ಜೆ.ಪಿ.ಪಾರ್ಕ್‌ನಲ್ಲಿ ಹಳಿಗೆ ಏರದ ಮಕ್ಕಳ ರೈಲು

| Published : Jan 15 2024, 01:52 AM IST / Updated: Jan 15 2024, 12:56 PM IST

ಸಾರಾಂಶ

ರಾಜಧಾನಿ ಬೆಂಗಳೂರಿನ ಎರಡನೇ ಆಟಿಕೆ ರೈಲು ಮತ್ತಿಕೆರೆಯ ಜೆ.ಪಿ ಪಾರ್ಕ್‌ನಲ್ಲಿ ನಿಂತುಕೊಂಡು ಹಲವು ತಿಂಗಳು ಕಳೆದಿದ್ದು, ಹಳಿ ಏರುವ ಮುನ್ನವೇ ತುಕ್ಕು ಹಿಡಿಯುವ ಲಕ್ಷಣ ಕಂಡು ಬರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನ ಎರಡನೇ ಆಟಿಕೆ ರೈಲು ಮತ್ತಿಕೆರೆಯ ಜೆ.ಪಿ ಪಾರ್ಕ್‌ನಲ್ಲಿ ನಿಂತುಕೊಂಡು ಹಲವು ತಿಂಗಳು ಕಳೆದಿದ್ದು, ಹಳಿ ಏರುವ ಮುನ್ನವೇ ತುಕ್ಕು ಹಿಡಿಯುವ ಲಕ್ಷಣ ಕಂಡು ಬರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಬ್ಬನ್‌ ಪಾರ್ಕ್‌ನ ಜವಾಹರ್ ಬಾಲಭವನದ ಆವರಣದಲ್ಲಿ ನಗರದ ಮೊದಲ ಆಟಿಕೆ ರೈಲನ್ನು 1968ರಲ್ಲಿ ಆರಂಭಿಸಲಾಗಿತ್ತು. 2019ರಲ್ಲಿ ಹಳಿಯಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗಷ್ಟೇ ಪುಟಾಣಿ ರೈಲಿಗೆ ಚಾಲನೆ ನೀಡಲಾಗಿದೆ. 

ಇದೇ ಮಾದರಿಯಲ್ಲಿ ನಗರದ ಎರಡನೇ ಪುಟಾಣಿ ರೈಲು ಯೋಜನೆಯನ್ನು ಮತ್ತಿಕೆರೆಯ ಜೆಪಿ ಪಾರ್ಕ್‌ನಲ್ಲಿ ಪುಟಾಣಿ ರೈಲು ಆರಂಭಿಸುವುದಕ್ಕೆ ಬಿಬಿಎಂಪಿ ಯೋಜನೆ ನಿರ್ಮಿಸಿದ್ದು, ಈಗಾಗಲೇ ಬಹುತೇಕ ಹಳಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ವಿಶೇಷ ಎಂದರೆ, ಮೆಟ್ರೋ ಮಾದರಿಯಲ್ಲಿ ರೈಲಿನ ಪಿಲ್ಲರ್‌ಗಳನ್ನು ನಿರ್ಮಿಸಿ ಮೇಲ್ಭಾಗದಲ್ಲಿ ಸಂಚಾರ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. ಆಟಿಕೆ ರೈಲ್ವೆ ಎಂಜಿನ್‌ ಮತ್ತು ಬೋಗಿಗಳನ್ನು ತೆಗೆದುಕೊಂಡು ಬಂದು ಜೆ.ಪಿ.ಪಾರ್ಕ್‌ನಲ್ಲಿ ಇರಿಸಲಾಗಿದೆ. ಆದರೆ, ರೈಲು ಮಾತ್ರ ಇನ್ನೂ ಹಳಿ ಏರಿಲ್ಲ.

ಹಲವು ತಿಂಗಳಿನಿಂದ ಈ ರೈಲ್ವೆ ಎಂಜಿನ್‌ ಮತ್ತು ಬೋಗಿಗಳು ಬಿಸಿಲು, ಮಳೆ, ಗಾಳಿ ಮೈಯೊಡ್ಡಿ ನಿಂತಿತ್ತಲ್ಲಿಯೇ ನಿಂತುಕೊಂಡಿದ್ದು, ಹಳಿ ಏರುವ ಮುನ್ನವೇ ತುಕ್ಕು ಹಿಡಿಯಲಿವೆಯೇ ಎಂಬ ಆತಂಕ ಇಲ್ಲಿನ ವಾಯು ವಿಹಾರಿಯಲ್ಲಿ ಶುರುವಾಗಿದೆ.

ರೈಲ್ವೆ ಕಾಮಗಾರಿ ಮಾತ್ರವಲ್ಲ, ಇಡೀ ಜೆ..ಪಿ.ಪಾರ್ಕ್‌ನಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ವಿಧಾನಸಭೆ ಚುನಾವಣೆಗೂ ಪೂರ್ವದಲ್ಲಿಯೇ ನಿಂತು ಹೋಗಿವೆ. ಬಳಿಕ ಪುನರ್‌ ಆರಂಭಗೊಂಡಿಲ್ಲ.

1,500 ಆಸನಗಳ ಬಯಲು ರಂಗಮಂದಿರ, ವಸಾಹತುಶಾಹಿ ಶೈಲಿಯ ರೈಲು ನಿಲ್ದಾಣ, ಕನ್ವೆನ್ಷನ್‌ ಸೆಂಟರ್‌, ಗಡಿಯಾರ ಗೋಪುರ ಮತ್ತು ಮಕ್ಕಳ ಆಟದ ಪ್ರದೇಶವನ್ನು ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿವೆ.

ಒಟ್ಟು ₹16 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಚುನಾವಣೆ ಬಂದ ಕಾರಣ ಕಾಮಗಾರಿ ನಿಲ್ಲಿಸಲಾಗಿತ್ತು. ಗುತ್ತಿಗೆದಾರರು ಹಣ ಬಿಡುಗಡೆಯಾಗಿಲ್ಲ ಎಂಬ ಕಾರಣಕ್ಕೆ ಕಾಮಗಾರಿ ಆರಂಭಿಸಿಲ್ಲ. ಶೀಘ್ರದಲ್ಲಿ ಆರಂಭಿಸುವುದಾಗಿ ಹೇಳಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.