ಜಮೀನು, ಆಸ್ತಿ, ಖಾತೆಗಳದ್ದೆ ಕ್ಯಾತೆ

| Published : Jul 04 2025, 11:51 PM IST

ಸಾರಾಂಶ

ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಂದ ಆಗಮಿಸಿದ್ದ ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದರು

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಜನಸ್ಪಂದನ ಸಭೆಯಲ್ಲಿ ಜಮೀನು, ಆಸ್ತಿ, ಖಾತೆಗಳು ಸಂಬಂಧಿಸಿದಂತೆ ಹಲವಾರು ದೂರುಗಳು ಕೇಳಿ ಬಂದವು.

ಅಲ್ಲದೆ, ನಮಗೊಂದು ಮನೆ ಕೊಡಿ ಎಂದು ನಗರ ಮತ್ತು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು, ಪುರುಷರು ಮನವಿ ಮಾಡಿದರು.

ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಜನ ಸ್ಪಂದನ ಸಭೆಯು ನಾನಾ ಸಮಸ್ಯೆಗಳು ಅನಾವರಣಗೊಂಡಿತು. ದೂರದ ಊರುಗಳಿಂದ ಆಗಮಿಸಿದ ಜನರು ದೂರು ಸಲ್ಲಿಸಿ ಪರಿಹಾರಕ್ಕೆ ಕೋರಿದರು.

ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಂದ ಆಗಮಿಸಿದ್ದ ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದರು. ಎಚ್.ಡಿ. ಕೋಟೆ ತಾಲೂಕಿನ ಜನರಿಂದ ಹೆಚ್ಚು ದೂರುಗಳು ಬಂದವು. ಕ್ರಯಪತ್ರ, ಪೌತಿ ಖಾತೆ, ಸ್ಮಶಾನಕ್ಕೆ, ಕುಡಿಯುವ ನೀರು, ರಸ್ತೆ, ಆಶ್ರಯ ನಿವೇಶನಕ್ಕೆ ಹೆಚ್ಚಿನ ದೂರುಗಳು ಸಲ್ಲಿಕೆಯಾದವು.

ಎಚ್.ಡಿ. ಕೋಟೆ ತಾಲೂಕಿನ ಎಸ್. ದೊರೆಸ್ವಾಮಿ ಅವರು, ಕೆರೆ ಜಾಗದಲ್ಲಿ ಅನಧಿಕೃತ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಿದ್ದಾರೆ. ಅನಧಿಕೃತವಾಗಿ ರೆಸಾರ್ಟ್ ನಿರ್ಮಾಣಗೊಂಡಿವೆ. ಪರಿಸರ ನಾಶವಾಗುತ್ತಿದೆ. ಪರಿಸರ ಸಂಪತ್ತು ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಎಚ್.ಡಿ. ಕೋಟೆ ತಾಲೂಕಿನ ಜಕ್ಕಹಳ್ಳಿ ಗ್ರಾಪಂ ಸದಸ್ಯ ಸಿ. ಶಿವಣ್ಣ ಅವರು, ಸರ್ಕಾರಿ ಶಾಲೆಯ ಗೇಟ್ ದುರಸ್ತಿಪಡಿಸಿ. ಟ್ಯಾಂಕ್‌ ಗೆ ಕಲುಷಿತ ನೀರು ಶೇಖರಣೆ ಮಾಡಲಾಗುತ್ತಿದೆ. ಅಂಗನವಾಡಿ ಕಲುಷಿತ ವಾತಾವರಣದಲ್ಲಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಯಾವ ಮಾನದಂಡದಲ್ಲಿ ಗಾಂಧಿ ಪುರಸ್ಕಾರ ಕೊಡಲಾಗಿದೆ ಎಂದರು.

ಹೆಗ್ಗಡಪುರದ ಕೆಂಪಶೆಟ್ಟಿ 40 ಎಕರೆ ಜಮೀನಿಗೆ ವಾರಸುದಾರರಿಲ್ಲ. ಭೂ ಪರಿವರ್ತನೆಗೆ ಆದೇಶ ಆಗಿದೆ. 100 ಕೋಟಿ ಮೌಲ್ಯದ ಜಾಗದಲ್ಲಿ ಬಡವರಿಗೆ ನಿವೇಶನ ಹಂಚುವಂತೆ ಮನವಿ ಮಾಡಿದರು.

ಹಂಪಾಪುರ ಹೋಬಳಿ ಜಿ.ಪಿ. ಸರಗೂರು ಗ್ರಾಮದಲ್ಲಿ 3 ಎಕರೆಯನ್ನು ಅಕ್ರಮವಾಗಿ ಸಾಗುವಳಿ ಮಾಡಲಾಗಿದೆ. ಅಮಾಯಕರಿಗೆ ತೊಂದರೆ ಕೊಡುತ್ತಿದ್ದು, ಭೂ ಮಾಫಿಯಾ ಸದ್ದು ಮಾಡುತ್ತಿದೆ. ಬಿ ರಿಪೋರ್ಟ್ ಹಾಕಿದವರನ್ನು ಅಮಾನತು ಮಾಡಬೇಕೆಂದು ಸಚಿವರನ್ನು ಒತ್ತಾಯಿಸಿದರು. ತನಿಖೆಗೆ ಆದೇಶ ಮಾಡಿರುವುದಾಗಿ ಸಚಿವರು ಹೇಳಿದರು.

ಕೋಟೆ ತಾಲೂಕಿನ ಎನ್. ಬೇಗೂರು ಗ್ರಾಮದ ನರಸಿಂಹಮೂರ್ತಿ ಅವರು, ಕೇರಳದಲ್ಲಿ ತರಕಾರಿಗಳ ಮಾರಾಟಕ್ಕೆ ಅವಕಾಶ ಕೊಡಬೇಕು. ಕುಡಿಯುವ ನೀರು ಜೆಜೆಎಂ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಪೂರ್ಣಗೊಳಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ಪರಿಹಾರಕ್ಕೆ ಇನ್ನೆಷ್ಟು ವರ್ಷ ಬೇಕು?

ಎಚ್.ಡಿ. ಕೋಟೆ ತಾಲೂಕಿನ ಕೆಂಚನಹಳ್ಳಿ ಗ್ರಾಮಸ್ಥರು ಕಬಿನಿ ಜಲಾಶಯ ನಿರ್ಮಾಣದಿಂದ ಮುಳುಗಡೆಯಾದ ಗ್ರಾಮಗಳು ಮಣ್ಣು ತಿನ್ನಬೇಕಾ? ಎಷ್ಟು ಬಾರಿ ಸರ್ವೇ ಮಾಡುತ್ತಿರಿ? ಪರಿಹಾರ ಕೊಡಲು ಇನ್ನೆಷ್ಟು ವರ್ಷಗಳು ಬೇಕು? ನಮ್ಮ ಮಕ್ಕಳು ಮರಿ ಓದಿಸಬಾರದಾ ಎಂದು ಖಾರವಾಗಿ ತಮ್ಮ ಸಮಸ್ಯೆಯನ್ನು ಹಂಚಿಕೊಂಡರು.

ಸಿನಿಮಾ ನಿರ್ಮಾಣಕ್ಕೆ ಅನುದಾನ ಕೊಡಿಸಿ

ಮೈಸೂರಿನ ನ್ಯಾಯಾಂಗ ಬಡಾವಣೆಯಲ್ಲಿ ಜಮೀನು ಕೊಟ್ಟವರಿಗೆ ಪರಿಹಾರ ಕೊಟ್ಟಿಲ್ಲ ಎಂದು ಸಮಸ್ಯೆ ತಂದ ಕೆ.ಪಿ. ಚಿದಾನಂದ ಅವರು, ತಾವು ನಿರ್ಮಿಸಿರುವ ಅಜ್ಜ ಚಿತ್ರಕ್ಕೆ ಮುಖ್ಯಮಂತ್ರಿಗಳಿಂದ ವಿಶೇಷ ಅನುದಾನ ಕೊಡುವಂತೆ ಕೇಳಿದರು. ಸಾಲ ಮಾಡಿ ಸಿನಿಮಾ ಪೂರ್ಣಗೊಳಿಸುವಂತೆ ಸಚಿವರು ಸಲಹೆ ನೀಡಿದರು.

ಸಮುದಾಯ ಭವನಕ್ಕೆ ಕೋರಿಕೆ

ಕ್ಯಾತಮಾರನಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೊಡುವಂತೆ ಇಂದ್ರೇಶ್ ಕೋರಿದರು. ಹಾಗೆಯೇ ಚಿಕ್ಕಗರಡಿ, ದೊಡ್ಡಗರಡಿಗಳು ಶಿಥಿಲಗೊಂಡಿದ್ದು, ದುರಸ್ತಿಪಡಿಸುವಂತೆ ಮನವಿ ಮಾಡಿದರು. ಎರಡಕ್ಕೂ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಸ್ಮಶಾನದಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಶವ ಹೂಳಲು ಕಷ್ಟವಾಗುತ್ತಿದೆ ಎಂದು ಸಚಿವರ ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು, ಅರ್ಧ ಸಮಸ್ಯೆ ಈಗಾಗಲೇ ಬಗೆಹರಿದಿದೆ. ಇನ್ನರ್ಧ ಸಮಸ್ಯೆಯನ್ನು ಶೀಘ್ರ ಪರಿಹರಿಸುವುದಾಗಿ ತಿಳಿಸಿದರು.

ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ವಿಷ್ಣುವರ್ಧನ್, ನಗರ ಪಾಲಿಕೆ ಆಯುಕ್ತ ಶೇಖ್ ಅಸೀಪ್ ತನ್ವೀರ್ ಮೊದಲಾದವರು ಇದ್ದರು.

-----

ಬಾಕ್ಸ್...

ಗ್ಯಾರಂಟಿ ಸಿಎಂ ಆಗುತ್ತೇನಾ?

ಎಚ್.ಡಿ.ಕೋಟೆ ತಾಲೂಕಿನ ಎನ್. ಬೇಗೂರು ಗ್ರಾಮದ ನರಸಿಂಹಮೂರ್ತಿ ಅವರು ಭವಿಷ್ಯದಲ್ಲಿ ಮುಖ್ಯಮಂತ್ರಿ ಆಗಲಿರುವ ಮಹದೇವಪ್ಪ ಅವರು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ. ಮಹದೇವಪ್ಪ ಅವರು, ಗ್ಯಾರಂಟಿ ಸಿಎಂ ಆಗುತ್ತೇನಾ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳಾಗುವ ಎಲ್ಲಾ ಅರ್ಹತೆಗಳು ತಮಗಿವೆ ಎಂದು ನರಸಿಂಹಮೂರ್ತಿ ಹೇಳಿದರು. ಈ ವೇಳೆ ಸಚಿವರು ಖುಷಿಯಲ್ಲಿ ಸಭೆ ಮುಂದುವರೆಸಿದರು.