ಕುಕನೂರು ತಾಲೂಕಿನಲ್ಲಿ ಬಿರು ಬಿಸಿಲಿಗೆ ತತ್ತರಿಸಿದ ಜನ

| Published : Mar 30 2024, 12:46 AM IST

ಸಾರಾಂಶ

ಕುಕನೂರು ತಾಲೂಕು ಕೊತ ಕೊತ ಕುದಿಯುತ್ತಿದೆ. ತಾಪಮಾನ ಹೆಚ್ಚಳದಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಮಧ್ಯಾಹ್ನ ಓಡಾಡಲು ಅಂಜುತ್ತಿದ್ದಾರೆ. ರಸ್ತೆಗಳು ಜನರಿಲ್ಲದೆ ಖಾಲಿಯಾಗಿ ಕಾಣುತ್ತಿವೆ.

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು: ಬಿರು ಬಿಸಿಲಿನ ತಾಪದಿಂದ ಕುಕನೂರು ಕೊತ ಕೊತ ಕುದಿಯುತ್ತಿದೆ. ಜನರು ತತ್ತರಿಸಿ ಹೋಗಿದ್ದಾರೆ. ಅಧಿಕವಾದ ಬಿಸಿಲಿನ ತಾಪಮಾನ ಜನರ ಉತ್ಸಾಹ ಕುಗ್ಗಿಸುತ್ತಿದೆ. ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗುವ ಬಿಸಿಲಿನ ಕಾವು ಸಂಜೆ 6 ಗಂಟೆಯಾದರೂ ತಗ್ಗುವುದಿಲ್ಲ. ಈ ಮಧ್ಯೆ ಜನರು ದೈನಂದಿನ ಚಟುವಟಿಕೆ, ಕಚೇರಿ ಕೆಲಸ, ವೃತ್ತಿ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತಿದೆ.

ಇನ್ನೂ ವೃದ್ಧರು, ಮಕ್ಕಳಂತೂ ಬಿಸಲಿಗೆ ಬಸವಳಿದು ಹೋಗುತ್ತಿದ್ದಾರೆ. ಬೆಳಗ್ಗೆ 9 ಗಂಟೆ ನಂತರ ಮನೆಯಿಂದ ಹೊರಬರುವುದೇ ಇಲ್ಲ. ವ್ಯಾಪಾರ-ವಹಿವಾಟುಗಳು ಮಂದಗತಿ ಪಡೆದಿವೆ. ಜನರು ಮನೆ ಬಿಟ್ಟು ಬಾರದ ಕಾರಣ ಅಂಗಡಿಕಾರರು ಸಹ ಮಧ್ಯಾಹ್ನದ ವೇಳೆಗೆ ಅಂಗಡಿ ಮುಚ್ಚಿ ಮನೆ ಸೇರುತ್ತಿದ್ದಾರೆ.

ಅಬ್ಬಾ! ಬಿಸಿಲು: ಎಂತಹ ಬಿಸಿಲು ಎಪ್ಪಾ! ಎಂದು ಜನರು ಹೌಹಾರುತ್ತಿದ್ದಾರೆ. ಕೊತ ಕೊತ ಕುದಿಯುವ ತಾಪಮಾನಕ್ಕೆ ಕಂಗೆಟ್ಟು ಹೋಗುತ್ತಿದ್ದಾರೆ. ಮೈಯೆಲ್ಲ ಬೆವರು ಸುರಿಯುವಂತಾಗಿದೆ. ಬಿಸಿಲ ಈ ಝಳಕ್ಕೆ ಬೆಚ್ಚನ ನೀರಿನ ಸ್ನಾನ ಮಾಡಿದಂತಾಗುತ್ತಿದೆ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

ಬಿಕೋ ಅನ್ನುವ ರಸ್ತೆಗಳು: ಮಧ್ಯಾಹ್ನ 12 ಗಂಟೆ ವೇಳೆಗೆ ರಸ್ತೆಗಳು ಬಿಕೋ ಎನ್ನುತ್ತಿರುತ್ತವೆ. ಸದಾ ಜನದಟ್ಟಣೆಯಿಂದ ಕೂಡಿರುತ್ತಿದ್ದ ಕುಕನೂರು ಪಟ್ಟಣದ ಪ್ರಮುಖ ರಸ್ತೆಗಳು ಖಾಲಿಯಾಗಿರುತ್ತವೆ. ಸಂಜೆಯಾದರೂ ಜನರ ಓಡಾಟ ಕಡಿಮೆಯೇ ಇರುತ್ತದೆ.

