ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕಳೆದ ಒಂದು ದಶಕದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರ ಬಗ್ಗೆ ಪೂರ್ಣವಾಗಿ ಅಧ್ಯಯನ ನಡೆಸಿ ಅಂತರ್ಜಲ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ವೈಜ್ಞಾನಿಕ ಸಮೀಕ್ಷೆ ನಡೆಸಲು ಇಸ್ರೋ ಸಹಿತ ವಿವಿಧ ತಜ್ಞರ ನೇತೃತ್ವದಲ್ಲಿ ವಾಟರ್ ಆಡಿಟ್ ಕಮಿಟಿ ರಚಿಸಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.ದ.ಕ. ಜಿಲ್ಲಾ ಕಾಂಗ್ರೆಸ್, ದ.ಕ. ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ವತಿಯಿಂದ ಮಂಗಳೂರು ಪುರಭವನದಲ್ಲಿ ಬುಧವಾರ ನಡೆದ ಪಂಚಾಯತ್‌ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಕರಾವಳಿಯಲ್ಲಿ ಕುಡಿಯುವ ನೀರು ಸಾಕಷ್ಟು ಪ್ರಮಾಣದಲ್ಲಿ ಇತ್ತು. ಆದರೆ ಈಗ ಕುಡಿಯುವ ನೀರಿನ ಕೊರತೆ ತಲೆದೋರುತ್ತಿದೆ. ಹೀಗಾಗಿ ಅಂತರ್ಜಲದ ಬಗ್ಗೆ ಸ್ಥೂಲ ಅಧ್ಯಯನವನ್ನು ಕೆಲವೇ ತಿಂಗಳಲ್ಲಿ ನಡೆಸಿ ವರದಿ ಪಡೆದು ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಸಣ್ಣ ಹಾಗೂ ಬೃಹತ್ ನೀರಾವರಿ ಇಲಾಖೆ, ಜಿ.ಪಂ.ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳ ಸಮಿತಿ ರಚಿಸಲಾಗುವುದು ಎಂದರು.ಪಂಚತಂತ್ರ-2 ಪ್ರಾಯೋಗಿಕ ಜಾರಿ:
ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಪಂಚತಂತ್ರ-2 ರೂಪಿಸಲಾಗಿದ್ದು, ಪ್ರಾಯೋಗಿಕವಾಗಿ ಜಾರಿಯಲ್ಲಿದೆ. ಗ್ರಾ.ಪಂ ಸಭೆಯನ್ನು ಆನ್‌ಲೈನ್ ಮೂಲಕವೇ ಇದರಲ್ಲಿ ಮಾಡಿ ಅದರ ವರದಿ ಸಲ್ಲಿಸಿದರೆ ಅನುದಾನ ಕೂಡ ಬೇಗನೆ ಲಭಿಸಲು ಅನುಕೂಲವಿದೆ. ಪಿಡಿಒಗಳ ಹಾಜರಾತಿ ಕೂಡ ಬಯೋಮೆಟ್ರಿಕ್ ಆಗಿರಲಿದೆ ಎಂದರು.‘ಅರಿವು’ ಗ್ರಂಥಾಲಯ:
ಇಂದಿನ ಯುವ ಜನಾಂಗ ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಬಾಕಿಯಾಗಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಏದುವ ಬಗ್ಗೆ ಅರಿವು ನಮ್ಮಲ್ಲಿ ಬರಬೇಕಾಗಿದೆ. ಇದಕ್ಕಾಗಿ ಎಲ್ಲ ಕಡೆಯಲ್ಲಿಯೂ ಸುಸಜ್ಜಿತ ಗ್ರಂಥಾಲಯ ನಿರ್ಮಿಸುವ ‘ಅರಿವು’ ಕೇಂದ್ರ ಆರಂಭಿಸಲಾಗುವುದು. ಇದಕ್ಕೆ ವಿಶ್ವವಿದ್ಯಾಲಯಗಳ ಲಿಂಕ್ ಕಲ್ಪಿಸಿ ಹೆಚ್ಚುವರಿ ಮಾಹಿತಿ ನೀಡುವ ಕಾರ್ಯ ನಡೆಸಲಾಗುವುದು. ಆಯಾ ಗ್ರಾಮ ಪಂಚಾಯ್ತಿಗಳಿಗೆ ಗ್ರಂಥಾಲಯಕ್ಕೆ ಜಾಗ ಗುರುತಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.‘ಪಂಚಮಿತ್ರ’ ಕಾಲ್ ಸೆಂಟರ್:
