ಹೊನ್ನಾವರ ತಹಸೀಲ್ದಾರ್‌ ಕಚೇರಿಯಲ್ಲಿ ಆಧಾರ್ ಸೇವೆ ಸ್ಥಗಿತ: ಜನರ ಪರದಾಟ

| Published : May 25 2024, 12:50 AM IST

ಸಾರಾಂಶ

ಅಂಚೆ ಕಚೇರಿಯಲ್ಲಿಯೂ ಆಧಾರ್ ಸೇವೆ ಸಿಗುತ್ತಿಲ್ಲ. ಕೆಲವು ಖಾಸಗಿ ಸರ್ವಿಸ್ ಸೆಂಟರ್‌ನಲ್ಲಿಯೂ ಆಧಾರ್‌ಗೆ ಸಂಬಂಧಪಟ್ಟ ಪೂರ್ಣ ಪ್ರಮಾಣದ ಕೆಲಸ ಆಗುತ್ತಿಲ್ಲ.

ಹೊನ್ನಾವರ: ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿನ ಆಧಾರ್ ಸೇವಾ ಕೇಂದ್ರದಲ್ಲಿ ಸೇವೆ 1 ತಿಂಗಳಿನಿಂದ ಸ್ಥಗಿತಗೊಂಡಿದ್ದು, ಸಕಲ ಸೌಲಭ್ಯಗಳಿಗೂ ಆಧಾರವಾಗಿರುವ ಆಧಾರ್‌ ಕಾರ್ಡ್ ಸೇವೆ ಪಡೆಯಲಾಗದೆ ಪಟ್ಟಣ ಸೇರಿದಂತೆ ಗ್ರಾಮಗಳ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲೂಕು, ಗ್ರಾಮೀಣ ಕೇಂದ್ರದಲ್ಲಿನ ಆಧಾರ್‌ ಸೇವೆ ಸ್ಥಗಿತಗೊಂಡಿದ್ದು, ಆಧಾರ್‌ ಕಾರ್ಡ್‌ ಪಡೆಯಲು ಹಾಗೂ ತಿದ್ದುಪಡಿ ಮಾಡಿಸಲು ಜನ ಹಾತೊರೆಯುತ್ತಿದ್ದಾರೆ. ಆಧಾರ್ ಸಂಬಂಧಪಟ್ಟ ಕೆಲಸಕೆಂದು ತಹಸೀಲ್ದಾರ್ ಕಚೇರಿಗೆ ತೆರಳಿದರೆ ಹತ್ತು ದಿನ ಬಿಟ್ಟು ಬನ್ನಿ ಎಂದು ಬೋರ್ಡ್ ಜೋತು ಬಿಟ್ಟಿದ್ದಾರೆ.

ಅಂಚೆ ಕಚೇರಿಯಲ್ಲಿಯೂ ಆಧಾರ್ ಸೇವೆ ಸಿಗುತ್ತಿಲ್ಲ. ಕೆಲವು ಖಾಸಗಿ ಸರ್ವಿಸ್ ಸೆಂಟರ್‌ನಲ್ಲಿಯೂ ಆಧಾರ್‌ಗೆ ಸಂಬಂಧಪಟ್ಟ ಪೂರ್ಣ ಪ್ರಮಾಣದ ಕೆಲಸ ಆಗುತ್ತಿಲ್ಲ. ಶಾಲಾ- ಕಾಲೇಜು ಪ್ರಾರಂಭಗೊಳ್ಳುತ್ತಿದೆ. ವಿದ್ಯಾರ್ಥಿಗಳು ಆಧಾರ್ ಮರು ನವೀಕರಿಸಬೇಕಿದೆ. ಅದರ ಹೊರತಾಗಿ ಬೇರೆ- ಬೇರೆ ಕೆಲಸಕ್ಕೆ ಆಧಾರ್ ತಿದ್ದುಪಡಿ ಆಗಬೇಕಿದೆ. ಆದರೆ, ಕಳೆದ ಒಂದು ತಿಂಗಳಿನಿಂದ ತಹಸೀಲ್ದಾರ್ ಕಚೇರಿಯಲ್ಲಿ ಈ ಕೆಲಸ ಸ್ಥಗಿತಗೊಂಡಿದೆ.

ಅಚಾತುರ್ಯದಿಂದ ಸ್ಥಗಿತ: ತಹಸೀಲ್ದಾರ್ ಕಚೇರಿಯ ಆಧಾರ್ ಕಾರ್ಡ್ ವಿಭಾಗ ನಿರ್ವಹಣೆ ಮಾಡುತ್ತಿರುವವರು ಮಾಡಿದ ಒಂದು ಸಣ್ಣ ವ್ಯತ್ಯಾಸದಿಂದ ಆಧಾರ್ ಸರ್ವಿಸ್ ಅನ್ನೆ ರದ್ದುಗೊಳಿಸಲಾಗಿದೆ. ಆಧಾರ್ ಕಾರ್ಡ್‌ಗೆ ಸಂಬಂಧಪಟ್ಟ ಕೆಲಸ ಮಾಡುವಾಗ ದಾಖಲೆ ನೀಡುವಲ್ಲಿ ಆಗಿರುವ ಆಚಾತುರ್ಯ ಒಂದು ವರ್ಷದ ಆಧಾರ್ ಐಡಿಯನ್ನು ರದ್ದುಪಡಿಸಿದ ಕಾರಣ ಸಾರ್ವಜನಿಕರು ಆಧಾರ್ ಕಾರ್ಡ್ ಕೆಲಸದಿಂದ ವಂಚಿತರಾಗುವಂತಾಗಿದೆ. ಕಳೆದ ಹಲವು ವರ್ಷದಿಂದ ಈ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ಕೆಲಸದ ಗಡಿಬಿಡಿಯಲ್ಲಿ ನಡೆದ ಅತಾಚುರ್ಯ ಆಧಾರ್ ಸೇವೆಯೇ ರದ್ದಾಗುವಂತಾಗಿದೆ.

ವ್ಯವಸ್ಥೆಯ ವೈಫಲ್ಯ, ಆಕ್ರೋಶ: ಆಧಾರ್‌ ಸೇವೆ ತಿಂಗಳಿಂದ ಸ್ಥಗಿತಗೊಂಡಿದ್ದರೂ ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿಲ್ಲ. ಈ ಕಾರಣದಿಂದ ಮಕ್ಕಳು, ಮಹಿಳೆಯರು, ಪುರುಷರು, ವಯೋವೃದ್ಧರು ಆಧಾರ್‌ ಕಾರ್ಡ್‌ ವಂಚಿತರಾಗಿ ಶಿಕ್ಷ ಣ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯದೇ ಪಡಿಪಾಟಿಲು ಬೀಳುತ್ತಿದ್ದಾರೆ. ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಜ್ಞಾವಂತ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲದಕ್ಕೂ ಆಧಾರ: ಆಧಾರ್‌ ಕಾರ್ಡ್‌ ಇಲ್ಲದೇ ಯಾವುದೇ ಕಾರ್ಯಕ್ರಮಗಳ ಹಾಗೂ ಯೋಜನೆಗಳ ಅನುಕೂಲಗಳನ್ನು ಪಡೆಯಲು ಸಾಧ್ಯವಿಲ್ಲ. ಮಹತ್ತರ ಯೋಜನೆಗಳಲ್ಲಿ ಒಂದಾದ ಆಧಾರ್‌ ಕಾರ್ಡ್‌ನ್ನು ಶಾಲೆಗೆ ಮಕ್ಕಳನ್ನು ಸೇರಿಸಲು, ಜಾತಿ ಪ್ರಮಾಣ ಪತ್ರ ಪಡೆಯಲು, ಉದ್ಯೋಗಕ್ಕೆ ಸೇರಲು, ಪಿಂಚಣಿ ಸೌಲಭ್ಯ ಪಡೆಯಲು, ವಾಹನ ಪರವಾನಗಿ ಪಡೆಯಲು ಕಡ್ಡಾಯವಾಗಿ ಆಧಾರ್‌ ಕಾರ್ಡ್‌ ಬೇಕೇ ಬೇಕು. ಕುಮಟಾ ಅಥವಾ ಬೇರೆ ತಾಲೂಕಿಗೆ ಹೋಗುವ ಪರಿಸ್ಥಿತಿ ಇದೆ. ಈಗಲಾದರೂ ಸಂಬಂಧಪಟ್ಟವರು ಕೂಡಲೇ ಆಧಾರ್ ಸೇವಾ ಕೇಂದ್ರಗಳಲ್ಲಿ ಸೇವೆ ಪ್ರಾರಂಭಿಸಬೇಕು.ಸಾರ್ವಜನಿಕರಿಗೆ ತೊಂದರೆ: ಆಧಾರ ತಿದ್ದುಪಡಿ ಸ್ಥಗಿತವಾಗಿರುವುದರಿಂದ ಸರ್ಕಾರದ ಯೋಜನೆ ಪಡೆಯಲಾಗದ ಸ್ಥಿತಿ ಉದ್ಭವಿಸಿದೆ. ಇನ್ನು ವಿಳಂಬ ಮಾಡಿ ಆಧಾರ್ ತಿದ್ದುಪಡಿ ಆರಂಭಿಸಿದರೆ ಏಕಾಏಕಿ ಆಧಾರ್ ಕೇಂದ್ರದಲ್ಲಿ ನೂಕುನುಗ್ಗಲು ಉಂಟಾಗುವ ಸಾಧ್ಯತೆ ಇದೆ. ಶಾಲಾ- ಕಾಲೇಜು ಆರಂಭ ಪೂರ್ವದಲ್ಲೇ ಆಧಾರ್ ಸೇವೆ ಆರಂಭಿಸಿದರೆ ಅನೂಕೂಲವಾಗುತ್ತದೆ ಎಂದು ಸಾರ್ವಜನಿಕರಾದ ವಿವೇಕ್ ಹೊನ್ನಾವರ ತಿಳಿಸಿದ್ದಾರೆ.

ತಾತ್ಕಾಲಿಕ ಸೇವೆ: ಈ ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದವರು ಆಧಾರ್ ಸೇವೆ ಕರ್ತವ್ಯಕ್ಕೆ ಹಾಜರಾಗಲು ಇನ್ನು 15- 20 ದಿನ ಇದೆ. ಜನರಿಗೆ ಅನುಕೂಲವಾಗುದ ದೃಷ್ಟಿಯಿಂದ ಬೇರೆ ಸಿಬ್ಬಂದಿಯಿಂದ ಸೋಮವಾರದಿಂದಲೇ ತಾತ್ಕಾಲಿಕವಾಗಿ ಆಧಾರ್ ಸೇವೆ ಆರಂಭಿಸಲಾಗುವುದು ಎಂದು ತಹಸೀಲ್ದಾರ್‌ ರವಿರಾಜ್ ದೀಕ್ಷಿತ್ ತಿಳಿಸಿದ್ದಾರೆ.