ಸಾರಾಂಶ
ಡಿಸೆಂಬರ್ ಆರಂಭದಲ್ಲಿಯೇ ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹಮಟ್ಟ ಬಹುತೇಕ ಕುಸಿದಿದೆ. ಈ ಸಾಲಿನ ಮಳೆಗಾಲದಲ್ಲಿ ಮಳೆಯ ಪ್ರಮಾಣ ಕ್ಷೀಣಗೊಂಡಿದ್ದು ಪ್ರಮುಖ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಡಿಸೆಂಬರ್ ಆರಂಭದಲ್ಲಿಯೇ ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹಮಟ್ಟ ಬಹುತೇಕ ಕುಸಿದಿದೆ. ಈ ಸಾಲಿನ ಮಳೆಗಾಲದಲ್ಲಿ ಮಳೆಯ ಪ್ರಮಾಣ ಕ್ಷೀಣಗೊಂಡಿದ್ದು ಪ್ರಮುಖ ಕಾರಣವಾಗಿದೆ.ಪ್ರಸಕ್ತ ಜಲಾಶಯದಲ್ಲಿ 2.79 ಟಿ ಎಂ ಸಿ ಪ್ರಮಾಣದ ಬಳಕೆ ಮಾಡಲಾಗುವ ನೀರಿನ ಸಂಗ್ರಹ ಕಾಣಬಹುದು. 2859 ಅಡಿಗಳಷ್ಟು ಗರಿಷ್ಠ ಸಂಗ್ರಹ ಮಟ್ಟ ಹೊಂದಿರುವ ಹಾರಂಗಿ ಜಲಾಶಯದಲ್ಲಿ ಇದೀಗ 25 ಅಡಿಗಳಷ್ಟು ನೀರು ಕುಸಿತ ಕಂಡು ಬಂದಿದೆ. ಈ ಬಾರಿ ಮಳೆಗಾಲದಲ್ಲಿ ಜಲಾಶಯಕ್ಕೆ ಒಟ್ಟು 25.96 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದ್ದು ಜಲಾಶಯದಿಂದ ನದಿಗೆ 17.5 ಟಿಎಂಸಿ ಪ್ರಮಾಣದ ನೀರನ್ನು ಹರಿಸಲಾಗಿದೆ. ಕಾಲುವೆ ಮೂಲಕ ಇದುವರೆಗೆ 7 ಟಿಎಂಸಿ ಪ್ರಮಾಣದ ನೀರು ಹರಿಸಲಾಗಿದೆ ಎಂದು ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಅವರು ತಿಳಿಸಿದ್ದಾರೆ.
ಕಳೆದ ವರ್ಷ ಹಾರಂಗಿ ಜಲಾಶಯಕ್ಕೆ 46 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿತ್ತು. ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಕೂಡ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದ್ದು ಬೇಸಿಗೆ ಅವಧಿಯಲ್ಲಿ ಈ ಭಾಗದ ಜನರು ಕುಡಿಯುವ ನೀರಿಗಾಗಿ ಪರಿತಪಿಸಬೇಕಾದ ಸ್ಥಿತಿ ಎದುರಾಗುವ ಸಂಭವ ಅಧಿಕವಾಗಿದೆ.ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತಾಪಿ ವರ್ಗ ಬೇಸಿಗೆ ಬೆಳೆ ಬೆಳೆಯಲು ಕೊಳವೆಬಾವಿ ನೀರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಲಿದೆ ಎನ್ನುವ ಭೀತಿ ಕಣಿವೆ ಹೆಬ್ಬಾಲೆ ಶಿರಂಗಾಲ ಗ್ರಾಮಗಳ ವ್ಯಾಪ್ತಿಯ ರೈತರದ್ದಾಗಿದೆ.
ಕಾವೇರಿ ನದಿ ದಂಡೆಯ ಪ್ರವಾಸಿ ಕೇಂದ್ರಗಳಾದ ದುಬಾರೆ, ಕಾವೇರಿ ನಿಸರ್ಗಧಾಮ ವ್ಯಾಪ್ತಿಯಲ್ಲಿ ಕೂಡ ಕಾವೇರಿ ನೀರಿನ ಹರಿವು ಬಹುತೇಕ ಕುಸಿತವಾಗಿರುವುದು ಗೋಚರಿಸಿದೆ.