ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ. 30 ಪುಸ್ತಕ ಪೂರೈಕೆ

| Published : May 27 2024, 01:10 AM IST

ಸಾರಾಂಶ

ಶಿರಸಿ ಶೈಕ್ಷಣಿಕ ಜಿಲ್ಲೆಗೆ ಒಟ್ಟು ೧ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ೬೫೧೮೨೫ ಉಚಿತ ಪುಸ್ತಕಕ್ಕಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಇದುವರೆಗೆ ೧.೨೫ ಲಕ್ಷ ಪುಸ್ತಕಗಳು ಮಾತ್ರ ಪೂರೈಕೆಯಾಗಿವೆ.

ಶಿರಸಿ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆರಂಭಕ್ಕೆ ಇನ್ನು ಕೆಲವೇ ದಿನಗಳು ಉಳಿದಿದ್ದರೂ ಶಿರಸಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳ ಪುಸ್ತಕ ಬೇಡಿಕೆ ಶೇ. ೩೦ರಷ್ಟು ಮಾತ್ರ ಪೂರೈಕೆಯಾಗಿದ್ದು, ಪುಸ್ತಕಗಳ ಪೂರೈಕೆ ವಿಳಂಬ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಸರ್ಕಾರದ ಒತ್ತಡಕ್ಕೆ ಶಿಕ್ಷಣ ಇಲಾಖೆಯು ಬಂದಷ್ಟು ಪುಸ್ತಕಗಳನ್ನು ಶಾಲಾ ಆರಂಭದ ದಿನ ವಿತರಣೆ ಮಾಡಲು ನಿರ್ಧರಿಸಿದೆ.

ಶಿರಸಿ ಶೈಕ್ಷಣಿಕ ಜಿಲ್ಲೆಯು ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಮತ್ತು ಹಳಿಯಾಳ ತಾಲೂಕುಗಳನ್ನು ಒಳಗೊಂಡಿದೆ. ಜಿಲ್ಲೆಯ ವ್ಯಾಪ್ತಿ ದೊಡ್ಡದಿರುವ ಕಾರಣ, ಪಠ್ಯ ಪುಸ್ತಕವನ್ನು ಶಾಲೆಗೆ ಪೂರೈಕೆ ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಈ ಕಾರಣದಿಂದ ಪೂರೈಕೆಯಾದ ಪುಸ್ತಕಗಳನ್ನು ಎಲ್ಲ ಶಾಲೆಗಳಿಗೆ ತಲುಪಿಸಿ, ಶಾಲಾ ಆರಂಭದ ದಿನ ಮಕ್ಕಳಿಗೆ ನಿರಾಸೆಯಾಗದಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ.

ಶಿರಸಿ ಶೈಕ್ಷಣಿಕ ಜಿಲ್ಲೆಗೆ ಒಟ್ಟು ೧ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ೬೫೧೮೨೫ ಉಚಿತ ಪುಸ್ತಕಕ್ಕಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಇದುವರೆಗೆ ೧.೨೫ ಲಕ್ಷ ಪುಸ್ತಕಗಳು ಮಾತ್ರ ಪೂರೈಕೆಯಾಗಿವೆ. ಶೇ. ೭೦ರಷ್ಟು ಪುಸ್ತಕಗಳು ಇನ್ನು ಮೇಲಷ್ಟೇ ಬರಬೇಕಿದೆ. ಬಂದ ಪುಸ್ತಕಗಳನ್ನು ಶಿರಸಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಶಿಕ್ಷಣ ಇಲಾಖೆ, ಆಯಾ ತಾಲೂಕಿನ ಬೇಡಿಕೆಗೆ ಅನುಗುಣವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಕಳಿಸಿಕೊಡುತ್ತದೆ. ಆ ಬಳಿಕ ಅಲ್ಲಿಂದ ಕ್ಲಸ್ಟರ್ ಕಚೇರಿಗೆ ಪುಸ್ತಕ ಹಂಚಿಕೆ ಆಗಲಿದ್ದು, ಅಲ್ಲಿಂದ ಶಾಲೆಗಳ ಮುಖ್ಯ ಶಿಕ್ಷಕರು ಪುಸ್ತಕಗಳನ್ನು ಒಯ್ಯಬೇಕಿದೆ.

