ಗ್ರಾಮದ ಪ್ರತಿ ಮನೆ ಮನೆಗೂ ಕುಡಿಯುವ ನೀರು ಪೂರೈಸುವ ಜಲ ಜೀವನ ಮಿಶನ್ ಅಸಮರ್ಪಕ ಕಾಮಗಾರಿ ಹಾಗೂ ಕುಡಿಯುವ ನೀರಿನ ಪೂರೈಕೆ ಮಾಡುವಲ್ಲಿ ಗ್ರಾಮ ಪಂಚಾಯತಿ ತಾರತಮ್ಯವನ್ನು ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿದರು.

ಗದಗ: ಗ್ರಾಮದ ಪ್ರತಿ ಮನೆ ಮನೆಗೂ ಕುಡಿಯುವ ನೀರು ಪೂರೈಸುವ ಜಲ ಜೀವನ ಮಿಶನ್ ಅಸಮರ್ಪಕ ಕಾಮಗಾರಿ ಹಾಗೂ ಕುಡಿಯುವ ನೀರಿನ ಪೂರೈಕೆ ಮಾಡುವಲ್ಲಿ ಗ್ರಾಮ ಪಂಚಾಯತಿ ತಾರತಮ್ಯವನ್ನು ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ಅನ್ನದಾನೀಶ್ವರ ಸಭಾ ಭವನದಲ್ಲಿ ಗ್ರಾಮ ಪಂಚಾಯಿತಿಯಿಂದ ಕರೆಯಲಾಗಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಮಹಿಳೆಯರು, ಯುವಕರು ಗ್ರಾಪಂ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಗ್ರಾಮಸ್ಥರು, ಕಳೆದ ಹಲವು ವರ್ಷಗಳಿಂದ ಗ್ರಾಮದ ಕೇವಲ 5 ವಾರ್ಡ್‌ಗಳಲ್ಲಿ ಮಾತ್ರ ಸಮರ್ಪಕವಾಗಿ ನೀರು ಪೊರೈಕೆಯಾಗುತ್ತಿದೆ. ಆದರೆ 6,7,8,9 ಮತ್ತು 10ನೇ ವಾರ್ಡ್‌ಗಳಲ್ಲಿ 8-12 ದಿನಕ್ಕೆ ನೀರು ಪೂರೈಸುತ್ತಿದ್ದು, ಜನ ಮತ್ತು ಜಾನುವಾರುಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ನೀರು ವಾಲ್‌ಮನ್‌ನನ್ನು ಸಭೆಗೆ ಕರೆಯಿಸಿದ ಆಡಳಿತಾಧಿಕಾರಿ ಶರಣು ಗೋಗೇರಿ ಅವರು, ತರಾಟೆಗೆ ತೆಗೆದುಕೊಂಡು ಸಮರ್ಪಕವಾದ ನೀರು ಪೊರೈಸಲು ಬೇಕಾಗುವ ಆರ್ಥಿಕ ಸಂಪನ್ಮೂಲವನ್ನು ಒದಗಿಸಲಾಗುತ್ತಿದೆ. ಇರುವ ಸಮಸ್ಯೆಯನ್ನು ನಮಗೆ ಗಮನಕ್ಕೆ ತರಬೇಕು. ನಿಷ್ಕಾಳಜಿ ವಹಿಸಿದ್ದಲ್ಲಿ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕುಡಿಯುವ ನೀರು ಪೂರೈಕೆ ಮಾಡುವ ಜೆ.ಜೆ.ಎಂ. ಯೋಜನೆ ಅಸಮರ್ಪಕವಾಗಿದ್ದು, ಕಾಮಗಾರಿ ಮುಗಿದರೂ ಈವರೆಗೂ ನೀರು ಪೂರೈಕೆಯಾಗುತ್ತಿಲ್ಲ. ಸುಮಾರು ₹4 ಕೋಟಿ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಗ್ರಾಮ ಪಂಚಾಯಿತಿ ಹೇಳುತ್ತಿದೆ. ಆದರೆ, ಈ ವರೆಗೂ ಯಾಕೆ ನೀರು ಪೂರೈಕೆಯಾಗುತ್ತಿಲ್ಲ. ಇದಕ್ಕೆ ಸಂಭಂದಪಟ್ಟ ಎಂಜಿನಿಯರ್, ಗುತ್ತಿಗೆದಾರರ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಲಾಗುವುದು ಎಂದು ತಾಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ, ಎನ್.ಐ. ಕಿರಿಟಗೇರಿ ದೂರಿದರು.

ಕಳೆದ 30 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ 9ನೇ ವಾರ್ಡಿನ ಕುರಿತು ಮರಿಯಪ್ಪ ವಡ್ಡರ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸಿದರು. ನೀರನ್ನು ದುರ್ಬಳಕೆ ಮಾಡುವವರ ವಿರುದ್ಧ ಗ್ರಾಮ ಪಂಚಾಯಿತಿಯು ಕ್ರಮ ಜರುಗಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಬಿ.ಬಿ. ಮಾಡಲಗೇರಿ ಆಗ್ರಹಿಸಿದರು.

