ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ವೈದ್ಯಕೀಯ ಹಾಗೂ ನರ್ಸಿಂಗ್ ಸೇವೆಯಲ್ಲಿ ಜ್ಞಾನ, ಕೌಶಲ್ಯ ಹಾಗೂ ಮಾನವೀಯತೆಯ ಜತೆಗೆ ಸಹಾನುಭೂತಿ ಅತ್ಯಗತ್ಯ. ಕರ್ತವ್ಯದಲ್ಲಿ ಒಲವು, ಕರ್ತವ್ಯದಲ್ಲಿ ಬದ್ಧತೆ ಹಾಗೂ ನ್ಯಾಯ ಒದಗಿಸುವ ಮನೋಭಾವ ಇರಬೇಕು. ಇವುಗಳು ಶುಶ್ರೂಷಕ ವೃತ್ತಿಯಲ್ಲಿ ಆತ್ಮತೃಪ್ತಿ ಮತ್ತು ಸೇವಾ ಕಾರ್ಯದಲ್ಲಿ ಯಶಸ್ಸುಗಳಿಸುವ ಜತೆಗೆ ಕಲಿತ ವಿದ್ಯೆಯಲ್ಲಿ ಪರಿಪೂರ್ಣ ವ್ಯಕ್ತಿ ಆಗಲು ಸಾಧ್ಯವೆಂದು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ಡಾ. ರವಿಕುಮಾರ್ ಬಿ.ಸಿ. ಸಲಹೆ ನೀಡಿದರು.ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯಲ್ಲಿರುವ ಸರ್ಕಾರಿ ಶುಶ್ರೂಷಕ ಕಾಲೇಜಿನಲ್ಲಿ ಆಯೋಜಿಸಿದ್ದ ಜ್ಯೋತಿ ಬೆಳಗಿಸುವಿಕೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಆಸ್ಪತ್ರೆಗಳಲ್ಲಿ ಗಲಾಟೆ ನಡೆದ ಬಗ್ಗೆ ಕಂಡಿದ್ದೇವೆ, ಈ ಸನ್ನಿವೇಶಕ್ಕೆ ಹಲವಾರು ಕಾರಣಗಳು ಇರಬಹುದು, ಆದರೆ ನಾವುಗಳು ಆತ್ಮವಲೋಕನ ಮಾಡಿಕೊಳ್ಳಬೇಕು. ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನಾವು ಏನೇ ಮಾಡಿದರೂ, ಏನೇ ಯೋಚಿಸಿದರೂ, ಏನು ಮಾತನಾಡುತ್ತೇವೊ ಎಲ್ಲವೂ ರೋಗಿಗಳ ಹಿತದೃಷ್ಠಿಗಾಗಷ್ಟೇ ಇರಬೇಕು. ಮಾತು, ಆಲೋಚನೆ ಹಾಗೂ ನಡೆಯೂ ರೋಗಿಯ ಒಳಿತಿಗಾಗಿ ಮಾತ್ರ ಇರಬೇಕು ಯಾವುದೇ ವ್ಯಾವಹಾರಿಕ ಅಥವಾ ಇತರೆ ಚಿಂತನೆಗಳು ಇರಬಾರದು ಎಂದರು. ನಮ್ಮ ದೈನಂದಿನ ಜೀವನದಲ್ಲಿ ಉಡುಗೆ ತೊಡುಗೆಗಳಲ್ಲಿ ಗಮನವಿರಬೇಕು ಹಾಗೂ ನಗುಮೊಗದಿಂದ ಕೂಡಿದ ಮೃದು ಮಾತುಗಳು ರೋಗಿಗೆ ಚೈತನ್ಯವನ್ನು ನೀಡುತ್ತದೆ ಎಂದರು. ನಮ್ಮ ಸಂಬಳ ಹಾಗೂ ಆರ್ಥಿಕತೆಯ ನಡುವೆಯೂ ನಮ್ಮ ಜೀವನದಲ್ಲಿ ಸಂಬಂಧಗಳಿಗೆ ಪ್ರಾಮುಖ್ಯತೆ ನೀಡುವ ಜತೆಗೆ ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಯಶಸ್ವಿ ಜೀವನ ಸಾಧ್ಯವೆಂದು ತಿಳಿಸಿ, ಶುಭಕೋರಿದರು. ಪ್ರಥಮ ವರ್ಷದ ಬೇಸಿಕ್ ಬಿಎಸ್ಸಿ(ನ) ವಿದ್ಯಾರ್ಥಿಗಳಿಗೆ ಹಣೆಗೆ ತಿಲಕವಿಟ್ಟು, ಪುಷ್ಪ ನೀಡಿ, ಹಿರಿಯ ವಿದ್ಯಾರ್ಥಿಗಳು ಸ್ವಾಗತಿಸಿದರು ಹಾಗೂ ಉಪನ್ಯಾಸಕರಾದ ಸರಸ್ಪತಿ ಅವರು ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿಗಳಾದ ಅನಗ್ನ್ಯ ಪ್ರಾರ್ಥಿಸಿದರು, ಸಿದ್ಧರಾಮ ಸ್ವಾಗತಿಸಿದರು, ಕಾವ್ಯ ಹಾಗೂ ಅಕ್ಷತಾ ನಿರೂಪಿಸಿದರು ಹಾಗೂ ರಾಜಶ್ರೀ ಪ್ರಾಸ್ತವಿಕ ನುಡಿಗಳನ್ನಾಡಿದರು.
ಸರ್ಕಾರಿ ಶುಶ್ರೂಷಕ ಕಾಲೇಜಿನಲ್ಲಿ ಪ್ರಾಂಶುಪಾಲ ಚಂದ್ರಶೇಖರ್ ಅಡಪದ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್, ಹಿಮ್ಸ್ ಆಸ್ಪತ್ರೆಯ ಮೂಖ್ಯ ಹಣಕಾಸು ಅಧಿಕಾರಿ ಅಶೋಕ್ ಎಚ್.ಇ., ನರ್ಸಿಂಗ್ ಕಾಲೇಜುಗಳ ಪಾಂಶುಪಾಲರುಗಳಾದ ಕೃಷ್ಣವೇಣಿ, ರತ್ನಮ್ಮ, ಶುಶ್ರೂಷ ಅಧೀಕ್ಷಕರಾದ ಜಲಜಾ ಹಾಗೂ ಮೀನಾಕ್ಷಿ ಎಂ.ಪಿ., ಉಪನ್ಯಾಸಕರಾದ ಸಾವಿತ್ರಮ್ಮ ಎಚ್.ಪಿ., ಶೈಲಜಾ, ಇತರರು ಇದ್ದರು.