ಗುಂಡ್ಲುಪೇಟೆಯ ಬಂಡೀಪುರದಲ್ಲಿ ವನ್ಯಜೀವಿಗಳ ಜೀವನಾಡಿ ‘ಹಿರಿಕೆರೆ’ ಕೋಡಿ ಬೀಳಲು ಆರಂಭ

| Published : Jul 24 2024, 12:15 AM IST

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ವಲಯದ ಹಿರಿಕೆರೆ ತುಂಬಿ ಕೋಡಿ ಬೀಳಲು ಶುರು ಮಾಡಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ವಲಯದ ಹಿರಿಕೆರೆ ತುಂಬಿ ಕೋಡಿ ಬೀಳಲು ಶುರು ಮಾಡಿದೆ.

ಶ್ರೀಗಂಧದ ಮೀಸಲು ಅರಣ್ಯ ಪ್ರದೇಶದ ಹಿರಿಕೆರೆ ಬಂಡೀಪುರ ಅರಣ್ಯದ ವನ್ಯಜೀವಿಗಳಿಗೆ ಆಸರೆಯಾಗಿದ್ದ ಕೆರೆಯಲ್ಲಿ ಕಳೆದ ೨ ವರ್ಷಗಳಿಂದ ನೀರು ಬಂದರೂ ಕೆರೆ ತುಂಬಿ ಕೋಡಿ ಬಿದ್ದಿರಲಿಲ್ಲ. ಕಳೆದ ಹಲವು ದಿನಗಳಿಂದ ಬಂಡೀಪುರ ಕಾಡಿನಲ್ಲಿ ಬಿದ್ದ ಮಳೆಯಿಂದ ಹಿರಿಕೆರೆ ನೀರು ಹರಿದು ಬಂದು ಕೆರೆ ತುಂಬಿ ತುಳುಕಲು ಶುರು ಮಾಡಿದೆ. ಹಿರಿ ಕೆರೆ ತುಂಬಿ ಕೋಡಿ ಬಿದ್ದಿರುವ ಕಾರಣ ಕೋಡಿ ಬಿದ್ದು ನೀರು ಹರಿದು ಹಂಗಳ ಗ್ರಾಮದ ಮುಂಭಾಗದಲ್ಲಿ ಕೆರೆ ನೀರು ಬರಲು ಜೋರು ಮಳೆ ಬೀಳಬೇಕಿದೆ.

ಹಿರಿಕೆರೆ ತುಂಬಿ ಹರಿದಿರುವ ಕಾರಣ ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳ ಮುಖದಲ್ಲಿ ಮಂದ ಹಾಸ ಬೀರಿದೆ. ಇತ್ತ ಹಂಗಳ ಗ್ರಾಮದ ರೈತರ ಮುಖದಲ್ಲಿ ಮತ್ತಷ್ಟು ಮಂದಹಾಸ ನಗು ಕಾಣುತ್ತಿದೆ.

ಸಂತಸ ತಂದಿದೆ: ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಮಂಜುನಾಥ್‌ ಕನ್ನಡಪ್ರಭದೊಂದಿಗೆ ಮಾತನಾಡಿ, ಹಿರಿಕೆರೆ ತುಂಬಿ ಕೋಡಿ ಬಿದ್ದಿರುವುದು ಅರಣ್ಯ ಇಲಾಖೆಗೆ ಸಂತಸವಾಗಿದೆ ಎಂದರು. ಗೋಪಾಲಸ್ವಾಮಿ ಬೆಟ್ಟದ ಅರಣ್ಯದ ವನ್ಯ ಜೀವಿಗಳ ಜೀವನಾಡಿಯಾಗಿರುವ ಹಿರಿಕೆರೆ ತುಂಬಿ ಕೋಡಿ ಬಿದ್ದಿರುವ ಕಾರಣ ಸಂತಸ ನಮಗಿಂತ ವನ್ಯಜೀವಿಗಳಿಗೆ ಮುಗಿಲು ಮುಟ್ಟಲಿದೆ ಎಂದರು.