ಅಸಮರ್ಪಕ ವಿದ್ಯುತ್ ಪೂರೈಕೆ: ರೈತರ ಕಂಗಾಲು

| Published : Nov 06 2023, 12:46 AM IST

ಅಸಮರ್ಪಕ ವಿದ್ಯುತ್ ಪೂರೈಕೆ: ರೈತರ ಕಂಗಾಲು
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳುತ್ತದೆ. ಆದರೆ ವಾಸ್ತವವಾಗಿ ಒಂದೆರಡು ಗಂಟೆ ವಿದ್ಯುತ್ ಅನ್ನು ಸರಿಯಾಗಿ ಪೂರೈಸುತ್ತಿಲ್ಲ. ಮಳೆ ಅಭಾವ ಹಾಗೂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಜ್ಯ ರೈತ ಸಂಘದ ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ ಬೇಸರ ವ್ಯಕ್ತಪಡಿಸಿದರು.

ಚನ್ನಪಟ್ಟಣ: ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳುತ್ತದೆ. ಆದರೆ ವಾಸ್ತವವಾಗಿ ಒಂದೆರಡು ಗಂಟೆ ವಿದ್ಯುತ್ ಅನ್ನು ಸರಿಯಾಗಿ ಪೂರೈಸುತ್ತಿಲ್ಲ. ಮಳೆ ಅಭಾವ ಹಾಗೂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಜ್ಯ ರೈತ ಸಂಘದ ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್ಟಿ ಭಾಗ್ಯದ ಹೆಸರಿನಲ್ಲಿ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ಒಂದು ಕಡೆ ಭಾಗ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಇನ್ನೊಂದು ಕಡೆ ಅಭಿವೃದ್ಧಿಯೂ ಆಗುತ್ತಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದಿಸಿದ ಅವರು, ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ, ನರೇಗಾ ಕಾಮಗಾರಿಗಳು ಸೇರಿದಂತೆ ಯಾವೊಂದು ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಕೆಲವು ಕೆಲಸಗಳು ಆಗುತ್ತಿವೆಯಾದರೂ ಕಾಮಗಾರಿಗಳು ಕಳಪೆಯಿಂದ ಕೂಡಿವೆ. ಒಟ್ಟಾರೆಯಾಗಿ ಎಲ್ಲ ವಿಧದಲ್ಲೂ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದರು.

ಆದೇಶ ಹಿಂಪಡೆಯಬೇಕು: ಇತ್ತೀಚೆಗೆ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಲು ರೈತರೇ ಟಿ.ಸಿ., ವಿದ್ಯುತ್ ಕಂಬ, ಕೇಬಲ್ ಎಲ್ಲದಕ್ಕೂ ಹಣ ಪಾವತಿಸಬೇಕು ಎಂಬ ಆದೇಶ ವಿಧಿಸಿದೆ. ಮೊದಲೇ ಬರದಿಂದ ಕಂಗೆಟ್ಟಿರುವ ರೈತರು ಇಷ್ಟು ಹಣವನ್ನು ಭರಿಸಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯುವುದಾದರೂ ಹೇಗೆ? ಸರ್ಕಾರ ಈ ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ರಾಮೇಗೌಡ ಮಾತನಾಡಿ, ಒಂದು ಕಡೆ ರೈತರ ಪಂಪ್‌ಸೆಟ್‌ಗಳಿಗೆ ಅಸಮರ್ಕಪ ವಿದ್ಯುತ್ ಪೂರೈಕೆ ಮಾಡುವ ಮೂಲಕ ಸರ್ಕಾರ ರೈತರ ಬದುಕಿಗೆ ಕೊಳ್ಳಿ ಇಟ್ಟಿದ್ದರೆ, ಮತ್ತೊಂದು ಕಡೆ ಹಾಲಿನ ದರವನ್ನು ಕಡಿಮೆ ಮಾಡಲಾಗಿದೆ. ರೈತರು ಪೂರೈಕೆ ಮಾಡುವ ಹಾಲಿನ ದರವನ್ನು ಕಡಿಮೆ ಮಾಡುವ ಮೂಲಕ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ರಾಜ್ಯ ಸರ್ಕಾರ 190ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಸಮರ್ಪಕ ವಿದ್ಯುತ್ ಪೂರೈಸದೇ, ಹಾಲಿನ ದರವನ್ನು ಕಡಿಮೆ ಮಾಡುವ ಮೂಲಕ ಸರ್ಕಾರ ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ. ಇನ್ನಾದರೂ ಸರ್ಕಾರ ರೈತರ ಹಿತ ಕಾಪಾಡಲು ಮುಂದಾಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಕನ್ನಸಂದ್ರ ರಾಜು ಮಾತನಾಡಿ, ರಾಜ್ಯವನ್ನು ಆಳಿದ ಎಲ್ಲ ಸರ್ಕಾರಗಳು ರೈತ ವಿರೋಧಿಯೇ ಆಗಿವೆ. ಯಾರಿಗೂ ರೈತರ ಬಗ್ಗೆ ಕಾಳಜಿಯೇ ಇಲ್ಲದಂತಾಗಿದೆ. ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನತಾ ದರ್ಶನ ಅಧಿಕಾರಿಗಳ ದರ್ಶನ ಎಂಬಂತಾಗಿದೆ. ಪೊಲಿಸರನ್ನು ನಿಲ್ಲಿಸಿಕೊಂಡು ಕಾರ್ಯಕ್ರಮ ಮಾಡಲಾಗಿದೆ. ರೈತರ ಸಮಸ್ಯೆ ಹೇಳಿಕೊಳ್ಳುವ ಅವಕಾಶವನ್ನೇ ನೀಡಲಿಲ್ಲ ಎಂದು ಕಿಡಿಕಾರಿದರು.

ಎ.ಸಿ. ರೂಮಿನಲ್ಲಿ ಕುಳಿತ ಅಧಿಕಾರಿಗಳಿಗೆ ರೈತರ ಕಷ್ಟ ಗೊತ್ತಿಲ್ಲ. ಕಂದಾಯ ಇಲಾಖೆಯಲ್ಲಿ ರೈತರ ಕೆಲಸಗಳು ಆಗುತ್ತಿಲ್ಲ. ಎಲ್ಲದಕ್ಕೂ ನ್ಯಾಯಾಲಯಕ್ಕೆ ಅಲೆಯುವ ಮೂಲಕ ರೈತರ ವಕೀಲರಿಗೆ ಹಣ ನೀಡುವಂತಾಗಿದೆ. ಸರ್ಕಾರ ರೈತರ ಕಣ್ಣೊರೆಸುವ ನಾಟಕವಾಡುತ್ತಿದೆಯೇ ಹೊರತು ರೈತರ ಸಂಕಷ್ಟ ಪರಿಹರಿಸುವ ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಎಚ್.ಸಿ.ಕೃಷ್ಣಯ್ಯ, ಕೋದಂಡರಾಮು, ಎಲ್.ಶಿವಪ್ಪ, ಗುರುಲಿಂಗಯ್ಯ, ಬೋರೇಗೌಡ, ಮಾಗನೂರು ರಾಜು ಇತರರಿದ್ದರು.

ಬಾಕ್ಸ್................

ಇಂದು ರಾಜ್ಯಮಟ್ಟದ ಸಮಾವೇಶ

ಕರ್ನಾಟಕ ರಾಜ್ಯ ರೈತಸಂಘದ ಮಹಿಳಾ ಮತ್ತು ಯುವ ಘಟಕದ ರಾಜ್ಯಮಟ್ಟದ ಪದಾಧಿಕಾರಿಗಳ ಸಮಾವೇಶ ಹಾಗೂ ವಿಚಾರಗೋಷ್ಠಿಯನ್ನು ನಗರದ ಮಹೇಶ್ವರ ಕನ್ವೆಷನ್ ಹಾಲ್‌ನಲ್ಲಿ ನ.6ರಂದು ಸೋಮವಾರ ಆಯೋಜಿಸಲಾಗಿದೆ ಎಂದು ರೈತ ಸಂಘದ ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ ತಿಳಿಸಿದರು.

ರೈತ ಚಳವಳಿಯನ್ನು ವಿಸ್ತಾರವಾದ ನೆಲೆಯಲ್ಲಿ ಬಲಗೊಳಿಸಲು ರೈತ ಮಹಿಳೆಯರು, ಯುವ ರೈತರನ್ನು ರಾಜ್ಯಾದ್ಯಂತ ಸಂಘಟಿಸಲು ಕಾರ್ಯಯೋಜನೆ ರೂಪಿಸಲಾಗಿದೆ. ಈ ಸಂಬಂಧ ಚರ್ಚಿಸುವ ಉದ್ದೇಶದಿಂದಲೇ ಪದಾಧಿಕಾರಿಗಳು, ಪ್ರತಿನಿಧಿ ಸಮಾವೇಶ ಮತ್ತು ವಿಚಾರ ಗೋಷ್ಠಿ ಆಯೋಜಿಸಲಾಗಿದೆ ಎಂದರು.

ಸೋಮವಾರ ಬೆಳಗ್ಗೆ 10.30ಕ್ಕೆ ಸಮಾವೇಶವನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಉದ್ಘಾಟಿಸಲಿದ್ದು, ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ವಿ.ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ವಿಚಾರಗೋಷ್ಠಿ ಅಧ್ಯಕ್ಷತೆಯನ್ನು ಯುವ ಘಟಕದ ರಾಜ್ಯ ಸಂಚಾಲಕ ಆದಿತ್ಯ ನಾರಾಯಣ ಕೊಲ್ಲಾಜೆ ವಹಿಸಲಿದ್ದಾರೆ. ವಿಚಾರಗೋಷ್ಠಿಯಲ್ಲಿ ಕೃಷಿ ಸದೃಢಗೊಳಿಸುವಲ್ಲಿ ಯುವಕರ ಪಾತ್ರದ ಬಗ್ಗೆ ಹಿರಿಯ ಪತ್ರಕರ್ತ ಡಾ.ವಾಸು, ರೈತಸಂಘದ ಹುಟ್ಟು ಮತ್ತು ನಡೆದು ಬಂದ ದಾರಿಯ ಬಗ್ಗೆ ಹಿರಿಯ ಪತ್ರಕರ್ತ ಸು.ತ.ರಾಮೇಗೌಡ, ಚಳವಳಿಯಲ್ಲಿ ಮಹಿಳೆಯರ ಪಾತ್ರ ಹಾಗೂ ಜಿಲ್ಲೆಯ ರೈತ ಚಳವಳಿ ಬಗ್ಗೆ ವಿಶ್ರಾಂತ ಪ್ರಾಧ್ಯಾಪಕಿ ಡಾ.ಬಿ.ಟಿ.ನೇತ್ರಾವತಿಗೌಡ ಹಾಗೂ ಕಾರ್ಯಕರ್ತರಿಗೆ ಇರಬೇಕಾದ ಶಿಸ್ತು, ಸಂಘದ ಬದ್ಧತೆ ಬಗ್ಗೆ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ವಿಷಯ ಮಂಡಿಸಲಿದ್ದಾರೆ ಎಂದು ತಿಳಿಸಿದರು.

ಪೊಟೋ೫ಸಿಪಿಟಿ೧: ಚನ್ನಪಟ್ಟಣದಲ್ಲಿರೈತ ಸಂಘದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.