ಇನ್ನೂ ಎಸ್.ಸಿ ಸಮುದಾಯಕ್ಕೆ ಮೀಸಲಾಗಿರುವ ಸ್ಮಶಾನ ಜಾಗದಲ್ಲಿ ಬೇರೆ ಕಟ್ಟಡ ನಿರ್ಮಿಸಬಾರದು. ದುರ್ಗಾದೇವಿ ಕೆರೆಯ ಸುತ್ತಲೂ ತೆಗೆದು ಹಾಕಿರುವ ಕಲ್ಲನ್ನು ಬೇಗ ಅಳ‍ವಡಿಸಬೇಕು ಎಂದು ಜಿಲ್ಲಾ ನಾಮ ನಿರ್ದೇಶಿತ ಎಸ್.ಸಿ.ಎಸ್.ಟಿ. ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯ ಬಸವರಾಜ ಮುಳ್ಳಾಳ ಒತ್ತಾಯಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಮಾತನಾಡಿ, 101 ದೇವಸ್ಥಾನ ಹಾಗೂ ಭಾವಿಗಳನ್ನು ಹೊಂದಿರುವ ಲಕ್ಕುಂಡಿ ಗ್ರಾಮ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಶಾಸಕ ಎಚ್.ಕೆ. ಪಾಟೀಲ ಹಾಗೂ ಶಾಸಕ ಸಿ.ಸಿ. ಪಾಟೀಲ ಅವರು ಶ್ರಮ ವಹಿಸುತ್ತಿದ್ದಾರೆ. ತಮ್ಮೂರಿನ ಪರಿಸರವನ್ನು, ಪ್ರವಾಸಿಗರನ್ನು ಸೆಳೆಯಲು ಸ್ವಚ್ಛ ಹಾಗೂ ಸುಂದರವಾಗಿ ಕಾಣಲು ಗ್ರಾಮ ಪಂಚಾಯತಿಯೊಂದಿಗೆ ಕೈ ಜೋಡಿಸಬೇಕು. ನೀರನ್ನು ಹಿತ ಮಿತವಾಗಿ ಬಳಕೆ ಮಾಡಬೇಕು ಎಂದರು.

ಸಭೆಯ ಅನುಷ್ಠಾನ ಅಧಿಕಾರಿ ಮನೇರೆಗಾ ಯೋಜನೆಯ ಸಹಾಯಕ ನಿರ್ದೇಶಕ ಕುಮಾರ ಪೂಜಾರ, ಗ್ರಾಮೀಣ ವಿಶ್ವ ವಿದ್ಯಾಲಯದ ಸಂಯೋಜಕ ಸೋಮಲಿಂಗ ಕರ್ಣಿ ಮಾತನಾಡಿದರು.

ಆಶ್ರಯ ಫಲಾನುಭವಿ ಆಯ್ಕೆ:ಜೀತ ಪದ್ಧತಿಯಿಂದ ಮುಕ್ತಿ ಹೊಂದಿದ ಪಕ್ಕಣ್ಣ ಬೇಲೇರಿ ಮ್ಯಾನುವಲ್ ಸ್ಕ್ಯಾವೆಂಜರ್ ಸೇವೆಯ ಮಾಯಪ್ಪ ಮುಳ್ಳಾಳ ಹಾಗೂ ವಿಜಯಲಕ್ಷ್ಮೀ ಕರಿ ಫಲಾನುಭವಿಗಳನ್ನು ಆಶ್ರಯ ವಸತಿ ಯೋಜನೆಗೆ ಆಯ್ಕೆ ಮಾಡಲಾಯಿತು. 2018ರಲ್ಲಿ ವಸತಿ ಯೋಜನೆಗೆ ಆಯ್ಕೆಯಾದ ಐವರು ಎಸ್.ಸಿ. ಫಲಾನುಭವಿಗಳ ಬದಲಾಗಿ ಅದೇ ಕುಟುಂಬದ ಐವರನ್ನು ಮರು ಆಯ್ಕೆ ಮಾಡಲಾಯಿತು. 2018ರಲ್ಲಿ ಆಯ್ಕೆಯಾದ ಕುಂಬಾರೇಶ್ವರ ದೇವಸ್ಥಾನದ ಸುತ್ತಲಿನ 27 ಕುಟುಂಬಗಳಲ್ಲಿ ಪೋತಿಯಾದ 9 ಜನರ ಬದಲಾಗಿ ಅದೇ ಕುಟುಂಬದ 9 ಫಲಾನುಭವಿಗಳನ್ನು ಮರು ಆಯ್ಕೆ ಮಾಡಲಾದ ಠರಾವನ್ನು ಪಿಡಿಒ ಡಾ. ಅಮೀರನಾಯಕ ಅವರು ಸಭೆಗೆ ಓದಿ ಹೇಳಿದರು.

ನ್ಯಾ. ಸುಪರ್ಣ ಬ್ಯಾಹಟ್ಟಿ ಸೇರಿದಂತೆ ಗ್ರಾಮೀಣ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು.