ಮನೆ ನಿರ್ಮಾಣದ ಅಡಿಪಾಯದಲ್ಲಿ ದೊರೆತಿರುವುದು ನಿಧಿಯೇ ಅಲ್ಲ. ರಾಜ ಮಹಾರಾಜರ ಕಾಲದ್ದು ಅಲ್ಲ, ಅದೊಂದು ಅಡುಗೆ ಮನೆಯಲ್ಲಿ ದೊರೆತ ಇತ್ತೀಚಿನ ಬಂಗಾರದ ಆಭರಣಗಳು ಅಂತ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿರುವುದು ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ಗೊಂದಲ ಮೂಡಿಸಿದ್ದಾರೆ.

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಶನಿವಾರ ಅಪಾರ ಪ್ರಮಾಣದ ಬಂಗಾರದ ಆಭರಣಗಳು ಪತ್ತೆಯಾಗಿ ರಾಜ್ಯವೇ ಲಕ್ಕುಂಡಿಯತ್ತ ಗಮನ ಹರಿಸುವಂಥ ಸುದ್ದಿಯಾಗಿತ್ತು. ಆದರೆ ದಿನ ಕಳೆಯುವುದರೊಳಗಾಗಿ ಲಕ್ಕುಂಡಿಯಲ್ಲಿ ಸಿಕ್ಕಿರುವ ಬಂಗಾರ ನಿಧಿ ಅಲ್ಲ ಎನ್ನುವ ಮಾಹಿತಿಯನ್ನು ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅಧಿಕಾರಿಗಳು ಈ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಖುದ್ದು ಜಿಲ್ಲಾಡಳಿತವೇ ಗೊಂದಲಕ್ಕೆ ಬಿದ್ದಿದೆ.

ಮನೆ ನಿರ್ಮಾಣದ ಅಡಿಪಾಯದಲ್ಲಿ ದೊರೆತಿರುವುದು ನಿಧಿಯೇ ಅಲ್ಲ. ರಾಜ ಮಹಾರಾಜರ ಕಾಲದ್ದು ಅಲ್ಲ, ಅದೊಂದು ಅಡುಗೆ ಮನೆಯಲ್ಲಿ ದೊರೆತ ಇತ್ತೀಚಿನ ಬಂಗಾರದ ಆಭರಣಗಳು ಅಂತ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿರುವುದು ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ಗೊಂದಲ ಮೂಡಿಸಿದ್ದಾರೆ.

ಶನಿವಾರ ದೊರೆತ ಆಭರಣಗಳು, ಬಹುತೇಕ ಆಭರಣಗಳು ಭಗ್ನಗೊಂಡಿವೆ. ಅವು ಯಾವ ಕಾಲದ್ದು ಎನ್ನುವುದು ತಪಾಸಣೆ ಬಳಿಕವೇ ತಿಳಿಯಲಿದೆ. ಇದರ ಜತೆ ಗಟ್ಟಿ ಬಂಗಾರದಂಥ ನಾಣ್ಯಗಳು ಸಿಕ್ಕಿದ್ದರೆ ಇತಿಹಾಸಕ್ಕೆ ದೊಡ್ಡ ಪ್ರೇರೇಪಣೆ ಸಿಕ್ಕು ದೊಡ್ಡ ಆಧಾರವಾಗುತ್ತಿತ್ತು. ಆದರೆ ಹಳೆಯ ಕಾಲದ ಆಭರಣಗಳ ಲಕ್ಷಣಗಳೇ ಬೇರೆ ರೀತಿ ಆಗಿರುತ್ತವೆ. ಈಗ ಸಿಕ್ಕಿರುವ ಆಭರಣಗಳೇ ಬೇರೆ ರೀತಿಯದ್ದಾಗಿವೆ.

ನಮ್ಮ ಬಂಗಾರ ನಮಗೆ ಕೊಡಿ: ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಬಂಗಾರ ಸಿಕ್ಕ ಕುಟುಂಬದ ಗಂಗವ್ವ ರಿತ್ತಿ, ಸಹೋದರ ಗುಡದಪ್ಪ ಬಾಗಲಿ, ತಾಯಿ ಗಿರಿಜಮ್ಮ ಬಾಗಲಿ ಅವರು, ಕಡುಬಡವರಿದ್ದು ಸಾಲ ಮಾಡಿ ಮನೆ ಕಟ್ಟುತ್ತಿದ್ದೇವೆ. ಭಾರತೀಯ ಪುರಾತತ್ವ ಇಲಾಖೆಯು ಇದು ನಿಧಿ ಅಲ್ಲ, ನಮ್ಮ ವಂಶಸ್ಥರು ಹೂತಿಟ್ಟ ಬಂಗಾರವಾಗಿದೆ ಎಂದು ತಿಳಿಸಿದ್ದು, ನಮ್ಮ ಬಂಗಾರ ನಮಗೆ ಸರ್ಕಾರ ಮರಳಿ ಕೊಡಬೇಕು. ನಮ್ಮ ಮಗ ಗೊತ್ತಾಗದೇ ಸರ್ಕಾರಕ್ಕೆ ತಿಳಿಸಿದ್ದಾನೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಹೇಳಿದಂತೆ ನಮ್ಮ ವಂಶಸ್ಥರ ಬಂಗಾರವನ್ನು ನಮಗೆ ಮರಳಿ ನೀಡಬೇಕು ಎಂದು ವಿನಂತಿಸಿದ್ದಾರೆ.

ಸ್ವ ಇಚ್ಛೆಯಿಂದ ಬಂಗಾರದ ಆಭರಣಗಳನ್ನು ಕೊಟ್ಟಿದ್ದರು. ಆದರೆ ಅಧಿಕಾರಿ ರಮೇಶ ಮೂಲಿಮನಿ ಅವರು ನೀಡಿದ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿದೆ. ಕುಟುಂಬಸ್ಥರು ಬಂಗಾರವನ್ನು ಮರಳಿ ಕೇಳುತ್ತಿದ್ದಾರೆ ಎಂದು ಗ್ರಾಪಂ ಸದಸ್ಯ ಪೀರಸಾಬ ನದಾಫ, ವಿರೂಪಾಕ್ಷಿ ಬೆಟಗೇರಿ ಇತರರು ಆಕ್ರೋಶ ವ್ಯಕ್ತಪಡಿಸಿದರು.ಗೊಂದಲದಲ್ಲಿ ಜಿಲ್ಲಾಡಳಿತ

ಶನಿವಾರ ಬಂಗಾರ ದೊರೆತ ತಕ್ಷಣವೇ ಸ್ಥಳಕ್ಕೆ ತೆರಳಿದ್ದ ಜಿಲ್ಲಾಡಳಿತ ಆ ಬಂಗಾರವನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಆದರೆ ಭಾನುವಾರ ಇಲಾಖೆ ಅಧಿಕಾರಿಗಳು ಅದು ನಿಧಿಯಲ್ಲ ಎಂದು ಹೇಳಿದ ನಂತರ ಕುಟುಂಬಸ್ಥರು ಬಂಗಾರವನ್ನು ಮರಳಿ ಕೇಳುತ್ತಿದ್ದಾರೆ. ಅದನ್ನು ತನ್ನ ಬಳಿ ಇಟ್ಟುಕೊಳ್ಳಬೇಕಾ? ಅಥವಾ ಕುಟುಂಬಕ್ಕೆ ಮರಳಿ ನೀಡಬೇಕೋ? ಎನ್ನುವ ಗೊಂದಲದಲ್ಲಿದ್ದು, ಜಿಲ್ಲಾಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಕಾಮಗಾರಿ ಮಾಡದಂತೆ ಸೂಚನೆ

