ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಕಚೇರಿ ಬಳಿ ಶನಿವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ಚಾಮರಾಜಪುರಂನ ಬಿಜೆಪಿ ಕಚೇರಿ ಮುಂಭಾಗ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾರ್ಯಕರ್ತರು, ಮುಖಂಡರು, ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಅವರಿಗೆ ಜಕಾರ ಕೂಗಿ ಹರ್ಷ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ನಾನು ಕೂಡ ಹೊಸದಿಲ್ಲಿಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಹೋಗಿದ್ದೆ. ಹಲವು ಕಡೆ ಚುನಾವಣಾ ಪ್ರಚಾರ ನಡೆಸಿದಾಗ, ಅಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಕಂಡು ಬಂದಿತು. ಮತದಾರರು ಬಿಜೆಪಿಗೆ ಒಲವು ವ್ಯಕ್ತಪಡಿಸುತ್ತಿರುವುದು ಕಂಡು ಬಂದಿತು. ಹಾಗಾಗಿ 27 ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ನಾನು ಚುನಾವಣಾ ಪ್ರಚಾರ ನಡೆಸಿದ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಮಾಡುತ್ತಿರುವ ಅಭಿವೃದ್ಧಿ ಕೆಲಸ, ನೀಡುತ್ತಿರುವ ಸ್ವಚ್ಛ ಆಡಳಿತ ದೇಶದ ಜನರ ಮೆಚ್ಚುಗೆ ಗಳಿಸಿದೆ. ಹಾಗಾಗಿ, ಹರಿಯಾಣ, ಕಾಶ್ಮೀರ, ಮಹಾರಾಷ್ಟ್ರ ಚುನಾವಣೆಗಳಲ್ಲಿ ಪಕ್ಷ ಗೆಲುವು ಸಾಧಿಸಿತ್ತು. ಅದರ ಮುಂದುವರಿದ ಗೆಲುವಿನ ಓಟವಾಗಿ ಈಗ ದೆಹಲಿ ಚುನಾವಣೆಯಲ್ಲೂ ಪಕ್ಷ ಜಯಗಳಿಸಿದೆ. ಜನರು ಮೋದಿಯವರ ಅಭಿವೃದ್ಧಿ ಕೆಲಸ, ಆಡಳಿತಕ್ಕೆ ಸ್ಪಂದಿಸುತ್ತಿರುವುದು ಈ ಚುನಾವಣೆಗಳಿಂದ ಕಂಡು ಬರುತ್ತಿದೆ ಎಂದು ಹೇಳಿದರು.ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಮಾತನಾಡಿ, ದೆಹಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬರುತ್ತಿದೆ. ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯನ್ನು ಚುನಾವಣೆ ವೇಳೆ ಘೋಷಿಸದೆ ಗೆಲುವು ಸಾಧಿಸಿದ್ದೇವೆ. 