ಮನುಷ್ಯನಿಗೆ ಎಷ್ಟೇ ಕಷ್ಟವಾದರೂ ಸಹ ಧರ್ಮವನ್ನು ಮರೆಯಬಾರದು. ಧರ್ಮದಲ್ಲಿ ಹಲವು ವಿಭಿನ್ನ ತತ್ವಗಳು, ಸಾಂಪ್ರದಾಯಗಳು ಮತ್ತು ಪದ್ಧತಿಗಳನ್ನು ಮರೆಯದೆ ಭಗವಂತನನ್ನು ಆರಾಧಿಸುವ ಕಾರ್ಯದಲ್ಲಿ ತೊಡಗಿ ಕೊಂಡಾಗ ಮಾತ್ರ ಕಷ್ಟದ ದಿನಗಳು ನಂತರ ದಿನಗಳಲ್ಲಿ ಕೊನೆಗೊಳ್ಳುತ್ತವೆ.

ಕನ್ನಡಪ್ರಭ ವಾರ್ತೆ ಮದ್ದೂರು

ಅತ್ಯಂತ ಪುರಾತನವಾದ ಸನಾತನ ಧರ್ಮದಲ್ಲಿ ವೈಷ್ಣವ ಸಂಸ್ಕೃತಿಗೆ ವಿಶೇಷ ಮಹತ್ವವಿದೆ ಎಂದು ಮೇಲುಕೋಟೆ ಯದುಗಿರಿ ಯತಿರಾಜ ಮಠದ 41ನೇ ಪೀಠಾಧಿಪತಿ ಶ್ರೀನಾರಾಯಣ ರಾಮಾನುಜ ಜೀಯರ್ ಶ್ರೀಗಳು ಬುಧವಾರ ಹೇಳಿದರು.

ಪಟ್ಟಣದ ಶಿವಪುರದ ನವಿಲುದಾಮ ಲೇಔಟ್ ನಲ್ಲಿರುವ ಹೋಟೆಲ್ ಉದ್ಯಮಿ ಎಂ.ಎಸ್.ಜಗನ್ನಾಥ್ ಮತ್ತು ಸುಗುಣ ದಂಪತಿ ನಿವಾಸದಲ್ಲಿ ಪಾದಪೂಜೆ ನಂತರ ವೈಷ್ಣವ ಕುಲಬಾಂಧವರಿಗೆ ಆಶೀರ್ವಚನ ನೀಡಿದರು.

ಸನಾತನ ಧರ್ಮದಲ್ಲಿ ಜನನದಿಂದ ಮರಣದವರೆಗೆ ಓರ್ವ ವ್ಯಕ್ತಿ ಜಾತಿ ಮತ ಭೇದಭಾವವಿಲ್ಲದೆ ಯಾವೆಲ್ಲಾ ಕರ್ತವ್ಯಗಳನ್ನು ಪೂರ್ಣಗೊಳಿಸಬೇಕು, ಜೀವನ ಹೇಗೆ ನಡೆಸಬೇಕು ಎನ್ನುವುದನ್ನು ಉಲ್ಲೇಖಿಸಲಾಗಿದೆ ಎಂದರು.

ಭಗವದ್ಗೀತೆ ಮತ್ತು ಪುರಾಣಗಳು ಸನಾತನ ಧರ್ಮದ ಮೂಲ ಆಧಾರಗಳಾಗಿವೆ. ನಮ್ಮ ಜನ್ಮದಲ್ಲಿ ಮಾಡಿದ ಕರ್ಮಗಳನ್ನು ಮುಂದಿನ ಜನ್ಮದಲ್ಲಿ ನಿರ್ಧರಿಸುತ್ತದೆ ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿದೆ ಎಂದು ಅಭಿಪ್ರಾಯಪಟ್ಟರು.

ಮನುಷ್ಯನಿಗೆ ಎಷ್ಟೇ ಕಷ್ಟವಾದರೂ ಸಹ ಧರ್ಮವನ್ನು ಮರೆಯಬಾರದು. ಧರ್ಮದಲ್ಲಿ ಹಲವು ವಿಭಿನ್ನ ತತ್ವಗಳು, ಸಾಂಪ್ರದಾಯಗಳು ಮತ್ತು ಪದ್ಧತಿಗಳನ್ನು ಮರೆಯದೆ ಭಗವಂತನನ್ನು ಆರಾಧಿಸುವ ಕಾರ್ಯದಲ್ಲಿ ತೊಡಗಿ ಕೊಂಡಾಗ ಮಾತ್ರ ಕಷ್ಟದ ದಿನಗಳು ನಂತರ ದಿನಗಳಲ್ಲಿ ಕೊನೆಗೊಳ್ಳುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಕೀರ್ತಿ ಶೇಷಾರಾದ ಡಾ.ಬಿ.ವಿ.ಸಂಪತ್ ಕುಮಾರ್ ಪುತ್ರ ಎಸ್.ಯದು ನಂದನ್ ಶ್ರೀ ನರಸಿಂಹಸ್ವಾಮಿ ದೇವಾಲಯದ ಬಳಿ ಇರುವ ನಿವೇಶನವನ್ನು ವೈಷ್ಣವ ಮಠ ನಿರ್ಮಾಣಕ್ಕೆ ದಾನವಾಗಿ ನೀಡುವುದಾಗಿ ಆಶ್ವಾಸನೆ ನೀಡಿದರು.

ವೇದಿಕೆ ಕಾರ್ಯ ಕಾರ್ಯಕ್ರಮಕ್ಕೆ ಮುನ್ನ ಶ್ರೀ ನಾರಾಯಣ ರಾಮಾನುಜ ಜೀಯರ್ ಶ್ರೀಗಳು ಪುರಾಣಪ್ರಸಿದ್ಧ ಶ್ರೀ ಉಗ್ರ ನರಸಿಂಹ ಸ್ವಾಮಿ , ಶ್ರೀ ವರದರಾಜ ಸ್ವಾಮಿ, ಪಟ್ಟಾಭಿರಾಮ ಹಾಗೂ ಶ್ರೀ ರಾಘವೇಂದ್ರ ಸ್ವಾಮಿ ದೇಗುಲಗಳಿಗೆ ಭೇಟಿ ನೀಡಿ ದರ್ಶನ ಪಡೆದ ವಿಶೇಷ ಪೂಜೆ ಸಲ್ಲಿಸಿದರು.

ತಾಲೂಕ ಕಚೇರಿ ಗ್ರೇಟ್ ಟು ತಹಸೀಲ್ದಾರ್ ಸೋಮಶೇಖರ್, ಶಿರಸ್ತೇದಾರ್ ರಾಘವೇಂದ್ರ, ಹೋಟೆಲ್ ಉದ್ಯಮಿ ಎಂ. ಜೆ. ಅನಿಲ್ ಕುಮಾರ್ ಸೇರಿದಂತೆ ವೈಷ್ಣವ ಜನಾಂಗದ ಮುಖಂಡರು, ಹಾಗೂ ದೇವಾಲಯದ ಅರ್ಚಕರುಗಳು ಪಾಲ್ಗೊಂಡಿದ್ದರು.