ತಮ್ಮ ಮನೆಯ ಪಾಯ ಅಗೆಯುವ ವೇಳೆಯಲ್ಲಿ ದೊರೆತ ಬಂಗಾರದ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಒಂದು ಶಾಲು ಹಾಗೂ ಅಭಿನಂದನೆಯ ಸನ್ಮಾನವನ್ನು ಸ್ವೀಕರಿಸಿದ್ದ ಕುಟುಂಬವೀಗ ಅಕ್ಷರಶಃ ತೊಂದರೆಯಲ್ಲಿದೆ. ಬಂಗಾರ ಸಿಕ್ಕ ಸ್ಥಳವನ್ನು ಮಹಜರು ಮಾಡಿ ಅಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಸೂಚಿಸಲಾಗಿದೆ. ಇತ್ತ ಕುಟುಂಬಸ್ಥರು ಸಿಕ್ಕ ಬಂಗಾರವನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಸದ್ಯ ಕೈಯಲ್ಲಿನ ಬಂಗಾರ ಹೋಯಿತು, ಮನೆ ಕಟ್ಟುವ ಅವಕಾಶವನ್ನು ಕಳೆದುಕೊಂಡಿರುವ ಕುಟುಂಬ ಬೀದಿಗೆ ಬರುವಂತಾಗಿದೆ.

ಹೂತಿಟ್ಟ ಬಂಗಾರ: ಲಕ್ಕುಂಡಿ ಗ್ರಾಮದ ಚವಡಿ ಸಮೀಪದ ಮನೆ ನಿರ್ಮಾಣದ ಕಾಮಗಾರಿಯ ಸಂದರ್ಭದಲ್ಲಿ ಅಡಿಪಾಯ ತೆಗೆಯುವಾಗ ದೊರೆತ 470 ಗ್ರಾಮ ಚಿನ್ನಾಭರಣದ ತಂಬಿಗೆ ನಿಧಿ ಅಲ್ಲ, ಅವರ ವಂಶಸ್ಥರು ಹೂತಿಟ್ಟ ಬಂಗಾರವಾಗಿದೆ. ಅಡುಗೆ ಮನೆಯಲ್ಲಿ ದೊರೆತ ಬಂಗಾರದ ವಸ್ತುಗಳಾಗಿವೆ. ಹಿಂದಿನ ಕಾಲದ ಅಜ್ಜ ಮುತ್ತಜ್ಜನವರು ಬಂಗಾರದ ವಸ್ತುಗಳನ್ನು ಬಚ್ಚಿಡಲು ಆಧುನಿಕ ಕಾಲದಂತೆ ತಿಜೋರಿ, ಕಪಾಟು ವ್ಯವಸ್ಥೆ ಇರಲಿಲ್ಲ. ಈ ಕಾರಣದಿಂದ ಮನೆಯ ಸದಸ್ಯರಿಗೆ ಗೊತ್ತಾಗುವಂತೆ ಅಡುಗೆ ಮನೆಯ ಒಲೆಯ ಹತ್ತಿರ ಹುಗಿಯುವಂತಹ ಪದ್ಧತಿಯಿತ್ತು. ಆ ಸ್ಥಿತಿಯಲ್ಲಿಯೇ ಈ ವಸ್ತುಗಳು ಸಿಕ್ಕಿವೆ. ಅಂದರೆ ಈ ಬಾಲಕನ ಅಜ್ಜ ಮುತ್ತಜ್ಜನವರು ದೊಡ್ಡ ಮನೆತನದವರು ಇದ್ದರೂ ಇರಬಹುದು. ಅದು ಸಹ ಸಂಶೋಧನೆ ನಂತರ ಗೊತ್ತಾಗಬೇಕಿದೆ ಎಂದು ಭಾರತೀಯ ಸರ್ವೇಕ್ಷಣಾ ಇಲಾಖೆಯ ಧಾರವಾಡ ವಲಯದ ಅಧಿಕ್ಷಕ ರಮೇಶ ಮೂಲಿಮನಿ ತಿಳಿಸಿದರು.