12 ವರ್ಷ ಅಧಿಕಾರದಲ್ಲಿ ಕೂತಿದ್ದ ಸಿಎಂ ಕ್ರೇಜಿವಾಲ್ ಅವರ ದುರಾಡಳಿತದಿಂದ ಬೇಸತ್ತು, ಜನರು ಅವರನ್ನು ಸೋಲಿಸಿದ್ದಾರೆ ಎಂದರು.ಕರ್ನಾಟಕ ರಾಜ್ಯದಲ್ಲೂ ಕ್ರೇಜಿವಾಲ್ ರೀತಿ ಆಡಳಿತ ನಡೆಯುತ್ತಿದೆ. ಈ ಕಾಂಗ್ರೆಸ್ ಸರ್ಕಾರಕ್ಕೂ ಅದೇ ಸ್ಥಿತಿ ಬರಲಿದೆ. ಕೇಂದ್ರ ಸರ್ಕಾರ ಜನಪರವಾದ ಬಜೆಟ್ ನೀಡಿದೆ. ಇದರಿಂದ ಜನರು ಸಂತೃಪ್ತರಾಗಿದ್ದಾರೆ ಎಂದು ಅವರು ತಿಳಿಸಿದರು.ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕ್ರೇಜಿವಾಲ್ ಅವರು ಸಂವಿಧಾನದ ಪ್ರಕಾರ ನಡೆದುಕೊಳ್ಳದೆ, ಜೈಲಿನಿಂದಲೇ ಆಡಳಿತ ನಡೆಸಿದರು. ಭ್ರಷ್ಟಾಚಾರದ ಕಳಂಕ ಹೊತ್ತು ಕ್ರೇಜಿವಾಲ್ ಆಡಳಿತ ನಡೆಸಿದ್ದು, ದೆಹಲಿ ಜನರಿಗೆ ಇಷ್ಟವಾಗಲಿಲ್ಲ. ಹಾಗಾಗಿಯೇ ಈ ಬಾರಿ ಚುನಾವಣೆಯಲ್ಲಿ ಕ್ರೇಜಿವಾಲ್ ಹಾಗೂ ಅವರ ಪಕ್ಷವನ್ನು ತಿರಸ್ಕರಿಸಿದ್ದಾರೆ. ಬಿಜೆಪಿ ಜನಪರವಾದ ವ್ಯಕ್ತಿಗಳನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಿತ್ತು. ಕಾರ್ಯಕರ್ತರು, ಮುಖಂಡರು ಸಂಘಟಿತವಾಗಿ ಪಕ್ಷದ ಗೆಲುವಿಗೆ ಶ್ರಮಿಸಿದರು. ಅದರ ಫಲವಾಗಿ ಪಕ್ಷ ಈಗ ಅಲ್ಲಿ ಗೆದ್ದಿದ್ದು, ಅಧಿಕಾರಕ್ಕೆ ಬರುತ್ತಿದೆ ಎಂದರು.ಮುಖ್ಯಮಂತ್ರಿ ಆಯ್ಕೆಯನ್ನು ಪಕ್ಷದ ಹೈಕವಾಂಡ್ ಮಾಡುತ್ತದೆ. ಈ ಗೆಲುವು ತುಂಬಾ ಖುಷಿ ನೀಡಿದೆ. ಇದೇ ಚುನಾವಣಾ ತಂತ್ರವನ್ನು ಬರುವ ಎಲ್ಲಾ ಚುನಾವಣೆಗಳಲ್ಲಿ ಅಳವಡಿಸಿಕೊಂಡು ಗೆಲುವು ಸಾಧಿಸಲು ಪಕ್ಷ ಪ್ರಯತ್ನಿಸಲಿದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಜಿ ಮೇಯರ್ ಶಿವಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಚಂಪಕಾ, ಪ್ರಮೀಳಾ ಭರತ್, ರಂಗಸ್ವಾಮಿ, ವೇದಾವತಿ, ಪ್ರಧಾನ ಕಾರ್ಯದರ್ಶಿಗಳಾದ ಕೇಬಲ್ ಮಹೇಶ್, ಗಿರಿಧರ್, ರಘು, ನಗರ ಉಪಾಧ್ಯಕ್ಷ ಪುನೀತ್ ಗೌಡ, ವಕ್ತಾರ ಎಂ.ವಿ. ಮೋಹನ್, ಬಿ.ಎಂ. ಸಂತೋಷ್ ಕುಮಾರ್, ಮಹೇಶ್ ರಾಜೇ ಅರಸ್, ಜೋಗಿ ಮಂಜು, ಮಹಿಳಾ ಮೋರ್ಚಾ ಅಧ್ಯಕ್ಷ ರೇಣುಕಾ ರಾಜ್, ಹೇಮಾನಂದೀಶ್, ಜೀವಧಾರ ಗಿರೀಶ್ ಮೊದಲಾದವರು ಇದ್ದರು.