ಸಾರಾಂಶ
ಶಿಕ್ಷಕ ಭೌತಿಕವಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶ್ರಮಿಸುತ್ತಾನೆ. ಆತನ ಸೇವಾ ಕೈಂಕರ್ಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಸ್ಮರಣೆಯಲ್ಲಿಟ್ಟುಕೊಳ್ಳಬೇಕು.
ಬಳ್ಳಾರಿ: ಇಲ್ಲಿನ ಪಾರ್ವತಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1992- 93ನೇ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಾನ್ನಿಧ್ಯ ವಹಿಸಿ ಮಾತನಾಡಿದ ಎಮ್ಮಿಗನೂರಿನ ವಾಮದೇವ ಶಿವಾಚಾರ್ಯ ಮಹಾಸ್ವಾಮಿ, ಅಕ್ಷರ ದೀವಿಗೆ ಹಚ್ಚುವ ಗುರುಗಳನ್ನು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನಿಗೆ ಹೋಲಿಸಲಾಗುತ್ತದೆ. ಶಿಕ್ಷಕ ಭೌತಿಕವಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶ್ರಮಿಸುತ್ತಾನೆ. ಆತನ ಸೇವಾ ಕೈಂಕರ್ಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಸ್ಮರಣೆಯಲ್ಲಿಟ್ಟುಕೊಳ್ಳಬೇಕು ಎಂದರು.ಪ್ರತಿಯೊಬ್ಬರಿಗೂ ಬಾಲ್ಯವೂ ಅತ್ಯಂತ ಸ್ಮರಣೀಯವಾಗಿರುತ್ತದೆ. ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಂತೂ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಈ ಹಿಂದೆ ಶಿಕ್ಷಣ ಕ್ಷೇತ್ರವನ್ನು ಸೇವೆಯೆಂದೇ ಪರಿಗಣಿಸಿ, ವಿದ್ಯಾರ್ಥಿಗಳ ಬದುಕು ರೂಪಿಸಲಾಗುತ್ತಿತ್ತು. ಆದರೆ, ಇದೀಗ ಶಿಕ್ಷಣ ಖಾಸಗೀಕರಣಗೊಂಡ ಬಳಿಕ ವ್ಯಾಪಾರ ದೃಷ್ಟಿ ಬೆಳೆದಿದೆ ಎಂದರು.
ಶಾಲೆಯ ಮುಖ್ಯಗುರು ಬಸಮ್ಮ ಬಿರಾದಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಳೆಯ ವಿದ್ಯಾರ್ಥಿ ಕೆ. ಲಿಂಗಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಮಲ್ಲಿಕಾರ್ಜುನ ಗುರುಗಳನ್ನು ಪರಿಚಯಿಸಿದರು. ನಿವೃತ್ತ ಶಿಕ್ಷಕರಾದ ಅನಂತಾಚಾರ್, ಬಸವರಾಜ್, ಹನುಮಂತಯ್ಯಶೆಟ್ಟಿ, ಸಿದ್ಧಲಿಂಗಯ್ಯ, ಶಾಂತಮೂರ್ತಿ, ಗೀತಾ, ಪಂಪಾಪತಿ ಹಾಗೂ ಸತ್ಯವತಿ ಅವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿದರು.ಹಳೆಯ ವಿದ್ಯಾರ್ಥಿಗಳಾದ ವೆಂಕಟೇಶ್, ಶಾಂತಕುಮಾರ್, ವಿಜಯಕುಮಾರ್, ಗಿರೀಶ್, ರಾಜೇಶ್, ದುರ್ಗಾಮೋಹನ್, ಸುಶೀಲಾ, ನೀಲಗಂಗಾ, ಸುಭದ್ರಾ, ಜ್ಯೋತಿ, ಅರುಣಾ, ಗೀತಾ ಸೇರಿದಂತೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಜಾನಪದ ಕಲಾವಿದ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಯಲ್ಲನಗೌಡ ಶಂಕರಬಂಡೆ ಅವರು ವಿವಿಧ ಕನ್ನಡಗೀತೆಗಳ ಮೂಲಕ ಮನರಂಜಿಸಿದರು. ಹಳೆಯ ವಿದ್ಯಾರ್ಥಿಗಳಾದ ಸುಶೀಲಾ ಹಾಗೂ ವಿನೋದ್ ಕಾರ್ಯಕ್ರಮ ನಿರ್ವಹಿಸಿದರು.