ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ನಗರೀಕರಣ, ಅಭಿವೃದ್ಧಿ ಹೆಸರಿನಲ್ಲಿ ನೀರಿನ ಮೂಲ ಸೇರಿ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಬೆಂಗಳೂರಿನ ದಯಾನಂದಸಾಗರ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಫ್ರೊ.ರಾಮರಾಜು ಎಚ್ಚರಿಸಿದರು.ಮೇಲುಕೋಟೆಯಲ್ಲಿ ಬೆಂಗಳೂರು ದಯಾನಂದಸಾಗರ ಇಂಜಿನಿಯರಿಂಗ್ ಕಾಲೇಜಿನ ಸಮುದಾಯಸೇವಾ ಸಮಿತಿ, ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಇಕೋ ಕ್ಲಬ್, ಆದಿಚುಂಚನಗಿರಿ ಐಟಿಐ ಕಾಲೇಜು ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೀರು ಮತ್ತು ನೈರ್ಮಲ್ಯ, ಆರೋಗ್ಯ ಪರಿಸರ ರಕ್ಷಣೆ ಜಾಗ್ರತಿ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿದರು.
ಸಿಂಧು ನದಿಯಂತೆ ನಾಗರಿಕತೆಯ ಉಗಮದ ಸ್ಥಳಗಳಾದ ಬಹುತೇಕ ನದಿ ನೀರಿನ ಸ್ಥಳಗಳನ್ನುಇಂದು ಕಲುಷಿತಗೊಳಿಸಿ ನಾಶ ಮಾಡುತ್ತಿದ್ದೇವೆ. ನಾಗರಿಕತೆಯ ಆರಂಭದ ಕೇಂದ್ರಗಳಾದ ನೀರಿನ ಮೂಲಗಳಲ್ಲಿ ನೈರ್ಮಲ್ಯ ಕಾಪಾಡಬೇಕಾದದ್ದು ನಾಗರಿಕರಾದ ನಮ್ಮ ಜವಾಬ್ದಾರಿಯಾಗಿದೆ ಎಂದರು.ನಗರೀಕರಣದ ಹೆಸರಲ್ಲಿ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಈಗಲೇ ಎಚ್ಚೆತ್ತುಕೊಳ್ಳಬೇಕು. ಕಾಲೇಜು ವಿದ್ಯಾರ್ಥಿಗಳು ಸಮುದಾಯದಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರ ಮಾಡಬೇಕು. ಧಾರ್ಮಿಕ ಪ್ರವಾಸಿ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನಗಳು ನಿರಂತರವಾಗಿ ನಡೆಯಬೇಕು. ನಾಗರಿಕರು ಮತ್ತು ಭಕ್ತರಲ್ಲಿ ನೈರ್ಮಲ್ಯದ ಜಾಗ್ರತಿ ಮೂಡಬೇಕಿದೆ ಎಂದು ತಿಳಿಸಿದರು.
ರಾಮಾನುಜರ ಕರ್ಮಭೂಮಿಯಾದ ಮೇಲುಕೋಟೆಯ ಕಟ್ಟಡಗಳ ವಾಸ್ತುಶಿಲ್ಪಗಳು ಮತ್ತು ಸ್ಮಾರಕಗಳ ನಿರ್ಮಾಣಗಳು ಆಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನಕ್ಕೆ ಸವಾಲೆಸೆಯುತ್ತವೆ. ಹೀಗಾಗಿ ದಯಾನಂದಸಾಗರ ಕಾಲೇಜು ಸಿವಿಲ್ ಇಂಜಿನಿಯರಿಂಗ್ ಕಲಿಯುವ ವಿದ್ಯಾರ್ಥಿಗಳಿಗೆ ಸರ್ವೇಕ್ಯಾಂಪಗಳನ್ನು ಮೇಲುಕೋಟೆಯಲ್ಲೇ ಆಯೋಜಿಸುತ್ತಾ ಬಂದಿದೆ ಎಂದು ಹೇಳಿದರು.ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿದ್ದ ಪುರುಷೋತ್ತಮಾನಂದನಾಥಸ್ವಾಮೀಜಿ ಮಾತನಾಡಿ, ಮೇಲುಕೋಟೆ ರಾಮಾನುಜಾಚಾರ್ಯರ ತಪೋಭೂಮಿ, ಆದಿಚುಂಚನಗಿರಿಯ ಮೂಲ ಮಠವಿದ್ಧ ಪುಣ್ಯಕ್ಷೇತ್ರವಾಗಿದೆ. ತಮಿಳುನಾಡಿನ ಕ್ರಿಮಿಕಂಠಚೋಳನ ಭಾದೆ ತಾಳಲಾರದೆ ತೊಂಡನೂರಿಗೆ ಬಂದ ರಾಮಾಜಾಚಾರ್ಯರು ಮೇಲುಕೋಟೆಯಲ್ಲಿ ನೆಲೆನಿಂತು ಕರ್ನಾಟಕದ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಗೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ ಎಂದರು.
ಇಲ್ಲಿ ನಡೆಯುವ ವೈರಮುಡಿ ಉತ್ಸವ ವಿಶ್ವ ಪ್ರಸಿದ್ಧವಾಗಿದೆ. ಜಾತ್ರಾ ಅವಧಿಯಲ್ಲಿ ಶ್ರೀಮಠದಿಂದ ಪ್ರತಿವರ್ಷ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತಿದೆ. ಭಕ್ತರಿಗಾಗಿ ವಸತಿ ಗೃಹವನ್ನೂ ನಿರ್ಮಿಸಿದೆ. ಇಂತಹ ಪುಣ್ಯಭೂಮಿಯಲ್ಲಿ ಕಲಿಕಾರ್ಥಿಗಳಾಗಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ದೊರೆಯಲಿ ಎಂದು ತಿಳಿಸಿದರು.ಸಮಾರಂಭವನ್ನು ದಯಾನಂದಸಾಗರ ಇಂಜಿನಿಯರಿಂಗ್ ಕಾಲೇಜಿನ ಕಾರ್ಯದರ್ಶಿ ಗಾಳಿಸ್ವಾಮಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಬಿ.ಜಿ. ಪ್ರಸಾದ್, ಸರ್ಕಾರಿ ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್ , ಪಿಡಿಒ ರಾಜೇಶ್ವರ್, ಆದಿಚುಂಚನಗಿರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಸುರೇಶ್, ಶಿಬಿರದ ಸಂಯೋಜಕರಾದ ಪ್ರೊ.ಸಂಜೀವ್, ಎಚ್.ಎನ್ ಶ್ರೀಧರ್ ಇತರರು ಭಾಗಿಯಾಗಿದ್ದರು. ಆದಿಚುಂಚನಗಿರಿ ವಸತಿಗೃಹಗಳ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಆವರಣದಲ್ಲಿ ಗಣ್ಯರು ಸಸಿಗಳನ್ನು ನೆಟ್ಟರು.