ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯ ಯಾವುದೇ ಭಾಗದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಲು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಇರುವ ಪಂಚಾಯಿತಿಗಳನ್ನು ಗುರುತಿಸಬೇಕು. ಎಲ್ಲೆಲ್ಲಿ ನೀರಿನ ಸಮಸ್ಯೆ ಕಂಡುಬರುವುದೋ ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆಗೆ ನಿರಂತರವಾಗಿ ಸಂಪರ್ಕ ಸಾಧಿಸಬೇಕು. ಬೋರ್‌ವೆಲ್ ಲಭ್ಯವಿಲ್ಲದಿದ್ದರೆ ಟ್ಯಾಂಕರ್ ನಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಮೂಲಕ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸಲು ಮುಂದಾಗುವಂತೆ ಸೂಚಿಸಿದರು.ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂ ಸ್ವಾಧೀನ ಸಂಬಂಧ ಬದನಗುಪ್ಪೆ ಗ್ರಾಮದಲ್ಲಿ ಪ್ರತಿ ಗುಂಟೆಗೆ ೭ ಲಕ್ಷ ರು., ಬದನಗುಪ್ಪೆ ಪಕ್ಕದಲ್ಲಿರುವ ಮುತ್ತಿಗೆ ಗ್ರಾಮದಲ್ಲಿ ಗುಂಟೆಗೆ ೧ ಲಕ್ಷ ರು. ನಿಗದಿಪಡಿಸಿರುವ ದರ ಕ್ರಮಬದ್ಧವಾಗಿಲ್ಲದಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ, ಭೂ ದಾಖಲೆಗಳ ಅಧಿಕಾರಿಗಳು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಭೂ ದರ ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಯಳಂದೂರು ತಾಲೂಕಿನ ಮದ್ದೂರು ಹಾಗೂ ಅಗರ ಕೆರೆಗಳ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡುವ ಅವೈಜ್ಞಾನಿಕ ಕಾಮಗಾರಿಯಿಂದ ನಮ್ಮ ಭಾಗದ ರೈತರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಯೋಜನೆ ಕೈಬಿಡುವಂತೆ ಸಂಬಂಧಪಟ್ಟ ಕೆ.ಐ.ಡಿ.ಬಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಕಾಮಗಾರಿ ಅನುಮೋಧನೆಗೂ ಮೊದಲು ಜಿಲ್ಲಾ ಸಚಿವರು, ಆಯಾ ಭಾಗದ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತರುವಂತೆ ಸಲಹೆ ಮಾಡಿದರು.
ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಜಿಲ್ಲೆಯಲ್ಲಿ ತೆರೆಯಲಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಗಳ ಫಲಿತಾಂಶ ಉತ್ತಮವಾಗಿದೆ. ಜಿಲ್ಲೆಗೆ ಇನ್ನೂ ಹೆಚ್ಚಿನ ಪಬ್ಲಿಕ್ ಶಾಲೆಗಳ ಅವಶ್ಯವಿದೆ. ಶಿಕ್ಷಕರು ಪರಿಣಾಮಕಾರಿ ಬೋಧನೆ, ಹೊಸಹೊಸ ವಿಧಾನಗಳನ್ನು ಕಂಡುಕೊಳ್ಳುವ ಮೂಲಕ ಫಲಿತಾಂಶ ಹೆಚ್ಚಿಸಲು ಮುಂದಾಗಬೇಕು. ಹಾಸ್ಟೆಲ್‌ಗಳಲ್ಲಿರುವ ಮೂಲಸೌಕರ್ಯಗಳ ಕೊರತೆ ಬಗೆಹರಿಸಬೇಕು. ಹಾಸ್ಟೆಲ್‌ಗಳಲ್ಲಿ ದಿನನಿತ್ಯದ ಊಟದ ಮೆನು ಪ್ರದರ್ಶಿಸಬೇಕು. ಶನಿವಾರ, ಭಾನುವಾರಗಳಂದು ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಉಳಿಯುವಂತಾಗಬೇಕು ಎಂದರು.