ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಪ್ರತಿಯೊಂದರ ಸತ್ಯಾಸತ್ಯತೆ ನಾವು ನೋಡುವ ದೃಷ್ಟಿಯಲ್ಲಿ ಅಡಗಿದೆ. ಜೀವನದಲ್ಲಿ ಶ್ರದ್ಧೆ- ನಂಬಿಕೆ- ವಿಶ್ವಾಸಗಳನ್ನು ಬೆಳೆಸಿಕೊಂಡು ನಡೆಯುವುದು ಅವಶ್ಯಕವಾಗಿದೆ ಎಂದು ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ನುಡಿದರು.ತಾಲೂಕಿನ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಶ್ರೀ ರೇಣುಕಾಚಾರ್ಯರ ಮೂರ್ತಿ ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆ ಆಯೋಜಿಸಿದ್ದ ಧರ್ಮಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಭೀಷಣನ ಕೋರಿಕೆ ಮೇರೆಗೆ ಶ್ರೀಲಂಕಾದಲ್ಲಿ ಮುಕ್ಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದ್ದು ಇತಿಹಾಸ. ಆದರೂ ಅದು ಇಂದಿಗೂ ಸತ್ಯವಾಗಿದೆ. ಶ್ರೀಲಂಕಾದ ಜಾಫ್ನಾದಿಂದ ಉತ್ತರಕ್ಕೆ 140 ಕಿ.ಮೀ. ಅಂತರದಲ್ಲಿರುವ ಲಿಂಗಮಲೈ ಹತ್ತಿರ ರೇಣುಕವನ- ರೇಣುಕ ಗ್ರಾಮವಿದ್ದು, ಅಲ್ಲಿಗೆ ಭೇಟಿ ನೀಡಿದರೆ ಆ ಸಂಪೂರ್ಣ ಪ್ರದೇಶ ಲಿಂಗಮಯ ಆಗಿರುವುದನ್ನು ಕಾಣಬಹುದು ಎಂದರು.ರೇಣುಕರ ಹೆಸರನ್ನು ಹೊಂದಿದ ಅನೇಕ ಜನರು ಅಲ್ಲಿದ್ದಾರೆ. ಹೊರದೇಶದವರು ಒಪ್ಪುವ ಈ ಪರಂಪರೆಯನ್ನು ನಮ್ಮವರು ಪ್ರಶ್ನೆ ಮಾಡುವುದು ಸರಿಯಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಎಲ್ಲ ಅವತಾರಗಳು ಎಲ್ಲ ಸಾಕ್ಷಾತ್ಕಾರಗಳು ಸತ್ಯವಾಗಿವೆ ಎಂಬುದನ್ನು ಈ ವೇದಿಕೆ ಮೂಲಕ ಸ್ಪಷ್ಟಪಡಿಸುತ್ತೇವೆ. ಇಲ್ಲಿ ನಿರ್ಮಾಣಗೊಂಡಿರುವ 36 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ನೋಡಿದಾಗ ಸಾಕ್ಷಾತ್ ರೇಣುಕರು ಇಲ್ಲಿದ್ದಾರೆ ಎಂಬ ಭಾವ ಮೂಡುತ್ತದೆ. ಜನರ ಮನದಲ್ಲಿ ಆಧ್ಯಾತ್ಮದ ಬೀಜ ಬಿತ್ತಬೇಕು. ಪಂಚಪೀಠಗಳ ಆಶೀರ್ವಾದದಿಂದ ಈ ಕ್ಷೇತ್ರ ಆಧ್ಯಾತ್ಮಿಕ ಕೇಂದ್ರವಾಗಿ ನೆಮ್ಮದಿ ನೀಡುವ ತಾಣವಾಗಬೇಕು. ಕ್ಷೇತ್ರವು ಜನರ ಕಷ್ಟಗಳು ದೂರ ಮಾಡುವ ಸ್ಥಳವಾಗಿ ಬೆಳೆಯುತ್ತಿದೆ. ಇದರ ಹಿಂದೆ ರೇವಣಸಿದ್ಧೇಶ್ವರ ಶಿವಾಚಾರ್ಯರ ಬೆವರ ಹನಿ ಇದೆ, ತಪಸ್ಸಿನ ಶಕ್ತಿ ಇದೆ. ನಿಷ್ಕಾಮ ಸಂಕಲ್ಪದಿಂದ ಕ್ಷೇತ್ರವನ್ನು ಬೆಳೆಸಿದ್ದಾರೆ. ಈ ಕ್ಷೇತ್ರ ಇನ್ನೂ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.
ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿದರು. ಮಣಕೂರು ಮಲ್ಲಿಕಾರ್ಜುನ ಶಿವಾಚಾರ್ಯರು, ಜಡೆಯ ಡಾ.ಮಹಾಂತ ಸ್ವಾಮಿಗಳು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಕಡೆನಂದಿಹಳ್ಳಿ ವೀರಭದ್ರ ಶಿವಾಚಾರ್ಯರು ಉಪಸ್ಥಿತರಿದ್ದರು.ಅಗಡಿ ಅಶೋಕ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ ಗಣ್ಯರಿಗೆ ಸೇವಾರ್ಥಿಗಳಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು. ತಡಸನಹಳ್ಳಿ ಶ್ರೀ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆ ಹಾಗೂ ಶಾಂತಿನಿಕೇತನ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಆರಂಭದಲ್ಲಿ ರೋಣದ ರೇಣುಕಯ್ಯ ಶಾಸ್ತ್ರಿಗಳಿಂದ ಶ್ರೀ ಜಗದ್ಗುರು ರೇಣುಕ ಭಗವತ್ಪಾದರ ಪುರಾಣ ಪ್ರವಚನ ಜರುಗಿತು.- - - -5ಕೆಎಸ್.ಕೆಪಿ1:
ಧರ್ಮಸಭೆಯಲ್ಲಿ ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿದರು.