ಸಾರಾಂಶ
ಕಲಬುರಗಿ ಜಿಲ್ಲೆಯಲ್ಲಿ ಕಳೆದ 3 ದಿನದಿಂದ ಇದ್ದಂತಹ ಮಳೆಯ ಅಬ್ಬರ ಮಂಗಳವಾರ ತುಸು ತಗ್ಗಿದೆ. ದಟ್ಟ ಮೋಡ ಕವಿದ ವಾತಾವರಣ ಜಿಲ್ಲಾದ್ಯಂತ ಇದ್ದರೂ ಎಲ್ಲಿಯೂ ಮಳೆ ಸುರಿದಿಲ್ಲ. ಆದರೆ ಮಳೆ ನಿಂತ ನಂತರವೂ ಸಾವು ನೋವು ಹಾಗೇ ಮುಂದುವರಿದಿವೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯಲ್ಲಿ ಕಳೆದ 3 ದಿನದಿಂದ ಇದ್ದಂತಹ ಮಳೆಯ ಅಬ್ಬರ ಮಂಗಳವಾರ ತುಸು ತಗ್ಗಿದೆ. ದಟ್ಟ ಮೋಡ ಕವಿದ ವಾತಾವರಣ ಜಿಲ್ಲಾದ್ಯಂತ ಇದ್ದರೂ ಎಲ್ಲಿಯೂ ಮಳೆ ಸುರಿದಿಲ್ಲ. ಆದರೆ ಮಳೆ ನಿಂತ ನಂತರವೂ ಸಾವು ನೋವು ಹಾಗೇ ಮುಂದುವರಿದಿವೆ.ಸೋಮವಾರ ರಾತ್ರಿ ನದಿ ಹಿನ್ನೀರು ದಾಟುವಾಗ ವ್ಯಕ್ತಿಯೋರ್ವ ಸಾವನ್ನಪ್ಪಿರುವ ದಾರುಣ ಘಟನೆ ಚಿಂಚೋಳಿಯಿಂದ ವರದಿ ಯಾಗಿದೆ. ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ವ್ಯಕ್ತಿಯೋರ್ವನು ನದಿ ಹಿನ್ನೀರು ದಾಟುವ ಸಂದರ್ಭದಲ್ಲಿ ನೀರಿನ ರಭಸದಿಂದ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾನೆ.
ಚಿಮ್ಮನಚೋಡ ಗ್ರಾಮದ ಬಾಬು ಗುಂಡಪ್ಪ ನೂಲಕರ (೫೨) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ರಾತ್ರಿ ತನ್ನ ಮನೆಗೆ ಹೋಗುವ ದಾರಿಯಲ್ಲಿ ಸಣ್ಣ ಸೇತುವೆ ಮೇಲೆ ಹಿನ್ನೀರು ದಾಟುವ ಸಂದರ್ಭದಲ್ಲಿ ಘಟನೆ ನಡೆದಿದೆ. ಆದರೆ ಎರಡು ದಿವಸ ಹುಡುಕಾಟ ನಡೆಸಿದ್ದರೂ ಶವ ಪತ್ತೆ ಆಗಿರಲಿಲ್ಲ. ಮಂಗಳವಾರ ಮುಂಜಾನೆ ಮುಲ್ಲಾಮಾರಿ ನದಿ ದಡದಲ್ಲಿ ಶವ ಸಿಕ್ಕಿದೆ. ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ಪಿಎಸೈ ಗಂಗಮ್ಮ ಕಂದಾಯ ನಿರಿಕ್ಷಕ ಆರೀಫ ಭೇಟಿ ನೀಡಿದ್ದಾರೆ.ಇನ್ನು ಚಿತ್ತಾಪುರ , ಅಫಜಲ್ಪುರ, ಕಾಳಗಿ, ಕಲಬುರಗಿ ಹಾಗೂ ಸೇಡಂ ನಲ್ಲಿಯೂ ಮಳೆ ಅಬ್ಬರ ತಗ್ಗಿದೆ, ಆದರೆ ಕಮಲಾಪುರದಲ್ಲಿ ಮಳೆ ಯಿಂದಾಗಿ ರಾಜ್ಯ ಹೆದ್ದಾರಿ ಬಿರುಕು ಬಿಟ್ಟು ತೊಂದರೆಯಾಗಿದೆ. ಈ ದಾರಿಯಲ್ಲಿರುವ ಸೇತುವೆ ಕುಸಿದು ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಕೆಲವು ಕೆರಿ ಬದುವುಗಳು ಬಿರುಕು ಬಿಟ್ಟಿದ್ದರಿಂದ ತೊಂದರೆ ಎದುರಾಗಿದೆ.
ಮಳೆ ನಿಂತರೂ ಕೂಡಾ ಗೋಳಾಟ ಹಾಗೇ ಮುಂದುವರಿದಿದೆ. ವಿದ್ಯುತ್ ಕಂಬಗಲು ಬಿದ್ದಿವೆ, ಟಿಸಿಗಳು ಕೆಟ್ಟಿವೆ. ಇದಲ್ಲದೆ ಜನ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ದಂಡೋತಿಯ ಕಾಗಿಣಾ ಸೇತುವೆಯ ಮೇಲಿನ ನೆಲಹಾಸು ಮುರಿದು ಹೋಗಿದ್ದು ತೊಂದರೆ ಎದುರಾಗಿದೆ.