ಪುಸಕ್ತ ಸಾಗಾಟಕ್ಕೆ ಹಣದ ಕೊರತೆ?: ಉಪನಿರ್ದೇಶಕರ ಕಚೇರಿಯಿಂದ ಕ್ಲಸ್ಟರ್ ಕಚೇರಿಗಳವರೆಗೆ ಸಾಗಾಟ ವೆಚ್ಚವಾಗಿ ಪ್ರತಿ ಪುಸ್ತಕಕ್ಕೆ ₹೧.೫ ನೀಡಲಾಗುತ್ತಿತ್ತು. ಆದರೆ, ಈ ವರ್ಷ ಪುಸ್ತಕಗಳ ಪೂರೈಕೆ ಹಂತ- ಹಂತವಾಗಿ ನಡೆದಿರುವುದರಿಂದ ಸಾಗಾಟ ವೆಚ್ಚವೂ ಅನಗತ್ಯವಾಗಿ ಜಾಸ್ತಿ ಆಗಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕದ ಬೇಡಿಕೆಗೆ ಅನುಗುಣವಾಗಿ ತಮ್ಮ ವಾಹನದಲ್ಲಿ ತೆಗೆದುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹಣ ತುಂಬದ ಖಾಸಗಿ ಶಾಲೆಗಳು: ಶಿರಸಿ ಶೈಕ್ಷಣಿಕ ಜಿಲ್ಲೆಯ ಖಾಸಗಿ ಮತ್ತು ಅನುದಾನರಹಿತ ಶಾಲೆಗಳಲ್ಲಿ ೫೬ ಶಾಲೆಗಳು ಇನ್ನೂ ಪಠ್ಯಪುಸ್ತಕಕ್ಕಾಗಿ ಶಿಕ್ಷಣ ಇಲಾಖೆಗೆ ಪೂರ್ಣ ಹಣವನ್ನೇ ತುಂಬಿಲ್ಲ. ಶಾಲಾ ಆರಂಭಕ್ಕೆ ಇನ್ನು ಕೆಲವೇ ದಿನಗಳಿದ್ದು, ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ತಡವಾಗುವುದು ನಿಶ್ಚಿತವಾಗಿವೆ. ಇದುವರೆಗೆ ಕೇವಲ ೧೯ ಶಾಲೆಗಳು ಮಾತ್ರ ಪುಸ್ತಕಕ್ಕಾಗಿ ಪೂರ್ಣ ಹಣ ತುಂಬಿವೆ. ಖಾಸಗಿ ಶಾಲೆಗಳಿಗೂ ಈಗ ಶೇ. ೩೦ರಷ್ಟು ಪುಸ್ತಕಗಳು ಮಾತ್ರ ಬಂದಿವೆ.

ಇನ್ನೂ ಬಾರದ ಸಮವಸ್ತ್ರ: ಸರ್ಕಾರಿ ಶಾಲೆಗಳಿಗೆ ಪೂರೈಕೆಯಾಗಬೇಕಾಗಿದ್ದ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಸಮವಸ್ತ್ರ ಇದುವರೆಗೂ ಬಂದಿಲ್ಲ. ಶಿರಸಿ ಶೈಕ್ಷಣಿಕ ಜಿಲ್ಲೆಗೆ ಒಟ್ಟು ೩೬೨೦೦ ವಿದ್ಯಾರ್ಥಿಗಳು ಹಾಗೂ ೩೫೧೦೦ ವಿದ್ಯಾರ್ಥಿನಿಯರಿಗೆ ೭೨ ಸಾವಿರ ಸೆಟ್ ಸಮವಸ್ತ್ರ ಪೂರೈಕೆಯಾಗಬೇಕಿದೆ. ಖಾಸಗಿ ಶಾಲೆಗಳು ತಾವೇ ಸಮವಸ್ತ್ರ ವಿತರಿಸುವ ಕಾರಣ ಅವರಿಂದ ಬೇಡಿಕೆ ಸಲ್ಲಿಕೆ ಆಗಿಲ್ಲ. ಕಳೆದ ವರ್ಷ ಶಾಲಾ ಆರಂಭದ ದಿನದ ಮೊದಲೇ ಸಮವಸ್ತ್ರ ಪೂರೈಕೆಯಾಗಿತ್ತು. ಲೋಕಸಭಾ ಚುನಾವಣೆ ಹಾಗೂ ಇನ್ನಿತರ ಕಾರಣಗಳಿಂದ ವಿಳಂಬವಾಗಿರಬಹುದು ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದು, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ೪,೫೯೬ ಶಾಲಾ ಕಟ್ಟಡಗಳಿದ್ದು, ಅದರಲ್ಲಿ ೨೫೩ ತುರ್ತು ದುರಸ್ತಿಯಾಗಬೇಕಿದೆ. ಸ್ಥಳೀಯರ ಶಾಸಕರು ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಪ್ರತಿ ತಾಲೂಕಿನ ಶಾಲೆಗಳಿಗೆ ತುರ್ತು ದುರಸ್ತಿಗೆ ₹೪೫ ಲಕ್ಷ ಅನುದಾನ ನೀಡಿದ್ದಾರೆ. ಸಮವಸ್ತ್ರ ಬೇಡಿಕೆ ಸಲ್ಲಿಸಲಾಗಿದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಪಿ. ಬಸವರಾಜ ತಿಳಿಸಿದರು.ಪೂರೈಕೆ ತಡ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ೧ರಿಂದ ೧೦ನೇ ತರಗತಿಯವರೆಗೆ ೩೬೦ ಶೀರ್ಷಿಕೆ ಇದ್ದು, ಅದರಲ್ಲಿ ಇನ್ನೂ ೩೩೬ ಶೀರ್ಷಿಕೆ ಬರಬೇಕಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಪುಸ್ತಕ ಪೂರೈಕೆ ತಡವಾಗಿದೆ. ಹಂತ- ಹಂತವಾಗಿ ಪೂರೈಕೆಯಾಗುತ್ತದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಪಿ. ಬಸವರಾಜ ತಿಳಿಸಿದರು.ಬೇಡಿಕೆಯ ಅರ್ಧಕ್ಕಿಂತ ಕಡಿಮೆ ಉಚಿತ ಪುಸ್ತಕ ಪೂರೈಕೆ

ಕಾರವಾರ: ಕೆಲವೇ ದಿನಗಳಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳು ಆರಂಭವಾಗಲಿವೆ. ಆದರೆ ಉಚಿತ ಪುಸ್ತಕಗಳು ಬೇಡಿಕೆಯ ಅರ್ಧಕ್ಕಿಂದ ಕಡಿಮೆ ಪೂರೈಕೆಯಾಗಿವೆ. ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆ ಆರಂಭಕ್ಕೂ ಮೊದಲೇ ಬೇಡಿಕೆಯಷ್ಟು ಪುಸ್ತಕ ಪೂರೈಸಬೇಕಿದೆ.ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಉಚಿತ ವಿತರಣೆಗೆ ೯,೧೩,೮೨೯ ಪುಸ್ತಕಕ್ಕೆ ಬೇಡಿಕೆ ಇದೆ. ಆದರೆ ೩,೮೮,೫೩೪ ಪೂರೈಕೆಯಾಗಿದೆ. ಅದೇ ರೀತಿ ಮಾರಾಟಕ್ಕಾಗಿ ಬೇಡಿಕೆಯ ೩,೬೮,೪೧೨ರಲ್ಲಿ ೧,೮೯,೧೧೪ ಪುಸ್ತಕ ಪೂರೈಕೆಯಾಗಿದೆ. ಅಂದರೆ ಉಚಿತ ವಿತರಣೆಯಲ್ಲಿ ಶೇ. ೪೨.೫೨ ಹಾಗೂ ಮಾರಾಟದ ಶೇ. ೫೧.೩೩ರಷ್ಟು ಮಾತ್ರ ಪೂರೈಕೆಯಾದಂತಾಗಿದೆ.ತಾಲೂಕಾವಾರು ಪೂರೈಕೆ:

