ಕಮಲಾಪುರದಲ್ಲೂ ತೊಗರಿ ಫಸಲಿಗೆ ಭಾರಿ ಹೊಡೆತ ಬಿದ್ದಿದೆ

| Published : Dec 14 2024, 12:46 AM IST

ಸಾರಾಂಶ

ಕಮಲಾಪುರ ಶಾಸಕ ಮತ್ತಿಮಡು ಒಣಗಿದ ತೊಗರಿ ವೀಕ್ಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ/ ಕಮಲಾಪುರ

ಕಮಲಾಪುರದಲ್ಲೂ ತೊಗರಿ ಫಸಲಿಗೆ ಭಾರಿ ಹೊಡೆತ ಬಿದ್ದಿದೆ. ಹುವಾಡುವ ಹಾಗೂ ಕಾಯಿ ಕಟ್ಟುವ ಹಂತದಲ್ಲೇ ತೊಗರಿ ಉದುರುತ್ತಿದೆ, ಒಣಗಿ ನಿಲ್ಲುತ್ತಿದೆ. ಹೀಗಾಗಿ ತೊಗರಿ ಬೆಳೆಗೆ ಭಾರಿ ಸಂಕಷ್ಟ ಎದುರಾಗಿದೆ.

ನವೆಂಬರ್‌ನಲ್ಲಿ ಶೇ.60 ರಷ್ಟು ಮಳೆ ಕೊರತೆಯಿಂದಾಗಿ ಕಮಲಾಪುರ ತಾಲೂಕು ಸೇರಿದಂತೆ ವಿವಿಧಡೆ ಬೆಳೆದಿರುವ ಬೆಳೆ ಒಣಗಲು ಸುರುವಿಟ್ಟಿದೆ. ಕಳೆದೆ ಎರಡು ವಾರದಿಂದ ಮೋಡಕವಿದು ಮಳೆ ಆಗಾಗ ಸುರಿಯುತ್ತಿದೆ, ಇದರಿಂದಾಗಿಯೂ ತೊಗರಿ ಬೆಳೆ ಹಾನಿಗೊಳಗಾಗುತ್ತಿದೆ. ಶುಷ್ಕ ವಾತಾವರಣ ತೀರುವಗೊಳ್ಳುತ್ತಿರುವುದು ರೈತನನ್ನು ಇನ್ನಷ್ಟು ಕಂಗೆಡುವಂತೆ ಮಾಡಿದೆ.

61000 ಸಾವಿರ ಹೆಕ್ಟರ್‌ನಲ್ಲಿ ತೊಗರಿ ಬಿತ್ತನೆಯಾಗಿದ್ದರೂ ಈ ಪೈಕಿ ಶೇ.60 ರಷ್ಟು ಒಣಗಿ ನಿಂತಿದೆ.

ಜಮೀನಿನಲ್ಲಿ ನಿರೀಕ್ಷೆಗೂ ಮೀರಿ ಆಳೆತ್ತರಕ್ಕೆ ಬೆಳೆದಿರುವ ತೊಗರಿ ಉತ್ತಮ ಇಳುವರಿಯೊಂದಿಗೆ ಜೇಬು ತುಂಬಲಿದೆ ಎಂದು ಖುಷಿಯಲ್ಲಿದ್ದ ರೈತರಿಗೆ ಈಗ ಕಂಗೆಡುವಂತಾಗಿದೆ.

ತಾಲೂಕಿನಲ್ಲಿ ಎರಡು ದೊಡ್ಡ ಜಲಾಶಗಳಿದ್ದು ಕೆಲ ರೈತರು ಮಳೆ ಬರದೇ ಇದ್ದರೂ ಜಲಾಶಯದ ಎಡದಂಡೆ ಕಾಲುವೆ ಹಾಗೂ ಬಲದಂಡ ಕಾಲುವೆ ನೀರಿಗೆ ಸುಮಾರು 70 ರಿಂದ 80 ಹಳ್ಳಿಯ ರೈತರು ಅವಲಂಬನೆಯಾಗಿ ಅವರು ತೊಗರಿಗೆ ನೀರು ಹರಿಸಿ ಇದ್ದಬದ್ದ ಕಾಯಿ ಹೂವು ಬರಿಸುವಲ್ಲಿ ಯಶ ಕಂಡಿದ್ದಾರೆ.

ಡೋಂಗರಗಾಂವ, ಮರಗುತ್ತಿ, ಸ್ವಂತ, ಚಂಗಟಾ, ಕಲಮೂಡ, ಓಕಳಿ, ಕಿಣ್ಣಿಸಡಕ್ ಸೇರಿದಂತೆ ಸುಮಾರು 60 ಹಳ್ಳಿಗಳ ರೈತರು ಯಾವುದು ಜಲಾಶಯ ಅಥವಾ ಇನ್ನಿತರ ಹಳ್ಳ ಕೊಳಗಳು ಇಲ್ಲದ ಕಾರಣ ಮಳೆ ಮೇಲೆ ಅವಲಂಬನೆಯಾಗಿದ್ದಾರೆ. ಇ‍ವರೆಲ್ಲರೂ ಕಾಯಿ,ಹೂವು ಒಣಗುತ್ತಿದ್ದರೂ ಎನೂ ಮಾಡಲಾಗದೆ ಕಂಗಾಲಾಗಿದ್ದಾರೆ.

ಆಗಸ್ಟ್‌ನಲ್ಲಿ ಶೇ.4, ಅಕ್ಟೋಬರ್ ನಲ್ಲಿ ಶೇ.7 ಹಾಗೂ ನವೆಂಬರಲ್ಲಿ ಶೇ.71ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಭೂಮಿಯಲ್ಲಿ ತೇವಾಂಶ ಇಲ್ಲದೆ ತೊಗರಿ ಒಣಗಲಾರಂಭಿಸಿದೆ. ಆದರೆ ಇದು ನೆಟೆ ರೋಗವಲ್ಲ, ಕಾಂಡಮಚ್ಚೆ ರೋಗಬಾಧೆ ಎಂದು ಕೃಷಿ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಆದರೆ ರೈತರನ್ನು ಮಾತನಾಡಿಸಿದಾಗ ನಮ್ಮ ಹೊಲದಲ್ಲಿ ತೊಗರಿಗೆ ನಟೆ ಹೊಡೆದಿದೆ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.

*ಪರಿಹಾರ ತಾರತಮ್ಯ ಸಹಿಸಲ್ಲ

: ಸರ್ಕಾರದ ನಿರ್ದೇಶನ ಇದ್ದರೂ ಗ್ರಾಮೀಣ ಕ್ಷೇತ್ರದ ಕೆಲವೇ ರೈತರ ಹಾನಿಯ ಪರಿಹಾರ ಪಟ್ಟಿ ಮಾಡಿದ್ದು ಸರಿಯಲ್ಲ. ಕಳೆದ ವರ್ಷದಲ್ಲಿ ಆಳಂದ ತಾಲೂಕಿನಲ್ಲಿ ಅತಿ ಹೆಚ್ಚು ಬೆಳೆ ಪರಿಹಾರ, ವಿಮೆ ಕೊಡಿಸಲಾಗಿದೆ. ಆದರೆ ಅದೇ ತಾಲೂಕಿನ, ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ನರೋಣಾ ಭಾಗದಲ್ಲಿ ಉದ್ದೇಶಪೂರ್ವಕವಾಗಿ ಕಡಿಮೆ ಬೆಳೆ ಹಾನಿ ವರದಿ ನೀಡಿ, ಪರಿಹಾರ ವಂಚಿತರಾಗುವಂತೆ ಮಾಡಲಾಗಿದೆ. ಈ ಬಾರಿ ತಪ್ಪು ಮಾಹಿತಿ ನೀಡಿದರೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಶಾಸಕ ಮತ್ತಿಮಡು ಎಚ್ಚರಿಕೆ ನೀಡಿದರು.

ತೊಗರಿ ರೈತರಿಗೆ ಬೇಗ ಪರಿಹಾರ: ಶಾಸಕ ಮತ್ತಿಮಡು ಆಗ್ರಹ

ಗ್ರಾಮೀಣ ವಿಧಾನಸಭೆ ಕ್ಷೇತ್ರದ ಕಮಲಾಪುರ, ಶಹಾಬಾದ್, ಆಳಂದ, ಕಲಬುರಗಿ ತಾಲೂಕಿನ ನರೋಣಾ ಸೇರಿ ಎಲ್ಲೆಡೆ ತೊಗರಿ ಬೆಳೆಗೆ ನೆಟೆರೋಗ ಬಾಧಿಸಿ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತ ಸ್ಥಿತಿ ಸೃಷ್ಟಿಯಾಗಿದ್ದು, ಜಿಲ್ಲಾಡಳಿತ, ಕೃಷಿ ಇಲಾಖೆ ಕೂಡಲೇ ನೆಟೆ ರೋಗಕ್ಕೆ ಪರಿಹಾರ ನೀಡುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಗ್ರಾಮೀಣ ವಿಧಾನಸಭೆ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಆಗ್ರಹಿಸಿದ್ದಾರೆ.