ಪಂಚಾಯತ್‌ಗೆ ಸಂಬಂಧಿಸಿ ಜನರ ಸಮಸ್ಯೆ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ‘ಪಂಚಮಿತ್ರ’ ಎಂಬ ಕಾಲ್ ಸೆಂಟರ್ ಡಿಸೆಂಬರ್‌ನಿಂದ ಜಾರಿಗೆ ಬರಲಿದೆ. ಪಂಚಾಯತ್‌ಗಳು ಸರ್ಕಾರದ ಅನುದಾನದ ಜತೆಗೆ ಸಂಪನ್ಮೂಲ ಸೃಷ್ಟಿಗೆ ಆದ್ಯತೆ ನೀಡಬೇಕು ಎಂದರು.ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅವರು ಪಂಚಾಯತ್‌ರಾಜ್ ಅಧಿನಿಯಮದ 30 ವರ್ಷದ ಸಂಭ್ರಮದ ಬಗ್ಗೆ ಮಾತನಾಡಿ, ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಐದು ವರ್ಷ ಇರಬೇಕು ಹಾಗೂ ಮೀಸಲಾತಿ ಎರಡು ಬಾರಿಗೆ ಒಂದೇ ಇರಲಿ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಸ್ತಾವಿಕದಲ್ಲಿ, ಕೇರಳದಲ್ಲಿ ಇರುವಂತೆ ನಮ್ಮಲ್ಲಿಯೂ ಪಕ್ಷದ ಚಿಹ್ನೆಯಲ್ಲಿ ಗ್ರಾ.ಪಂ. ಚುನಾವಣೆ ನಡೆಸಬೇಕಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಸಚಿವ ರಮಾನಾಥ ರೈ ಅಭಿನಂದನಾ ಭಾಷಣ ಮಾಡಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ರಾಜ್ಯಸಭಾ ಮಾಜಿ ಸದಸ್ಯ ಇಬ್ರಾಹಿಂ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪಕ್ಷದ ಪ್ರಮುಖರಾದ ಮಿಥುನ್ ರೈ, ಇನಾಯತ್ ಆಲಿ, ರಕ್ಷಿತ್ ಶಿವರಾಂ, ಕೃಷ್ಣಪ್ಪ, ಪ್ರವೀಣ್‌ಚಂದ್ರ ಆಳ್ವ, ಎಂ.ಶಶಿಧರ ಹೆಗ್ಡೆ, ಪದ್ಮರಾಜ್ ಆರ್., ಜಿ.ಎ. ಬಾವ, ಬಿ.ಎಚ್.ಖಾದರ್, ಅಶ್ವಿನ್ ಕುಮಾರ್, ಶಾಲೆಟ್ ಪಿಂಟೋ, ಲುಕ್ಮಾನ್, ಸುಹಾನ್ ಆಳ್ವ ಮತ್ತಿತರರಿದ್ದರು.ಪಂಚಾಯತ್‌ರಾಜ್ ಸಮಸ್ಯೆಗಳ ಕುರಿತು ವಿವಿಧ ವಿಧಾನ ಸಭಾ ಕ್ಷೇತ್ರದ ಪ್ರಮುಖರಾದ ಶಾರದಾ ಬಿಳಿನೆಲೆ, ಜೋಸೆಫ್ ಕೆ.ಜೆ.ರಾಯ್, ನವೀನ್ ರೈ, ಜಗದೀಶ್ ಕೊಯಿಲ, ಹೈದರ್ ಕೈರಂಗಳ, ಹರಿಯಪ್ಪ, ರೇಖಾ ಶೆಟ್ಟಿ, ಮೊಹಮ್ಮದ್ ಬಡಗನ್ನೂರು, ಮಮತಾ ಗಟ್ಟಿ ವಿಚಾರ ಮಂಡಿಸಿದರು.
ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆ ದ.ಕ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಎಂ.ಎಸ್.ಮಹಮ್ಮದ್ ವಂದಿಸಿದರು. ಸಾಹುಲ್ ಹಮೀದ್ ಹಾಗೂ ಅಬ್ದುಲ್ ರಝಾಕ್ ಕುಕ್ಕಾಜೆ ನಿರೂಪಿಸಿದರು.