾಂಗ್ರೆಸ್ ಮತ್ತೆ ನಾಲ್ವರನ್ನು ಪಕ್ಷಕ್ಕೆ ಸೆಳೆದಿದ್ದು, ಇದೀಗ ಅವರೆಲ್ಲರೂ ಕಾಂಗ್ರೆಸ್ ಸದಸ್ಯರೆಂದು ಜಿಲ್ಲಾಧಿಕಾರಿ ಪರಿಗಣಿಸಿ ಆದೇಶ ನೀಡಿರುವುದರಿಂದ ಪ್ರಸ್ತುತ ಅನರ್ಹತೆ ಭೀತಿಯಿಂದ ಅವರೆಲ್ಲ ಪಾರಾಗಿದ್ದಾರೆ.

ಜೆಡಿಎಸ್‌ಗೆ ಮರ್ಮಾಘಾತ:

ಈ ಹಿಂದೆ ನಗರಸಭೆಯಲ್ಲಿ ಕಾಂಗ್ರೆಸ್ ೭ ಸದಸ್ಯ ಬಲ ಹೊಂದಿದ್ದು, ಪಕ್ಷಾಂತರಗೊಂಡಿದ್ದ ೧೩ ಜೆಡಿಎಸ್ ಸದಸ್ಯರು ಹಾಗೂ ಒಬ್ಬ ಪಕ್ಷೇತರ ಸದಸ್ಯೆ ಎಲ್ಲರೂ ಕಾಂಗ್ರೆಸ್ ಸದಸ್ಯರು ಎಂದು ಪರಿಗಣಿಸಲ್ಪಡುವುದರಿಂದ ಕಾಂಗ್ರೆಸ್ ಬಲ ೨೧ಕ್ಕೆ ಏರಿಕೆಯಾಗಿದೆ. ಬಿಜೆಪಿ ಬೆಂಬಲದೊಂದಿಗೆ ಉಳಿದ ಸದಸ್ಯರ ಬಲದಿಂದ ನಗರಸಭೆ ಅಧಿಕಾರದ ಗದ್ದುಗೆ ಹಿಡಿಯುವ ಕನಸು ಕಾಣುತ್ತಿದ್ದ ಜೆಡಿಎಸ್‌ಗೆ ಇದು ಮರ್ಮಾಘಾತ ಉಂಟು ಮಾಡಿದೆ.

ಚನ್ನಪಟ್ಟಣ ಉಪಚುನಾವಣೆ ವೇಳೆಯಲ್ಲಿ ನಡೆದಿರುವ ಈ ಬೆಳವಣಿಗೆ ಜೆಡಿಎಸ್‌ಗೆ ಶಾಕ್ ನೀಡಿದೆ. ನಗರಸಭೆಯ ಈ ಬೆಳವಣಿಗೆ ಮುಂಬರುವ ಉಪ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ನಗರದ ಆಡಳಿತ ಚುಕ್ಕಾಣಿಯನ್ನು ಕೈವಶ ಮಾಡಿಕೊಂಡಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಂತಾಗಿದೆ. ಇದನ್ನು ಜೆಡಿಎಸ್ ಹೇಗೆ ತೂಗಿಸಲಿದೆ ಕಾದು ನೋಡಬೇಕಿದೆ.