ತಂಪು ಪಾನೀಯಗಳ ಮೊರೆ: ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಊಟಕ್ಕಿಂತ ಹೆಚ್ಚಾಗಿ ತಂಪು ಪಾನೀಯಗಳನ್ನು ಸೇವಿಸುತ್ತಿದ್ದಾರೆ. ಎಳನೀರು, ಮಜ್ಜಿಗೆ, ಜ್ಯೂಸ್, ಕಬ್ಬಿನ ಹಾಲು, ಸೋಡಾ ಪಾನೀಯಗಳು, ಐಸ್ ಕ್ರೀಮ್, ಹಣ್ಣುಹೀಗೆ ತಂಪು ಪಾನೀಯಗಳು ಕಂಡ ಕೂಡಲೇ ಜನರು ನಿಂತು ಸೇವಿಸಿ ತೆರಳುತ್ತಿದ್ದಾರೆ.

ಎಳನೀರು, ಲಿಂಬು ಹಣ್ಣಿಗೆ ಬೇಡಿಕೆ: ಒಂದು ಎಳೆ ನೀರನ್ನು ₹35ರಿಂದ ₹40ಕ್ಕೆ ಮಾರಾಟ ಮಾಡುತ್ತಿದ್ದಾರೆ. ಒಮ್ಮೊಮ್ಮೆ ಅಷ್ಟು ಹಣ ಕೊಟ್ಟರೂ ಎಳನೀರು ಸಿಗುತ್ತಿಲ್ಲ. ಹಾಗೆ ಲಿಂಬೆಹಣ್ಣಿಗೂ ಭಾರೀ ಬೇಡಿಕೆ ಬಂದಿದೆ. ಬೇಸಿಗೆ ದಿನದಲ್ಲಿ ಇಳುವರಿ ಕಡಿಮೆ ಇರುವುದರಿಂದ ಒಂದು ಲಿಂಬೆಹಣ್ಣು ಮಾರುಕಟ್ಟೆಯಲ್ಲಿ ₹5ರಿಂದ ₹8ರ ವರೆಗೆ ಮಾರಾಟವಾಗುತ್ತಿದೆ.

ತೀರದ ದಾಹ: ಎಷ್ಟೇ ತಂಪು ಪಾನೀಯಗಳನ್ನು ಸೇವಿಸಿದರೂ ಜನರ ದಾಹ ತೀರುತ್ತಿಲ್ಲ. ಬಿರು ಬಿಸಿಲು ಜನರನ್ನು ಹೈರಾಣವನ್ನಾಗಿಸಿದೆ.

ಈ ಸಲ ಬೇಸಿಗೆ ಬಿಸಿಲು ಅತ್ಯಂತ ಹೆಚ್ಚಾಗಿದೆ. ಬಿಸಲಿನ ತಾಪಕ್ಕೆ ಮನೆಯಿಂದಲೇ ಜನರು ಹೊರಬರದಂತಾಗಿದೆ. ತಂಪು ಪಾನೀಯಗಳನ್ನು ಜನರು ಕುಡಿದು ದಾಹ ತೀರಿಸಿಕೊಳ್ಳುತ್ತಿದ್ದಾರೆ. ಆದರೆ ಬಿಸಿಲಿನ ಝಳದಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಜನರ ನಿತ್ಯ ಕೆಲಸದ ಮೇಲೆ ಅಧಿಕ ಬಿಸಿಲು ಪರಿಣಾಮ ಬೀರುತ್ತಿದೆ ಎಂದು ಕುಕನೂರು ನಿವಾಸಿಗಳಾದ ಸಿದ್ದಯ್ಯ ಕಳ್ಳಿಮಠ, ರಾಮಣ್ಣ ಭಜಂತ್ರಿ ಹೇಳುತ್ತಾರೆ.