ಕನ್ನಡಪ್ರಭ ವಾರ್ತೆ ಮೈಸೂರು
ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬಿನ ಲಾಭಾಂಶ ಹಣವನ್ನು ಬಿಡುಗಡೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದವರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶನಿವಾರ ಪ್ರತಿಭಟಿಸಿದರು.ಕಳೆದ ವರ್ಷ ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ರಾಜ್ಯ ಸರ್ಕಾರ ರೈತರಿಗೆ ಕೊಡಲು ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್ ಕಬ್ಬಿಗೆ 50 ರೂ., ರಾಜ್ಯ ಸರ್ಕಾರದಿಂದ 50 ರೂ., ನೀಡುವ ಆದೇಶ ಮಾಡಿದೆ. ಮೈಸೂರು, ಚಾಮರಾಜನಗರ ಜಿಲ್ಲಾಧಿಕಾರಿಗಳು ಸಭೆ ಮಾಡಿ ಒಂದು ವಾರ ಕಾಲಾವಕಾಶ ನೀಡಿ ಅದೇಶಿಸಿದ್ದರೂ ಬಣ್ಣಾರಿ ಸಕ್ಕರೆ ಕಾರ್ಖಾನೆ ಹಣ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು.ಬಣ್ಣಾರಿ ಕಾರ್ಖಾನೆ ರೈತರಿಗೆ 18 ಕೋಟಿಗೂ ಹೆಚ್ಚು ಹಣ ನೀಡಬೇಕು. ಅದನ್ನು ತಕ್ಷಣ ರೈತರಿಗೆ ಅಕೌಂಟ್ ಜಮಾ ಮಾಡಬೇಕು. ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಜ್ಜಾಗಬೇಕು. ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಹಾಕುವಲ್ಲಿ ವಿಳಂಬ ಮಾಡುತ್ತಿದ್ದು, ಸರ್ಕಾರ ಆದೇಶ ಮಾಡಿ ಮೂರು ವರ್ಷ ಕಳೆದರೂ ಒಂದು ಸಕ್ಕರೆ ಕಾರ್ಖಾನೆ ಸಹ ತೂಕದ ಯಂತ್ರ ಹಾಕಿಲ್ಲ ಎಂದು ಅವರು ಕಿಡಿಕಾರಿದರು.ಕಬ್ಬು ದರ ನಿಗದಿಯಲ್ಲಿ ಉತ್ತರ, ದಕ್ಷಿಣ ಎಂಬ ವ್ಯತ್ಯಾಸವಿಲ್ಲದೆ ರಾಜ್ಯಕ್ಕೆ ಏಕ ರೀತಿಯ ದರ ನಿಗದಿ ಆಗಬೇಕು. ಉತ್ತರ ದಕ್ಷಿಣ ಎಂಬ ತಾರತಮ್ಯದಿಂದ ಪ್ರತಿ ಟನ್ ಕಬ್ಬಿಗೆ 800 ರೂ. ವ್ಯತ್ಯಾಸ ಬರುತ್ತದೆ. ಇದನ್ನು ತಪ್ಪಿಸಲು ಮುಖ್ಯಮಂತ್ರಿಗಳು ಸ್ವಕ್ಷೇತ್ರದ ರೈತರ ಹಿತ ಕಾಯಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಜಿಲ್ಲೆಯ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಳೆದ ತಿಂಗಳಿನಲ್ಲಿ ಬಿದ್ದಂತಹ ಅಕಾಲಿಕ ಆಲಿಕಲ್ಲು ಮಳೆಯಿಂದ ಆದ ಬೆಳೆ ನಷ್ಟ ಪರಿಹಾರವನ್ನು ತಕ್ಷಣ ರೈತರ ಅಕೌಂಟ್ ಗೆ ಜಮಾ ಮಾಡಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು. ಕೃಷಿಸಾಲವನ್ನು ಜಿಲ್ಲಾ ಸಹಕಾರ ಬ್ಯಾಂಕುಗಳಲ್ಲಿ ಪ್ರತಿ ಎಕರೆಗೆ 1 ಲಕ್ಷ ರೂ. ನಂತೆ 10 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ನೀಡಬೇಕು. ಇಲ್ಲವಾದರೆ ಮುಂದಿನ 10 ದಿನಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮನೆ ಮುಂದೆ ನಿರಂತರ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ರೈತರ ಮನವಿ ಸ್ವೀಕರಿಸಿದರು. ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮುಖಂಡರಾದ ಕೆರೆಹುಂಡಿ ರಾಜಣ್ಣ, ರಾಜು ಅಂಡುವಿನಹಳ್ಳಿ, ನಾಗರಾಜ್, ವಳಗೆರೆ ಗಣೇಶ್, ಮಲಿಯೂರು ಮಹೇಂದ್ರ, ಪ್ರಕಾಶ್ ಗಾಂಧಿ, ದೇವನೂರು ನಾಗೇಂದ್ರ, ಮಹದೇವಪ್ಪ, ಶ್ರೀಕಂಠ, ಮುದ್ದಳ್ಳಿ ಮಧು ಮೊದಲಾದವರು ಇದ್ದರು.ಕಬ್ಬಿನ ಲಾಭಾಂಶ ಹಣ ಬಿಡುಗಡೆಗೆ ಆಗ್ರಹ
ಕಳೆದ ವರ್ಷ ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ರಾಜ್ಯ ಸರ್ಕಾರ ರೈತರಿಗೆ ಕೊಡಲು ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್ ಕಬ್ಬಿಗೆ 50 ರೂ., ರಾಜ್ಯ ಸರ್ಕಾರದಿಂದ 50 ರೂ., ನೀಡುವ ಆದೇಶ ಮಾಡಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.