ಪಿ.ಎಸ್‌. ಪಾಟೀಲ

ರೋಣ: ಸ್ವಚ್ಛ ಹಾಗೂ ಸುಂದರ ಪಟ್ಟಣಕ್ಕಾಗಿ ಪ್ರತಿ ತಿಂಗಳು ಸರ್ಕಾರ ಮತ್ತು ಸ್ಥಳೀಯ ಪುರಸಭೆ ಲಕ್ಷಾಂತರ ಅನುದಾನ ವ್ಯಯ ಮಾಡುತ್ತಿದೆ. ಆದರೆ ಇಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಎಲ್ಲೆಂದರಲ್ಲಿ‌ ಕಸದ ರಾಶಿ ಬಿದ್ದಿದ್ದು, ಇಲ್ಲಿನ ಬಹುತೇಕ ಸಣ್ಣ ಮತ್ತು ದೊಡ್ಡ ಚರಂಡಿಗಳು ತ್ಯಾಜ್ಯ ವಿಲೇವಾರಿ ತೊಟ್ಟಿಗಳಾಗಿವೆ.

ಮನೆ ಮತ್ತು ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ ನಿತ್ಯ 6 ಕಸ ಸಂಗ್ರಹ ವಾಹನಗಳು ಪಟ್ಟಣದಾದ್ಯಂತ ಸಂಚರಿಸುತ್ತವೆ. ಅಲ್ಲಲ್ಲಿ ಬಿದ್ದಿರುವ ಕಸದ ರಾಶಿ ತೆರವಿಗೆ ಮತ್ತು ಚರಂಡಿಗಳ ಹೂಳು ತೆರವಿಗೆ 3 ಟ್ರ್ಯಾಕ್ಟರ್, 1 ಜೆಸಿಬಿ 19 ಸ್ವಚ್ಛತಾ ಸಿಬ್ಬಂದಿ, ಒಬ್ಬ ಆರೋಗ್ಯ ನಿರೀಕ್ಷಕರು, ಒಬ್ಬ ಮುಖ್ಯಾಧಿಕಾರಿ, 11 ನೈರ್ಮಲ್ಯ ಕಾರ್ಯಕರ್ತರು ನಿತ್ಯ ಕಾರ್ಯ ನಿರ್ವಹಿಸುತ್ತಾರೆ. ಆದರೂ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಚರಂಡಿಗಳು ತ್ಯಾಜ್ಯದಿಂದ ತುಂಬಿವೆ.

ಬಹುತೇಕ ತ್ಯಾಜ್ಯ ವಸ್ತುಗಳನ್ನು ಸಾರ್ವಜನಿಕರು ಚರಂಡಿಗೆ ಎಸೆಯುತ್ತಾರೆ. ಇದರಿಂದ ಚರಂಡಿಯಲ್ಲಿ ನೀರು ಹರಿಯದೆ ನಿಂತಲ್ಲೆ ನಿಲ್ಲುತ್ತಿದೆ. ಸೊಳ್ಳೆಗಳ ಕಾಟ, ಗಬ್ಬು ವಾಸನೆ ವಿಪರೀತವಾಗಿದೆ. ಚರಂಡಿಗಳಿಗೆಯೇ ಜನತೆ ತ್ಯಾಜ್ಯ ಯಾಕೆ ಎಸೆಯುತ್ತಾರೆ? ಜನರಲ್ಲಿ ಸ್ವಚ್ಛತಾ ಕುರಿತು ಜಾಗೃತಿ ಕೊರತೆಯೇ? ಪುರಸಭೆ ಉದಾಸೀನವೋ ಎಂಬುದು ಯಕ್ಷಪ್ರಶ್ನೆಯಾಗಿದೆ.

ಕಾಟಾಚಾರಕ್ಕೆ ವಾಹನ ಓಡಾಟ: ಮನೆಗಳಲ್ಲಿನ ಹಸಿ ಕಸ, ಒಣ ಕಸ ಮತ್ತು ಅಂಗಡಿ, ಹೋಟೆಲ್‌ಗಳಲ್ಲಿನ ಕಸ ಸಂಗ್ರಹಕ್ಕೆ 6 ವಾಹನ ವ್ಯವಸ್ಥೆ ಮಾಡಲಾಗಿದೆ. ಆದರೆ ವಾಸ್ತವವಾಗಿ ವಾಹನಗಳು ನಿತ್ಯ ಮನೆ ಮನೆಗೆ, ಅಂಗಡಿಗಳಿಗೆ ತೆರಳದಿರುವುದರಿಂದ ಮನೆ ಮತ್ತು ಅಂಗಡಿಕಾರರು ರಸ್ತೆ ಮತ್ತು ಚರಂಡಿಗೆ ರಾಶಿ ರಾಶಿ ಕಸ ತಂದು ಸುರಿಯುತ್ತಾರೆ. ಇದರಿಂದ ಗಟಾರಗಳು ತ್ಯಾಜ್ಯದಿಂದ ತುಂಬಿವೆ. ಕಸ ಸಂಗ್ರಹ ವಾಹನಗಳು ಕೆಲವೇ ಕೆಲ ಎಗ್ ರೈಸ್ ಅಂಗಡಿ, ಹೋಟೆಲ್‌ಗಳಿಗೆ ಸಿಮೀತವಾಗಿವೆ ಎಂಬ ದೂರುಗಳು ಜನರಿಂದ ಕೇಳಿಬಂದಿವೆ.