ಅಲ್ಪಸಂಖ್ಯಾತ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಭಾಗಗಳಲ್ಲಿ ನಿಗಮಗಳಿಂದ ಹೆಚ್ಚಿನ ಗುರಿ ನಿಗದಿಪಡಿಸಿ ಅನುದಾನ ಹಂಚಿಕೆ ಮಾಡಬೇಕು. ಜಲಜೀವನ್ ಮಿಷನ್ ಕಾಮಗಾರಿಗೆ ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದು, ಕಾಮಗಾರಿಗೆ ಅರಣ್ಯ ಇಲಾಖೆ ಸಹಕಾರ ನೀಡಬೇಕು. ಅಲ್ಲದೆ ಚಾಮರಾಜನಗರ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು, ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು. ಸಭೆಯಲ್ಲಿ ನೀಡಿರುವ ಸಲಹೆ, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕ್ಷೇತ್ರಪ್ರವಾಸ ಮಾಡಬೇಕು. ಆಯಾ ಭಾಗದ ಜನಪ್ರತಿನಿಧಿಗಳ ಸಹಕಾರ ಪಡೆದು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು. ಪ್ರಮುಖವಾಗಿ ಎಲ್ಲಾ ಅಧಿಕಾರಿಗಳು ದಿನಚರಿ ಬರೆಯಬೇಕು. ಮುಂದಿನ ಸಭೆಗೆ ದಿನಚರಿಯೊಂದಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದರು.ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಸಕ್ರಮಗೊಳಿಸಿ:
ವಿವಿಧ ನಿಗಮಗಳ ವತಿಯಿಂದ ಕೃಷಿ ಉದ್ದೇಶಗಳಿಗಾಗಿ ರೈತರ ಜಮೀನಿನಲ್ಲಿ ಕೊರೆಸಲಾಗಿರುವ ಕೊಳವೆ ಬಾವಿಗಳಿಗೆ ಪಡೆದಿರುವ ಅಕ್ರಮ ವಿದ್ಯುತ್ ಸಂಪರ್ಕಗಳ ಕುರಿತು ರೈತರೊಂದಿಗೆ ಚರ್ಚಿಸಿ, ನಿಗದಿತ ಹಣ ಪಾವತಿಸಿಕೊಂಡು ಸಕ್ರಮ ಮಾಡಿಕೊಡಬೇಕು. ಶೀಘ್ರ ಸಂಪರ್ಕ ಯೋಜನೆಯಡಿ ಅಕ್ರಮ ಸಂಪರ್ಕಗಳನ್ನು ಸಕ್ರಮಗೊಳಿಸಲು ಅವಕಾಶವಿರುವ ಬಗ್ಗೆ ರೈತರಿಗೆ ತಿಳಿಹೇಳಿ ಕೊಳವೆ ಬಾವಿಗಳ ವಿದ್ಯುದ್ದೀಕರಣವನ್ನು ಸಕ್ರಮ ಮಾಡಬೇಕು. ಯಾವ ಬೆಳೆಗೆ ಯಾವ ರಸಗೊಬ್ಬರ ಬಳಸಿದರೆ ಉತ್ತಮ ಇಳುವರಿ ಬರಲಿದೆ ಎಂಬುದರ ಕುರಿತು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.ಸರ್ಕಾರಿ ಶಾಲಾ ಸಮಸ್ಯೆಗಳ ಬಗ್ಗೆ ಅಗತ್ಯ ಕ್ರಮವಹಿಸಿ:
ಜಿಲ್ಲೆಯಲ್ಲಿ ಶಾಲೆಗಳ ಕಟ್ಟಡಗಳು ಸುಸ್ಥಿತಿಯಲ್ಲಿರುವ ಬಗ್ಗೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ದುರಸ್ತಿ ಅಗತ್ಯವಿರುವ ಶಾಲಾ ಕಟ್ಟಡಗಳನ್ನು ಪಟ್ಟಿ ಮಾಡಬೇಕು. ದುರಸ್ತಿ ಸಾಧ್ಯವಿಲ್ಲದೇ ಶಿಥಿಲಾವಸ್ಥೆ ತಲುಪಿದ್ದರೆ ಹೊಸ ಶಾಲಾಕಟ್ಟಡಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಲು ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಧಿಕಾರಿಗಳು ಶಾಲೆಗಳಿಗೆ ಖುದ್ದು ಭೇಟಿಕೊಟ್ಟು ಮಕ್ಕಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಲ್ಲಿನ ಸಮಸ್ಯೆಗಳನ್ನು ಸಂಪೂರ್ಣವಾಗಿ ಅರಿಯಬೇಕು ಎಂದರು.ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್, ವಿಧಾನ ಪರಿಷತ್ ಶಾಸಕರಾದ ಸಿ.ಎನ್. ಮಂಜೇಗೌಡ, ಡಾ. ಡಿ. ತಿಮ್ಮಯ್ಯ, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ಚುಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಅಧಿಕಾರೇತರ ಕೆ.ಡಿ.ಪಿ ಸದಸ್ಯರಾದ ಸೈಯದ್ ಮುಸೈಯೀಜ್, ಎಂ. ಶಂಕರಪ್ಪ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಎಂ. ಮಹದೇವಣ್ಣ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))