ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಹೊರವಲಯದ ಶ್ರೀಹೊಳೆ ಆಂಜನೇಯಸ್ವಾಮಿ ದೇಗುಲ ಸಮೀಪದ ಶಿಂಷಾನದಿ ಪಾತ್ರದಲ್ಲಿ ಸೋಮವಾರ ಮುಂಜಾನೆ ಆರು ಕಾಡಾನೆಗಳು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಸೃಷ್ಟಿಸಿದೆ. ಆನೆಗಳ ಹಾವಳಿಯಿಂದ ರೈತರ ಕಬ್ಬು, ಬಾಳೆ ಹಾಗೂ ಭತ್ತದ ಫಸಲುಗಳು ನಾಶವಾಗಿ ಲಕ್ಷಾಂತರ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕಬ್ಬಾಳು ಅರಣ್ಯ ಪ್ರದೇಶದ ಆನೆ ಕಾರಿಡಾರ್‌ನಿಂದ ಆಹಾರ ಅರಸಿ ವಲಸೆ ಬಂದಿರುವ ಆರು ಸಲಗಗಳು ಮುಂಜಾನೆ ಆರು ಗಂಟೆ ಸುಮಾರಿಗೆ ಶಿಂಷಾನದಿಯಲ್ಲಿ ಬಿಡು ಬಿಟ್ಟಿದ್ದವು.
ನದಿ ಪಾತ್ರದಲ್ಲಿ ಜಮೀನುಗಳನ್ನು ಹೊಂದಿರುವ ರೈತರು ನದಿಯಲ್ಲಿ ಆನೆಗಳ ಹಿಂಡು ಜಲ ಕ್ರೀಡೆ ಆಡುತ್ತಿರುವುದನ್ನು ಕಂಡು ಆತಂಕಗೊಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ನಂತರ ಸ್ಥಳಕ್ಕೆ ಧಾವಿಸಿದ ಮದ್ದೂರು ವಲಯ ಅರಣ್ಯ ಅಧಿಕಾರಿ ಗವಿಯಪ್ಪ ನೇತೃತ್ವದಲ್ಲಿ ಮಂಡ್ಯ, ಮದ್ದೂರು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸ್ಥಳದಲ್ಲೇ ಮೊಕ್ಕಂ ಹೂಡಿ ನದಿ ಪಾತ್ರದ ಕೂಗಳತೆ ದೂರದಲ್ಲಿರುವ ಮದ್ದೂರು ಜನನಿ ಬಿಡ ಪ್ರದೇಶ ಹಾಗೂ ಬಡಾವಣೆಗಳಿಗೆ ಆನೆಗಳು ನುಗ್ಗದಂತೆ ತೀವ್ರ ಕಟ್ಟೆಚರ ವಹಿಸಿದ್ದಾರೆ.
ಶಿಂಷಾ ನದಿ ಪಾತ್ರದಲ್ಲಿ ಕೆಲಕಾಲ ಜಲ ಕ್ರೀಡೆಯಾಡುತ್ತಾ ಬೀಡು ಬಿಟ್ಟಿದ್ದ ಆನೆಗಳ ಹಿಂಡು ಬೆಳಗ್ಗೆ 11 ಗಂಟೆ ಸುಮಾರಿಗೆ ನದಿಯಿಂದ ಹೊರಬಂದು ಕೆ.ಕೋಡಿಹಳ್ಳಿ ಸಮೀಪದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಸಮೀಪ ತೆರಳುತ್ತಿರುವುದನ್ನು ಕಂಡ ಅರಣ್ಯ ಇಲಾಖೆ ಅಧಿಕಾರಿಗಳ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಪರಿಣಾಮ ಆನೆಗಳು ಸದ್ಯ ಹೆದ್ದಾರಿ ಪಕ್ಕದ ಇಟ್ಟಿಗೆ ಗೂಡೊಂದರ ಪೊದೆಯಲ್ಲಿ ಬೀಡು ಬಿಟ್ಟಿವೆ.ಆನೆಗಳು ಪೊದೆಯಿಂದ ಹೊರ ಬಂದು ಮತ್ತೆ ಹೆದ್ದಾರಿ ಸರ್ವಿಸ್ ರಸ್ತೆಗೆ ಪ್ರವೇಶ ಮಾಡುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿಗೆ ಗೂಡನ್ನು ಬಿಟ್ಟು ಹೊರಬರದಂತೆ ಸುತ್ತು ವರಿದಿದ್ದಾರೆ. ಕಬ್ಬಾಳು ಅರಣ್ಯ ಪ್ರದೇಶದ ಆನೆ ಕಾರಿಡಾರ್ ನಿಂದ ಹೊರಬಂದ ಆರು ಸಲಗಗಳು ಮಾರ್ಗ ಮಧ್ಯೆ ಚೆನ್ನಪಟ್ಟಣ ತಾಲೂಕಿನ ಗಡಿಭಾಗದಲ್ಲಿರುವ ಬಿ.ವಿ.ಹಳ್ಳಿ, ಅಕ್ಕೂರು, ಬೆಳಕೆರೆ, ಮಾರಸನಹಳ್ಳಿ ಮಾರ್ಗವಾಗಿ ಮದ್ದೂರು ಗಡಿ ಪ್ರವೇಶ ಮಾಡುವ ಮುನ್ನ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ಭತ್ತ, ಬಾಳೆ ಫಸಲು, ತೆಂಗಿನ ಸಸಿಗಳನ್ನು ತಿಂದು ಹಾನಿ ಮಾಡಿವೆ. ಅಲ್ಲದೆ ಆಲದ ಮರಗಳನ್ನು ನೆಲ ಕುರುಳಿಸಿವೆ.
ನಂತರ ಮದ್ದೂರು ತಾಲೂಕಿನ ಗಡಿಭಾಗವಾದ ಬ್ಯಾಡರಹಳ್ಳಿ, ಮಾದನಾಯಕನಹಳ್ಳಿ ಹೊರವಲಯದ ಬಾಳೆ ತೋಟಗಳ ಮೇಲೆ ದಾಳಿ ಮಾಡಿದ ಆನೆಗಳು ಫಸಲನ್ನು ನಾಶಪಡಿಸಿ ಲಕ್ಷಾಂತರ ಹಾನಿ ಮಾಡಿವೆ. ನಂತರ ತೈಲೂರು ಕೆರೆ, ಬೂದುಗುಪ್ಪೆ ಮಾರ್ಗವಾಗಿ ಕೆ.ಕೋಡಿಹಳ್ಳಿ ಹೂರವಲಯದ ರೈತರ ತೋಟಗಳ ಮಾರ್ಗವಾಗಿ ಬಂದು ಶಿಂಷಾ ನದಿಯಲ್ಲಿ ಬೀಡು ಬಿಟ್ಟಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಸಂಜೆ ವೇಳೆಗೆ ಹುಣಸೂರಿನಿಂದ ಆಗಮಿಸಲಿರುವ ಆನೆಗಳ ಕಾರ್ಯಪಡೆ ತಂಡ ಹಾಗೂ ಮದ್ದೂರು, ಮಂಡ್ಯ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಮತ್ತು ಏರ್ ಗನ್ ಸಿಡಿಸಿ ಆನೆಗಳನ್ನು ಮತ್ತೆ ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ವಲಯಅರಣ್ಯ ಅಧಿಕಾರಿ ಗವಿಯಪ್ಪ ಕನ್ನಡಪ್ರಭ ತಿಳಿಸಿದರು.
ಆನೆಗಳ ಕಾಣಿಸಿಕೊಳ್ಳುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಗವಿಯಪ್ಪ ಹಾಗೂ ವೃತ್ತ ನಿರೀಕ್ಷಕ ಕೆ.ಆರ್. ಪ್ರಸಾದ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಬಿಗಿ ಭದ್ರತೆಯೊಂದಿಗೆ ಆನೆಗಳನ್ನು ಮತ್ತೆ ಕಾಡಿಗಟ್ಟಲು ಕ್ರಮ ಕೈಗೊಂಡಿದ್ದಾರೆ.ಬೆಳೆ ನಾಶ ರೈತರಿಗೆ ಪರಿಹಾರಕಾಡಾನೆಯಿಂದ ಆಗಿರುವ ಬೆಳೆ ನಾಶಕ್ಕೆ ಪರಿಹಾರ ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಗವಿಯಪ್ಪ ತಿಳಿಸಿದರು. ಕೆ.ಕೋಡಿಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸರ್ಕಾರದ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು. ಸದ್ಯ ಕೆ.ಕೋಡಿಹಳ್ಳಿ ಗದ್ದೆಯಲ್ಲಿ ಆನೆಗಳು ಬೀಡು ಬಿಟ್ಟಿವೆ. ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಸಂಜೆ ಬಳಿಕ ಕಾರ್ಯಾಚರಣೆ ಮೂಲಕ ಅರಣ್ಯಕ್ಕೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.