ತ್ಯಾಜ್ಯ ಚರಂಡಿಗೆ: ಪಟ್ಟಣದ ಬಸ್ ನಿಲ್ದಾಣ ರಸ್ತೆಯ ಕೆರೆ ಪಕ್ಕದುದ್ದಕ್ಕೂ ಮತ್ತು ಅಲ್ಲಲ್ಲಿ ಇರುವ ಚಿಕನ್, ಮಟನ್ ಮಾರಾಟ ಅಂಗಡಿಕಾರರು ನಿರುಪಯುಕ್ತ ತ್ಯಾಜ್ಯಗಳನ್ನು ಒಂದೆಡೆ ಸಂಗ್ರಹಿಸಿ ಪುರಸಭೆ ನಿಗದಿಪಡಿಸಿದ ಸ್ಥಳದಲ್ಲಿ ವಿಲೇವಾರಿ ಮಾಡದೇ ಚರಂಡಿಗೆ ಎಸೆಯುತ್ತಿದ್ದಾರೆ. ಪರಿಣಾಮವಾಗಿ ಚರಂಡಿಗಳು ಚಿಕನ್, ಮಟನ್ ತ್ಯಾಜ್ಯದಿಂದ ತುಂಬಿವೆ. ಚರಂಡಿಗಳಿಂದ ಗಬ್ಬು ವಾಸನೆ ಬರುತ್ತಿದ್ದು, ಉಳಿದ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು, ಆರೋಗ್ಯ ವಿಭಾಗದ ಸಿಬ್ಬಂದಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು.

ಪಟ್ಟಣದಲ್ಲಿನ ಬಹುತೇಕ ಚರಂಡಿಗಳು ಘನತ್ಯಾಜ್ಯದಿಂದ ತುಂಬಿದ್ದು, ನೀರು ಹರಿಯದೇ ನಿಂತಲ್ಲೆ ನಿಲ್ಲುತ್ತಿದೆ. ಶಿವಾನಂದ ನಗರ, ಶಿವಪೇಟಿ ಬಡಾವಣೆ, ಶ್ರೀನಗರ, ಕಲ್ಯಾಣ ನಗರ, ತಳವಾರ ಓಣಿ, ಕುರಬಗಲ್ಲಿ ಬಡಾವಣೆ, ಹಕಾರಿಯವರ ಓಣಿ, ಜಗ್ಗಲರವರ ಓಣಿ ಸೇರಿದಂತೆ ಬಹುಕೇತ ಕಡೆ ಚರಂಡಿಗಳು ಘನತ್ಯಾಜ್ಯದಿಂದ ತುಂಬಿವೆ. ಒಮ್ಮೆಯೂ ಗಟಾರ್ ಸ್ವಚ್ಛತೆಗೆ ಮುಂದಾಗದ ಪುರಸಭೆ ವಿರುದ್ಧ ಹರಿಹಾಯ್ದ ಜನ ತಾವೇ ಸ್ವತಃ ಸಲಿಕೆ, ಪುಟ್ಟಿ ಹಿಡಿದು ಗಟಾರ್‌ ಸ್ವಚ್ಛ ಮಾಡಿಕೊಳ್ಳುತ್ತಿದ್ದಾರೆ ಎಂಬುದು ವಿಪರ್ಯಾಸ ಸಂಗತಿ.

ಕೂಡಲೇ ಕ್ರಮ: ಚರಂಡಿಗಳಿಗೆ ಕಸ ಎಸೆಯದಂತೆ, ಪುರಸಭೆ ಕಸದ ವಾಹನದಲ್ಲಿಯೇ ಕಸ ಹಾಕುವಂತೆ ಜನಜಾಗೃತಿ ಮೂಡಿಸುತ್ತಾ ಬರಲಾಗಿದೆ. ಮನೆ ಮನೆಗೆ ತೆರಳಿ ಹಸಿಕಸ ಮತ್ತು ಒಣ ಕಸ ಸಂಗ್ರಹಿಸಲಾಗುತ್ತಿದೆ. ಆದರೂ ಜನತೆ ಚರಂಡಿಗಳಿಗೆ ಕಸ ಎಸೆಯುತ್ತಾರೆ. ಈ ಬಗ್ಗೆ ಜನರಲ್ಲಿ ಇನ್ನೂ ಹೆಚ್ವಿನ ಜಾಗೃತಿ ಮೂಡಿಸಲಾಗುವುದು. ಚರಂಡಿಗಳಲ್ಲಿನ ಘನತ್ಯಾಜ್ಯ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ರಾಮ ಎಸ್. ಹೊಸಮನಿ ತಿಳಿಸಿದರು.

ಜಾಗೃತಿ ಮುಖ್ಯ: ಚರಂಡಿ ನಿರ್ಮಿಸಿದಾಗಿನಿಂದ ಒಮ್ಮೆಯೂ ಸ್ವಚ್ಛ ಮಾಡಿಲ್ಲ. ನಮ್ಮ ಮನೆಯ ಮುಂದಿನ ಗಟಾರನ್ನು ನಾವೇ ಸ್ವಚ್ಛ ಮಾಡಿಕೊಳ್ಳುತ್ತೇವೆ. ನಾವಷ್ಟೆ ಸ್ವಚ್ಛ ಮಾಡಿದರೇ ಸಾಲದು. ಗಟಾರಕ್ಕೆ ಗಲೀಜು ನೀರು ಹೊರತು ಬೇರೆ ವಸ್ತು ಎಸೆಯದಂತೆ ಜಾಗೃತಿ ಮುಖ್ಯವಾಗಿದೆ. ಈ ಕುರಿತು ಪುರಸಭೆ ಜಾಗೃತಿ ಮೂಡಿಸಬೇಕಿದೆ ಎಂದು ಪಟ್ಟಣದ ನಿವಾಸಿ ಮಹೇಶ ಹಿರೇಮಠ ತಿಳಿಸಿದರು.