ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಹತ್ಯೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಗಾಯಾಳುಗಳಿಗೆ ಸರ್ಕಾರದಿಂದಲೇ ಉತ್ತಮ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿರುವುದಾಗಿ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಹುಬ್ಬಳ್ಳಿ:
ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ದೌರ್ಜನ್ಯ, ಹತ್ಯೆ ಪ್ರಕರಣದಲ್ಲಿ ಗಾಯಗೊಂಡಿದ್ದ ವಿವೇಕಾನಂದ ದೊಡ್ಡಮನಿ ಕುಟುಂಬಸ್ಥರಿಗೆ ₹5 ಲಕ್ಷ ಚೆಕ್‌ನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಮಂಗಳವಾರ ದೇಶಪಾಂಡೆ ನಗರದಲ್ಲಿರುವ ವಿವೇಕಾನಂದ ಆಸ್ಪತ್ರೆಯಲ್ಲಿ ವಿತರಿಸಿದರು.ಈ ಪ್ರಕರಣದಲ್ಲಿ ಮರೇಪ್ಪ ದೊಡ್ಡಮನಿ, ಸುನೀಲ್ ಹರಿಜನ, ಸಂಗೀತಾ ಹರಿಜನ, ರೇಣವ್ವ, ಅನನ್ಯಾ ದೊಡ್ಡಮನಿ, ಯಲ್ಲಪ್ಪ ದೊಡ್ಡಮನಿ, ಹೂವಮ್ಮ ದೊಡ್ಡಮನಿ ಹಾಗೂ ವಿವೇಕಾನಂದ ದೊಡ್ಡಮನಿ ಅವರು ಗಾಯಗೊಂಡಿದ್ದರು. ಅವರ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭಾ ಪಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಪ್ರಿಯದರ್ಶಿನಿ ಹಿರೇಮಠ, ಆಸ್ಪತ್ರೆಯ ವೈದ್ಯರು, ಕುಟುಂಬಸ್ಥರು ಹಾಜರಿದ್ದರು.ಗಾಯಾಳುಗಳಿಗೆ ಸರ್ಕಾರದಿಂದಲೇ ಚಿಕಿತ್ಸೆ:ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಹತ್ಯೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಗಾಯಾಳುಗಳಿಗೆ ಸರ್ಕಾರದಿಂದಲೇ ಉತ್ತಮ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿರುವುದಾಗಿ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು. ಗಾಯಾಳುಗಳಿಗೆ ತುರ್ತು ಹಾಗೂ ಅಗತ್ಯವಾದ ಚಿಕಿತ್ಸೆಯನ್ನು ಕೊಡಿಸುವ ಕೆಲಸವನ್ನು ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಮಾಡಲಾಗುತ್ತಿದೆ. ತುರ್ತು ನಿಗಾ ಘಟಕದಲ್ಲಿದ್ದ ಯುವಕನ ದೊಡ್ಡಪ್ಪನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅವರನ್ನು ಸಾಮಾನ್ಯ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಅವರ ದೊಡ್ಡಮ್ಮನಿಗೆ ತುರ್ತು ನಿಗಾಘಟಕದಲ್ಲಿ ಉತ್ತಮ ಚಿಕಿತ್ಸೆ ಮುಂದುವರಿದಿದೆ ಎಂದರು.ಘಟನೆ ನಡೆದ ದಿನದಿಂದ ಇಲ್ಲಿಯ ವರೆಗೂ ವಿವೇಕಾನಂದ ಆಸ್ಪತ್ರೆಯಲ್ಲಿರುವ ಗಾಯಾಳುಗಳ ಮೇಲ್ವೀಚಾರಣೆಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ. ಮೊದಲು ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಿ ಅವರನ್ನು ಗುಣಮುಖರನ್ನಾಗಿಸಲಾಗುವುದು. ಇದು ನಮ್ಮ ಪ್ರಮುಖ ಕರ್ತವ್ಯವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಾನು ಸಹ ಸದ್ಯದಲ್ಲಿಯೇ ಗ್ರಾಮಕ್ಕೆ ಭೇಟಿನೀಡಿ, ಅಲ್ಲಿನ ಗ್ರಾಮಸ್ಥರಿಗೆ ಹಾಗೂ ಹಲ್ಲೆಗೆ ಒಳಗಾದ ಕುಟುಂಬ ಸದಸ್ಯರಿಗೆ ಧೈರ್ಯ ತುಂಬುವ ಕೆಲಸ ಮಾಡುವೆ ಎಂದರು.
ಮತ್ತೊಮ್ಮೆ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲೆಯ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.ಜಿಲ್ಲಾಧಿಕಾರಿಗಳಿಗೆ ಘೇರಾವ್‌ಗೆ ಯತ್ನ:ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳುಗಳ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದ ಜಿಲ್ಲಾಧಿಕಾರಿಗೆ ದಲಿತ ವಿಮೋಚನಾ ಸಮಿತಿ ಕಾರ್ಯಕರ್ತರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ನಡೆದು ಮೂರು ದಿನಗಳಾದರೂ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ. ಗಾಯಾಳುಗಳ ಆರೋಗ್ಯ ವಿಚಾರಿಸಿಲ್ಲ ಎಂದು ಸಂಘಟನೆಯ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಆಗ ಡಿಸಿ, ಸಮಾಜ ಕಲ್ಯಾಣ ಇಲಾಖೆಯ ಜೆಡಿ ಸೇರಿದಂತೆ ಉಳಿದ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂಬ ಆರೋಪದ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.