ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ: ಕುಂಬ್ಯಾರ್ ಕಲಾಡ್ಚ ಹಬ್ಬ ಸಂಪನ್ನ

| Published : Dec 14 2024, 12:46 AM IST

ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ: ಕುಂಬ್ಯಾರ್ ಕಲಾಡ್ಚ ಹಬ್ಬ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ (ಪುತ್ತರಿ)ಗೆ ಮುನ್ನಾ ದಿನವಾದ ಶುಕ್ರವಾರ ವಾರ್ಷಿಕ ಕುಂಬ್ಯಾರ್ ಕಲಾಡ್ಚ ಹಬ್ಬವನ್ನು ತಕ್ಕ ಮುಖ್ಯಸ್ಥರು, ಊರಿನ ಪರವೂರಿನ ಭಕ್ತರು ಸೇರಿ ಸಾಂಪ್ರದಾಯಿಕವಾಗಿ ಆಚರಿಸಿದರು.

ಇಂದು ರಾತ್ರಿ ಹುತ್ತರಿ ಮುಹೂರ್ತ । ನಾಡಿನೆಲ್ಲಡೆ ಸಂಭ್ರಮ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ (ಪುತ್ತರಿ)ಗೆ ಮುನ್ನಾ ದಿನವಾದ ಶುಕ್ರವಾರ ವಾರ್ಷಿಕ ಕುಂಬ್ಯಾರ್ ಕಲಾಡ್ಚ ಹಬ್ಬವನ್ನು ತಕ್ಕ ಮುಖ್ಯಸ್ಥರು, ಊರಿನ ಪರವೂರಿನ ಭಕ್ತರು ಸೇರಿ ಸಾಂಪ್ರದಾಯಿಕವಾಗಿ ಆಚರಿಸಿದರು.

ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತುಪೋರಾಟದೊಂದಿಗೆ ದೇವಾಲಯಕ್ಕೆ ತಲುಪಿ ಎತ್ತುಪೋರಾಟವನ್ನು ಒಪ್ಪಿಸಲಾಯಿತು. ನಂತರ ಭಕ್ತರಿಂದ ತುಲಾಭಾರ ಸೇವೆ ಸೇರಿದಂತೆ ಹಾಲು ಬಲಿವಾಡು ಹರಕೆ, ಇನ್ನಿತರ ಪೂಜೆಗಳನ್ನು ನೆರವೇರಿಸಿದ ಬಳಿಕ ಮಹಾಪೂಜೆ ಜರುಗಿ ತೀರ್ಥ ಪ್ರಸಾದ, ಅನ್ನಸಂತರ್ಪಣೆ ನೆರವೇರಿತು.

ನಂತರ ದೇವರ ನಡೆಯಲ್ಲಿ ನಿಂತು ತಕ್ಕ ಮುಖ್ಯಸ್ಥರು ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವರ ಪ್ರದರ್ಶನ ಬಲಿ ಜರುಗಿ, ಎತ್ತುಪೋರಾಟದೊಂದಿಗೆ ತಕ್ಕ ಮುಖ್ಯಸ್ಥರು, ಭಕ್ತರು ಇಗ್ಗುತ್ತಪ್ಪ ದೇವರ ಆದಿ ಸ್ಥಳವಾದ ಮಲ್ಮ ಬೆಟ್ಟಕ್ಕೆ ತೆರಳಿದರು.

ಇದೇ ಸಂದರ್ಭ ಪೇರೂರು ಹಾಗೂ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದ ತಕ್ಕ ಮುಖ್ಯಸ್ಥರು ಎತ್ತು ಪೋರಾಟದೊಂದಿಗೆ ಮಲ್ಮಕ್ಕೆ ಆಗಮಿಸಿದರು. ಅರ್ಚಕರು ಶುದ್ಧಕಲಶ ಪೂಜಾಕಾರ್ಯಗಳನ್ನು ನೆರವೇರಿಸಿ, ಎತ್ತುಪೋರಾಟ ದುಡಿಕೊಟ್ಟ್ ಪಾಟ್ ನೆರವೇರಿತು. ಬಳಿಕ ಎತ್ತುಪೋರಾಟದ ಅಕ್ಕಿಯನ್ನು ಮೂರು ಭಾಗಮಾಡಿ ನೆಲಜಿ, ಪೇರೂರು ಹಾಗೂ ಪಾಡಿ ದೇವಾಲಯದ ತಕ್ಕಮುಖ್ಯಸ್ಥರು ಹಂಚಿಕೊಂಡು ದೇವರ ಕಟ್ಟು ಸಡಿಲಿಸಿ ನಾಡಿನ ಸುಭಿಕ್ಷೆಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸಂಜೆ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಕಲಾಡ್ಚ ಸಂಭ್ರಮದಿದ ಜರುಗಿತು. ಈ ಸಂದರ್ಭ ನಾಡಿನ ಮತ್ತು ದೇವಾಲಯದ 13 ತಕ್ಕ ಮುಖ್ಯಸ್ಥರು, ಭಕ್ತ ಜನ ಸಂಘ ಸೇರಿದಂತೆ ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಊರಿನ, ಪರವೂರಿನ ಭಕ್ತರು ಪಾಲ್ಗೊಂಡಿದ್ದರು.

ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿಯೂ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವ ಜರುಗಿತು. ಹಬ್ಬದ ಪ್ರಯುಕ್ತ ಎತ್ತುಪೋರಾಟ, ಹರಕೆ ಇನ್ನಿತರ ಪೂಜೆಗಳನ್ನು ನೆರವೇರಿಸಿದ ಬಳಿಕ ಮಹಾಪೂಜೆ ಜರುಗಿ ಭಕ್ತರಿಗೆ ತೀರ್ಥ ಪ್ರಸಾದ, ಅನ್ನಸಂತರ್ಪಣೆ ನೆರವೇರಿತು.ಇಂದು ಹುತ್ತರಿ ಆಚರಣೆ:

ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಡಿ.೧೪ರಂದು ರಾತ್ರಿ ೭.೩೦ ಗಂಟೆಗೆ ನೆರೆ ಕಟ್ಟುವುದು, ೮.೩೦ ಗಂಟೆಗೆ ಕದಿರು ಕೊಯ್ಯುವುದು ಮತ್ತು ೯.೩೦ ಗಂಟೆಗೆ ಪ್ರಸಾದ ಸ್ವೀಕಾರ ಮಾಡಲು ಶುಭ ಗಳಿಗೆಯಾಗಿದೆ.

ಬಳಿಕ ನಾಡಿನೆಲ್ಲೆಡೆ ರಾತ್ರಿ ೭.೫೦ಕ್ಕೆ ನೆರೆ ಕಟ್ಟುವುದು, ೮.೫೦ಕ್ಕೆ ಕದಿರು ಕೊಯ್ಯುವುದು ಮತ್ತು ೯.೫೦ಕ್ಕೆ ಪ್ರಸಾದ ಸ್ವೀಕರಿಸುವ ಮೂಲಕ ನಾಡಿನಾದ್ಯಂತ ಸಂಭ್ರಮದ ಹುತ್ತರಿ ಆಚರಣೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ.---------------------

ಹುತ್ತರಿ ಹಬ್ಬ: ನಾಪೋಕ್ಲಿನಲ್ಲಿ ಪಟಾಕಿ ಮಾರಾಟ ಬಿರುಸು

ನಾಪೋಕ್ಲು: ಹುತ್ತರಿ ಹಬ್ಬವೆಂದರೆ ಗ್ರಾಮೀಣ ಪ್ರದೇಶದಲ್ಲಿ ಅತೀವ ಸಂಭ್ರಮ. ಧಾನ್ಯಲಕ್ಷ್ಮಿಯನ್ನು ಕರೆತರುವ ಈ ಹಬ್ಬದಲ್ಲಿ ಸುಡುಮದ್ದುಗಳದ್ದೇ ದರ್ಬಾರ್. ರಾಜ್ಯದ ಇತರೆಡೆಗಳಲ್ಲಿ ದೀಪಾವಳಿಯನ್ನು ಬೆಳಕಿನ ಹಬ್ಬವಾಗಿ ಆಚರಿಸಿದರೆ ಕೊಡಗಿನಲ್ಲಿ ಹುತ್ತರಿಯನ್ನು ಬೆಳಕಿನ ಹಬ್ಬವಾಗಿ ಆಚರಿಸುತ್ತಾರೆ. ಅಂತೆಯೇ ಪಟಾಕಿಗಳಿಗೆ, ಸುಡುಮದ್ದುಗಳಿಗೆ ಬೇಡಿಕೆಯೂ ಅಧಿಕ.ನಾಪೋಕ್ಲುವಿನ ಸಂತೆ ಶುಕ್ರವಾರ ಮೈದಾನದಲ್ಲಿ ಪಟಾಕಿಗಳ ಮಾರಾಟ ಬಿರುಸಿನಿಂದ ನಡೆಯಿತು. ಗ್ರಾಹಕರು ಇಲ್ಲಿನ ಐದು ಮಳಿಗೆಗಳಿಂದ ಪಟಾಕಿಗಳನ್ನು ಖರೀದಿಸಿದರು. ಶನಿವಾರ (ಇಂದು) ಹುತ್ತರಿ ಹಬ್ಬದಂದು ಭತ್ತದ ಗದ್ದೆಗಳಲ್ಲಿ ಕದಿರು ಕೊಯ್ಯುವಲ್ಲಿಂದ ಹಿಡಿದು ರಾತ್ರಿಯಿಡೀ ಪಟಾಕಿ ಸಿಡಿಸುತ್ತಾರೆ. ಅದಕ್ಕೂ ಮುನ್ನ ಕತ್ತಲೆ ಆವರಿಸುತ್ತಿದ್ದಂತೆ ನೆರೆಕಟ್ಟುವ ಕಾರ್ಯ ಆರಂಭಗೊಳ್ಳುತ್ತದೆ. ಇಡೀ ದಿನ ಪಟಾಕಿಗಳ ಸದ್ದು ಮಾರ್ದನಿಸುತ್ತದೆ.ಹಬ್ಬದಲ್ಲಿ ಸಾವಿರಾರು ರುಪಾಯಿಗಳ ಪಟಾಕಿಗಳನ್ನು ಗ್ರಾಹಕರು ಖರೀದಿಸಿ, ಮನೆ ಮಂದಿಗೆ ಮಾತ್ರವಲ್ಲ, ತಮ್ಮ ಲೈನ್ ಮನೆಗಳಲ್ಲಿ ವಾಸವಿರುವ ಕೂಲಿ ಕಾರ್ಮಿಕರ ಮಕ್ಕಳಿಗೂ ಪಟಾಕಿ ಕೊಟ್ಟು ಸಿಡಿಸಿ ಸಂಭ್ರಮಿಸುತ್ತಾರೆ.

13-ಎನ್ ಪಿ ಕೆ-3.ನಾಪೋಕ್ಲುವಿನ ಸಂತೆ ಮೈದಾನದಲ್ಲಿ ಸೋಮವಾರ ಹುತ್ತರಿಯ ಪಟಾಕಿಗಳ ಮಾರಾಟ ಬಿರುಸಿನಿಂದ ನಡೆಯಿತು.