ಉಚಿತ ವಿತರಣೆಗೆ ಅಂಕೋಲಾ ತಾಲೂಕಿಗೆ ೧,೪೭,೬೭೪ ಪುಸ್ತಕದಲ್ಲಿ ೬೪,೧೭೮, ಭಟ್ಕಳಕ್ಕೆ ೧,೯೪,೯೬೭ರಲ್ಲಿ ೭೪,೯೩೦, ಹೊನ್ನಾವರಕ್ಕೆ ೨,೨೪,೧೧೦ರಲ್ಲಿ ೯೫,೦೨೫, ಕಾರವಾರಕ್ಕೆ ೧,೧೩,೨೦೫ರಲ್ಲಿ ೫೬,೧೨೮, ಕುಮಟಾ ತಾಲೂಕಿಗೆ ೨,೩೩,೮೭೩ರಲ್ಲಿ ೯೮,೨೭೦ ಪುಸ್ತಕ ವಿತರಣೆಯಾಗಿದೆ.ಮಾರಾಟಕ್ಕಾಗಿ ಅಂಕೋಲಾ ತಾಲೂಕಿಗೆ ೩೫,೨೩೮ ಪುಸ್ತಕದಲ್ಲಿ ೧೮,೯೮೩, ಭಟ್ಕಳಕ್ಕೆ ೯೮,೫೬೦ರಲ್ಲಿ ೪೯,೭೦೯, ಹೊನ್ನಾವರಕ್ಕೆ ೫೮,೭೯೦ರಲ್ಲಿ ೨೯,೩೬೭, ಕಾರವಾರಕ್ಕೆ ೧,೦೭,೪೯೪ರಲ್ಲಿ ೫೬,೩೮೫, ಕುಮಟಾ ತಾಲೂಕಿಗೆ ೬೮,೩೩೦ರಲ್ಲಿ ೩೪,೬೭೦ರಷ್ಟು ಪುಸ್ತಕ ಬಂದಿದೆ.

ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ವಿತರಣೆಗಾಗಿ ನೀಡಲಾಗುವ ಪುಸ್ತಕಗಳಿಂದ ಸಾಕಷ್ಟು ಅನುಕೂಲವಾಗಲಿದೆ. ಪಾಲಕರಿಗೆ ಹಣ ನೀಡಿ ಪುಸ್ತಕ ಖರೀದಿಸುವ ಆರ್ಥಿಕ ಹೊರೆಯನ್ನು ತಗ್ಗಿಸಲಿದೆ. ಸಕಾಲಕ್ಕೆ ಉಚಿತ ಪುಸ್ತಕ ಬಾರದೇ ಇದ್ದರೆ ಹಣ ನೀಡಿ ಖರೀದಿಸುವ ಅನಿವಾರ್ಯತೆ ಎದುರಾಗುತ್ತದೆ. ಸ್ಥಳೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮುತುವರ್ಜಿವಹಿಸಿ ಸಕಾಲದಲ್ಲಿ ಪುಸ್ತಕ ಪೂರೈಕೆ ಆಗುವಂತೆ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡಿದರೆ ಪಾಲಕರಿಗೆ ಅನುಕೂಲವಾಗಲಿದೆ.